ದಾವಣಗೆರೆ, ಜೂ.13- ಗ್ರಾಮೀಣ ಪ್ರದೇಶದಲ್ಲಿ ಹೆಮ್ಮಾರಿ ಕೊರೊನಾ ನಿಯಂತ್ರಣಕ್ಕಾಗಿ 10 ಕ್ಕಿಂತ ಹೆಚ್ಚು ಕೋವಿಡ್ ಸಕ್ರಿಯ ಪ್ರಕರಣಗಳು ಇರುವ ಗ್ರಾಮಗಳನ್ನು ನಿಯಂತ್ರಣ ವಲಯಗಳೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಘೋಷಣೆ ಮಾಡಿದ ಕೆಲವೇ ತಾಸುಗಳಲ್ಲಿ ಸೀಲ್‌ಡೌನ್ ಮಾಡಲಾಯಿತು.
ಅಣಬೇರು ಗ್ರಾಮದಿಂದ ಹೊರ ಹಾಗೂ ಒಳ ಸಂಪರ್ಕಿಸುವ ರಸ್ತೆಗಳನ್ನು ಜೆಸಿಬಿ ಮೂಲಕ ಕಾಂಕ್ರೀಟ್ ಮೋಲ್ಡ್‌ಗಳನ್ನು ಹಾಕಿ ಬಂದ್ ಮಾಡಿರುವ ಗ್ರಾಮ ಪಂಚಾಯಿತಿ ಪಿಡಿಓ ಮಹೇಶ್ ಹಾಗೂ ಸಿಬ್ಬಂದಿಯವರು, ಗ್ರಾಮದಲ್ಲಿ ಯಾರೂ ಅನಾವಶ್ಯಕವಾಗಿ ಓಡಾಡಬೇಡಿ ಮತ್ತು ಗ್ರಾಮಕ್ಕೆ ಹೊರಗಿನ ವ್ಯಕ್ತಿಗಳ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಮೈಕ್ ಮೂಲಕ ಗ್ರಾಮದ ತುಂಬೆಲ್ಲಾ ಪ್ರಚಾರ ಪಡಿಸಿದ್ದಾರೆ.
ಅಣಬೇರು ಗ್ರಾಮವನ್ನು ಸಂಪರ್ಕಿಸುವ ಬಾಡ, ಮಾಯಕೊಂಡ ಹಾಗು ಮತ್ತಿತರೆ ರಸ್ತೆಗಳನ್ನು ಬಂದ್ ಮಾಡಲಾಗಿದ್ದು ಗ್ರಾಮಸ್ಥರಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಪಿಡಿಓ ಮಹೇಶ್ ತಿಳಿಸಿದ್ದಾರೆ.
ಅಣಬೇರು ಗ್ರಾಮದಲ್ಲಿ ಇಂದಿನವರೆಗೆ 17 ಸಕ್ರಿಯ ಕೇಸ್‌ಗಳು ದಾಖಲಾಗಿವೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ರುದ್ರಪ್ಪ, ಗ್ರಾಮ ಪಂಚಾಯ್ತಿ ಸದಸ್ಯರುಗಳಾದ ಮಹದೇವಪ್ಪ, ಬುಡೇನ್‌ಸಾಬ್, ಅನಿಲ್‌ಕುಮಾರ್, ಊರಿನ ಮುಖಂಡರುಗಳಾದ ಕೆ.ಸಿ. ರಾಜಪ್ಪ, ಮಾಳಿಗೇರ ಶಿವಣ್ಣ, ಚೌಡಪ್ಪ, ಗ್ರಾಮ ಲೆಕ್ಕಾಧಿಕಾರಿ ರಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.