ಪ್ರಕೃತಿಯಾಗದಿರಲಿ ವಿಕೃತಿ

ಜಗದ ಜೀವರಾಶಿಗಳ ಪೊರೆಯುವ ಶಕ್ತಿಯಿರುವುದು ಪ್ರಕೃತಿಗೆ ಮಾತ್ರ. ಪ್ರತಿಯೊಂದು ಜೀವಿಯ ಸೃಷ್ಟಿಯ ಮೂಲವೇ ಪಂಚಭೂತಗಳು. ಈ ಪಂಚಭೂತಗಳ ಪ್ರತಿರೂಪವೇ ಪ್ರಕೃತಿ.

ಜಗತ್ತಿನ ಜೀವರಾಶಿಗಳಲ್ಲಿಯೇ ಬುದ್ಧಿವಂತ ಜೀವಿಯಾದ ಮಾನವನು ತಾನು ಬದುಕಿ ಬಾಳಲು ಪ್ರಕೃತಿಯಲ್ಲಿ ದೊರೆಯುವ ಗಾಳಿ, ನೀರು, ಮಣ್ಣು, ಖನಿಜಗಳು, ಗಿಡ ಮರಗಳು, ಪ್ರಾಣಿಪಕ್ಷಿಗಳು, ಹೀಗೆ ಹಲವಾರು ಸಂಪನ್ಮೂಲಗಳ ಮೇಲೆ ಅವಲಂಬಿತನಾಗಿದ್ದಾನೆ. 

ಮಹಾತ್ಮ ಗಾಂಧೀಜಿಯವರ ಹೇಳುವಂತೆ “ಪ್ರಕೃತಿಯು ಮಾನವನ ಆಸೆಗಳನ್ನು ಪೂರೈಸಬಹುದೇ ವಿನಃ ಅವನ ದುರಾಸೆಗಳನ್ನಲ್ಲ”. ಈ ತತ್ವವನ್ನು ಅರಿಯದ ಬುದ್ಧಿವಂತ ಮಾನವನು ಅನಾಗರಿಕತನದಿಂದ ವರ್ತಿಸುತ್ತಾ, ಪ್ರಕೃತಿಯ ಸಿರಿ ಸಂಪತ್ತನ್ನು ಲೂಟಿ ಮಾಡಿ ವಿಕೃತಿಗೊಳಿಸಿ, ದುರಂತಗಳಿಗೆ ಎಡೆಮಾಡಿಕೊಟ್ಟಿದ್ದಾನೆ. 

ಜಾಗತಿಕವಾಗಿ ಹೆಚ್ಚುತ್ತಿರುವ ಜನಸಂಖ್ಯಾ ಏರಿಕೆ ಮತ್ತು ವಿವೇಕ ರಹಿತವಾದ ನೈಸರ್ಗಿಕ ಸಂಪನ್ಮೂಲಗಳ ಬಳಕೆಯು ಪ್ರಕೃತಿಯ ಮೇಲೆ ಒತ್ತಡವನ್ನು ಹೆಚ್ಚು ಮಾಡಿ ಭೂಕಂಪ, ಜ್ವಾಲಾಮುಖಿ, ಸುನಾಮಿ, ಕಾಡ್ಗಿಚ್ಚು, ಚಂಡಮಾರುತ, ಸಾಂಕ್ರಾಮಿಕ ರೋಗಗಳಿಗೆ ಬಲಿಪಶುವಾಗಿದ್ದಾನೆ.  

ಇಂತಹ ಜ್ವಲಂತ ಸಮಸ್ಯೆಗಳಿಂದ ಪಾರಾಗಲು, ಜನರಲ್ಲಿ ಜಾಗೃತಿ ಮೂಡಿಸಲು, ಪ್ರತಿ ವರ್ಷ ಜೂನ್ 05 ರಂದು ವಿಶ್ವ ಪರಿಸರ ದಿನಾಚರಣೆ,  ಜುಲೈ 28 ರಂದು ವಿಶ್ವ ಪ್ರಕೃತಿ ಸಂರಕ್ಷಣಾ ದಿನಗಳನ್ನು ಆಚರಿಸಲಾಗುತ್ತದೆ. ಆದರೆ ಈ ಆಚರಣೆಗಳು ಆಚರಣೆಗಳಾಗಿ ಉಳಿಯದೇ ಕಾರ್ಯಗತವಾಗಬೇಕು.

ಸಕಲ ಜೀವರಾಶಿಗಳ ಪೊರೆಯುವ ಪ್ರಕೃತಿಯನು ವಿಕೃತಿಯಾಗದಂತೆ ನಾವು ನೋಡಿ ಕೊಳ್ಳಬೇಕಾದರೆ ಪಂಚಸೂತ್ರ ನಿಯಮಗಳಾದ ಆರ್ (R) ಪ್ರತಿಯೊಬ್ಬರು ಪಾಲಿಸಬೇಕಾಗಿದೆ. 

* ನಿರಾಕರಣೆ :  ಪರಿಸರಕ್ಕೆ ಹಾನಿಕಾರಕವಾದ ಅನಗತ್ಯ ವಸ್ತುಗಳ ಬಳಕೆಯನ್ನು ನಿರಾಕರಿಸುವುದು.  

* ಮಿತಬಳಕೆ :  ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳ ಮಿತ ಬಳಕೆ ಮಾಡುವುದು. 

* ಮರುಬಳಕೆ :  ಬಳಸಿದ ವಸ್ತುಗಳನ್ನೇ ಮತ್ತೆ ಮತ್ತೆ ಮರು ಬಳಸುವುದು. 

* ಮರು ಉದ್ದೇಶ‌ :  ಒಂದು ವಸ್ತುವನ್ನು ಅದರ ಮೂಲ ಉದ್ದೇಶಕ್ಕೆ ಬಳಸಲು ಸಾಧ್ಯವಾಗದೇ ಇದ್ದಾಗ, ಅದರ ಬದಲಾಗಿ ಬೇರೆಯ ಮರು ಉದ್ದೇಶಕ್ಕೆ ಬಳಸುವುದು. 

* ಮರುಚಕ್ರೀಕರಣ : ಸಂಪನ್ಮೂಲಗಳ ತ್ಯಾಜ್ಯವನ್ನು ಮರುಸಂಕರಣೆ ಮಾಡಿ ಬಳಸುವುದು.

ಈ ಐದು ಸೂತ್ರಗಳ ಮೂಲಕ ನಾವು ಪ್ರಕೃತಿಯನ್ನು ರಕ್ಷಿಸಬಹುದು. ಇದರ ಜೊತೆಗೆ ಅರಣ್ಯ ನಾಶ ಮಾಡದೇ, ನೆಲ-ಜಲ-ಗಾಳಿಯ ಮಲಿನಗೊಳಿಸದೆ, ಕೈಗಾರೀಕಿಕರಣ, ನಗರೀಕರಣ, ಆಧುನೀಕರಣಗಳ ಭರಾಟೆಯಲ್ಲಿ ಯಾಂತ್ರಿಕ ಜೀವನಕ್ಕೆ ಮಾರುಹೋಗಿ, ವಿಲಾಸಿ ಜಾಹೀರಾತು ಗಳಿಗೆ ಮರುಳರಾಗದೇ, ಪ್ರಕೃತಿಯನ್ನು ರಕ್ಷಣೆ ಮಾಡಿದಾಗ ಮಾತ್ರ ನಾವು ನಮ್ಮ ಮುಂದಿನ ಪೀಳಿಗೆಯು ನೆಮ್ಮದಿಯ ಜೀವನವನ್ನು ಕಾಣಬಹುದು.


ಶಿವಮೂರ್ತಿ.ಹೆಚ್., ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಸಿಯಲ್
ಸ್ಕೂಲ್, ಅನುಭವ ಮಂಟಪ, ದಾವಣಗೆರೆ.
[email protected]

error: Content is protected !!