ನಿಯಂತ್ರಿತ ಗ್ರಾಮಗಳಿಗೆ ಡಿಸಿ-ಎಸ್ಪಿ ಭೇಟಿ

ದಾವಣಗೆರೆ, ಜೂ.13- ನಗರದ ಜಿಲ್ಲಾ ಚಿಗಟೇರಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಸ್ಥಿತಿ-ಗತಿಗಳ  ಪರಿಶೀಲನೆ, ಸೀಲ್‍ಡೌನ್ ಮಾಡಲಾದ ಗ್ರಾಮಗಳ ಪರಿಶೀಲನೆ, ಕೋವಿಡ್ ಸುರಕ್ಷಾ ಕ್ರಮಗಳ ಬಗ್ಗೆ ಜನಜಾಗೃತಿ, ಲಸಿಕೆ  ಕಾರ್ಯ ಚುರುಕುಗೊಳಿಸುವಂತೆ ಸೂಚನೆ, ಕೋವಿಡ್‍ನಿಂದ ಮೃತಪಟ್ಟ ಕುಟುಂಬಗಳಿಗೆ ಸಾಂತ್ವನ, ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸುವಂತೆ ರೌಡಿ ಶೀಟರ್‍ಗಳಿಗೆ ಖಡಕ್ ಎಚ್ಚರಿಕೆ, ಠಾಣೆಯ ಅಧಿಕಾರಿ, ಸಿಬ್ಬಂದಿಗಳ ಕುಂದು-ಕೊರತೆ ವಿಚಾರಣೆ.

ಇವೆಲ್ಲಾ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್  ಅವರುಗಳ ನೇತೃತ್ವದಲ್ಲಿ ಅಧಿಕಾರಿಗಳು ಭಾನುವಾರ ಕೈಗೊಂಡ ಕಾರ್ಯಗಳು.

ಜಿಲ್ಲಾಸ್ಪತ್ರೆ ಪರಿಶೀಲನೆ: ಡಿಸಿ, ಎಸ್ಪಿ, ಅವರುಗಳಲ್ಲದೇ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನವರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್ ಮತ್ತಿತರರೊಂದಿಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಅಲ್ಲಿನ ಕೋವಿಡ್-19 ಚಿಕಿತ್ಸಾ ವ್ಯವಸ್ಥೆ, ವಾಸ್ತವತೆಯನ್ನು ಪರಿಶೀಲನೆ ನಡೆಸಿದರು.

ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ  ಸೇರಿದಂತೆ ಅಲ್ಲಿನ ಸ್ಥಿತಿ ಗತಿಗಳನ್ನು ಕೂಲಂಕುಶವಾಗಿ ಪರಾಮರ್ಶಿಸಿ ಡಿಹೆಚ್‍ಓ ಡಾ. ನಾಗರಾಜ್ ಮತ್ತು ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ. ಜಯಪ್ರಕಾಶ್ ಅವರೊಂದಿಗೆ ಚರ್ಚೆ ನಡೆಸಿದರು. 

ಕೊರೊನಾ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆ ಯಲ್ಲಿ ರೋಗಿಗಳ ಮೇಲ್ವಿಚಾರಣೆ ಮಾಡುತ್ತಿರುವ ಸಂಬಂಧಿ ಕರು ಅನಗತ್ಯವಾಗಿ ಓಡಾಡುವುದನ್ನು ನಿರ್ಬಂಧಿಸುವಂತೆ ಆಸ್ಪತ್ರೆಯ ಅಧೀಕ್ಷಕರಿಗೆ ಎಸ್ಪಿ ಸೂಚಿಸಿದರು.

ಆಸ್ಪತ್ರೆಯ ಎಲ್ಲಾ ವಾರ್ಡ್‍ಗಳನ್ನು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಹಿಂಭಾಗವಿರುವ ತುರ್ತು ಚಿಕಿತ್ಸಾ ಕೊಠಡಿ, ಕೋವಿಡ್ ಫ್ಲೂ ಕೊಠಡಿ ವೀಕ್ಷಿಸಿ ನೆರೆದಿದ್ದವರೊಂದಿಗೆ ಚರ್ಚಿಸಿದರು.

ಆಕ್ಸಿಜನ್ ಸರಬರಾಜಾಗುವ ಕೊಠಡಿಗೆ ತೆರಳಿ ಜಂಬೋ ಸಿಲಿಂಡರ್‍ಗಳ ಸಂಖ್ಯೆ, ಅವುಗಳ ಕಾರ್ಯ ನಿರ್ವಹಣೆ ಬಗ್ಗೆ ತಿಳಿದರು. ನಂತರ ಆಸ್ಪತ್ರೆಯ ಆವರಣದಲ್ಲಿನ ಆಕ್ಸಿಜನ್ ಶೇಖರಣಾ ಘಟಕ ಬಳಿ ತೆರಳಿ ಎಷ್ಟು ಆಕ್ಸಿಜನ್ ಇದೆ ಮತ್ತು ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನೂ ವೀಕ್ಷಿಸಿ ವೈದ್ಯರಿಗೆ ಸಲಹೆ ನೀಡಿದರು.

ರೋಗಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಅಗತ್ಯ ಕ್ರಮಗಳನ್ನು ವಹಿಸುವಂತೆ ಎಸ್ಪಿ ಮತ್ತು ಡಿಸಿ ಆಸ್ಪತ್ರೆಯ ವೈದ್ಯರಿಗೆ ತಾಕೀತು ಮಾಡಿದರು. ಈ ಸಂದರ್ಭದಲ್ಲಿ ಡಾ. ಶಶಿಧರ್ ಸೇರಿದಂತೆ ಆಸ್ಪತ್ರೆಯ ವೈದ್ಯರು ಇದ್ದರು.

ಸೀಲ್‍ಡೌನ್ ಗ್ರಾಮಗಳಿಗೆ ಭೇಟಿ: ದಾವಣಗೆರೆ ಗ್ರಾಮಾಂತರ ಉಪವಿಭಾಗದ ವ್ಯಾಪ್ತಿಯಲ್ಲಿ  ಸೀಲ್‍ಡೌನ್ ಮಾಡಲಾದ ಗ್ರಾಮಗಳಾದ ಕೈದಾಳೆ, ಕುರ್ಕಿ, ಕುಕ್ಕುವಾಡ ಗ್ರಾಮಗಳಿಗೆ ಎಸ್ಪಿ ಹಾಗೂ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ ತಂಡ ಸಹಿತ ಭೇಟಿ ನೀಡಿ ಪರಿಶೀಲಿಸಿದರು.  ಕೋವಿಡ್ ಸುರಕ್ಷಾ ಕ್ರಮಗಳನ್ನು ಪಾಲಿಸುವಂತೆ ಗ್ರಾಮಸ್ಥರಿಗೆ ತಿಳಿಸಿದರು. ಗ್ರಾಮದ ಜನತೆಗೆ ಲಸಿಕೆ ನೀಡುವ ಕಾರ್ಯ ಚುರುಕು ಗೊಳಿಸುವಂತೆ ಡಿಹೆಚ್‍ಓ ಡಾ. ನಾಗರಾಜ್ ಅವರಿಗೆ ಸೂಚಿಸಿದರು. ಕೋವಿಡ್‍ನಿಂದ ಮೃತಪಟ್ಟವರ ಮನೆಗಳಿಗೆ ತೆರಳಿ ಕುಟುಂಬಗಳಿಗೆ ಸಾಂತ್ವನ ಹೇಳಿದರು.

error: Content is protected !!