ಜನರ ಆರೋಗ್ಯದ ಕಡೆ ಗಮನ ಹರಿಸದ ಪ್ರಧಾನಿ ಮೋದಿ

ಜನರ ಆರೋಗ್ಯದ ಕಡೆ ಗಮನ ಹರಿಸದ ಪ್ರಧಾನಿ ಮೋದಿ - Janathavaniಜಿ.ಪಂ. ಮಾಜಿ ಅಧ್ಯಕ್ಷ ಡಾ. ವೈ. ರಾಮಪ್ಪ ಆಕ್ರೋಶ

ದಾವಣಗೆರೆ, ಜೂ.14 – ಜನರ ಆರೋಗ್ಯದ ಕಡೆ ಗಮನ ಹರಿಸದೇ ನಿರ್ಲಕ್ಷ್ಯ ಮನೋಭಾವ ತಾಳಿ, ಮಾರಣ ಹೋಮದ ಮೂಲಕ ಶೋಷಣೆಯ ಶೃಂಗಾರವನ್ನು ಸೃಷ್ಟಿಸಿದಂತಹ ಏಕೈಕ ಸರ್ಕಾರ ನರೇಂದ್ರ ಮೋದಿಯದ್ದು ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ವೈ ರಾಮಪ್ಪ ಆಕ್ರೋಶ ವ್ಯಕ್ತಪಡಿಸಿದರು.

ತೈಲ ಬೆಲೆ ಏರಿಕೆ ಕುರಿತಾದ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ 3ನೇ ದಿನವೂ ಮುಂದುವರೆದಿದ್ದು, ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ಬಸವಾಪಟ್ಟಣ ಬ್ಲಾಕ್ ಸಾಗರಪೇಟೆಯಲ್ಲಿ ಇಂದು ಏರ್ಪಾಡಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ ತೈಲ ಬೆಲೆ ಒಂದೆರಡು ರೂಪಾಯಿ ಜಾಸ್ತಿಯಾದಾಗ ಬಿಜೆಪಿಯವರು ಬೊಬ್ಬೆ ಹೊಡಿಯುತ್ತಿದ್ದರು. ಆದರೆ, ಕೇಂದ್ರದ ಬಿಜೆಪಿ ಸರ್ಕಾರ ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ 42ಕ್ಕೂ ಹೆಚ್ಚು ಬಾರಿ ಬೆಲೆ ಏರಿಕೆ ಮಾಡಿದೆ ಎಂದು ಅವರು ಕಿಡಿಕಾರಿದರು.

ಇಂಧನ ಬೆಲೆಯನ್ನು ಹೆಚ್ಚಿಸಿ ಸುಮಾರು 21ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹಿಸಿದೆ. ಕೇಂದ್ರ ಸರ್ಕಾರ ತನ್ನ ಆದಾಯ ಹೆಚ್ಚಿಸಿಕೊಳ್ಳಲು ಜನರು ಬಳಸುವ ದೈನಂದಿನ ಪದಾರ್ಥಗಳ ಬೆಲೆಯನ್ನು ಹೆಚ್ಚಿಸುತ್ತಾ ಜನಸಾಮಾನ್ಯರ ರಕ್ತ ಹೀರುವ ಕೃತ್ಯಕ್ಕೆ ಮುಂದಾಗಿದೆ. ಇಡೀ ದೇಶಾದ್ಯಂತ ಇಂಧನ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಸಹ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಹೆಚ್ಚಾಗಿರುವ ಕಾರಣ ಇಂಧನ ಬೆಲೆ ಏರಿಕೆಯಾಗಿರುತ್ತದೆ ಎಂಬ ಕೇಂದ್ರ ಸರ್ಕಾರದ ಸಮರ್ಥನೆ ಖಂಡನೀಯ ಎಂದರು.

ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟ, ಶ್ರೀ ಸಾಮಾನ್ಯನ ಬದುಕನ್ನು ಹಸನಗೊಳಿಸಿದ ಕಾಂಗ್ರೆಸ್ ಪಕ್ಷದ ಸರ್ಕಾರ ಇಂತಹ ಹೀನಾ ಕೃತ್ಯಗಳಿಗೆ ಕೈ ಹಾಕಿರಲಿಲ್ಲ. ಡಾ. ಮನ್ ಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಯಾಗಿದ್ದಾಗ ಜಾರಿಗೆ ಬಂದ ಮಹತ್ವಾಕಾಂಕ್ಷೆಯ ಯೋಜನೆಯಾದ ನರೇಗಾ ಜನರ ಬದುಕಿಗೆ ಜೀವಸೆಲೆಯಾಗಿ ಮಾರ್ಪಟ್ಟಿತು. ವಲಸೆ  ಕಾರ್ಮಿಕರಿಗೆ ಈ ಯೋಜನೆ ಅತೀ ಮುಖ್ಯ ಜೀವಸೆಳೆಯಾಗಿ ಪರಿಣಮಿಸಿತು. ಈ ಯೋಜನೆಯನ್ನು ಗುಜರಾತಿನ ಮುಖ್ಯಮಂತ್ರಿಯಾದಿಯಾಗಿ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಕೂಡ ಶ್ಲ್ಯಾಘಿಸಿದ್ದಾರೆ. ಜಗತ್ತಿನ ಕಣ್ಣು ತೆರೆಸಿದ ಉತ್ತಮ ಯೋಜನೆ ಇದಾಗಿರುತ್ತದೆ ಎಂದು ಅವರು ಹೇಳಿದರು.

ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್, ವಿದ್ಯುತ್ ಸಮಸ್ಯೆ, ಬಡತನ, ನಿರುದ್ಯೋಗವನ್ನು ನಿಭಾಯಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿಫಲವಾಗಿದೆ. ಇದೊಂದು ವಿಫಲವಾದ ಬಿಜೆಪಿ ಪಕ್ಷದ ಜೀವಂತ ಸ್ಮಾರಕವಾಗಿದೆ. ಕೋವಿಡ್ ನಿರ್ವಹಣೆಯಲ್ಲಿ ಭಾರತದಲ್ಲಿ ನಾಯಕತ್ವದ ಬಿಕ್ಕಟ್ಟು ಮತ್ತು ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಪ್ರಧಾನ ಮಂತ್ರಿಯ ಆಡಳಿತದ ಅಸಮರ್ಥತೆಯನ್ನು ಇಡೀ ಜಗತ್ತು ಕಂಡಿದೆ ಎಂದು ಅವರು ಜರಿದರು.

ಕೋವಿಡ್ ಎರಡನೇ ಅಲೆ ಅಪ್ಪಳಿಸುವ ಪೂರ್ವದಲ್ಲಿ ಜಗತ್ತಿನ ಎಲ್ಲಾ ಆರೋಗ್ಯ ತಜ್ಞರು ಕೊರೊನಾ ಎಚ್ಚರಿಕೆಯ ಸಂದೇಶ ನೀಡಿದ್ದರೂ ಸಹ ಇವರ ವರದಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಲಕ್ಷಾಂತರ ಜನರ ಸಾವಿಗೆ ಕೇಂದ್ರ ಸರ್ಕಾರ ಕಾರಣವಾಗಿದೆ ಎಂದು ದೂರಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್ ಹೂವಿನಮಾಡು, ಚನ್ನಬಸಪ್ಪ, ಜಹೀರ್ ಪಾಟೀಲ್, ಕೆ‌.ಎಸ್ ಬಸವರಾಜ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸೈಯ್ಯದ್, ರಮೇಶ್, ಓಂಕಾರನಾಯ್ಕ್, ಹಾಲೇಶ್, ಚಂದ್ರಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!