ಗೊಬ್ಬರ, ಬೀಜದ ಕೃತಕ ಕೊರತೆ ಮಾಡಿದರೆ ಕ್ರಮ

ಗೊಬ್ಬರ, ಬೀಜದ ಕೃತಕ ಕೊರತೆ ಮಾಡಿದರೆ ಕ್ರಮ - Janathavaniದಾವಣಗೆರೆ, ಜೂ. 8 – ಬಿತ್ತನೆ ಬೀಜ ಹಾಗೂ ರಸ ಗೊಬ್ಬರದ ಕೊರತೆಯಾಗ ದಂತೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಂಡಿದೆ. ಕೃತಕವಾಗಿ ಬೀಜ ಹಾಗೂ ರಸಗೊಬ್ಬರದ ಕೊರತೆ ಮಾಡುವ ವರ್ತಕರ ವಿರುದ್ಧ ಪ್ರಕರಣಗಳನ್ನು ದಾಖಲಿಸುವ ಜೊತೆಗೆ ಮಾರಾಟದ ಅನುಮತಿ ರದ್ದುಗೊಳಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ದಲ್ಲಿ  ಮುಂಗಾರು ಸಿದ್ಧತೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಈಗಾಗಲೇ ರಾಜ್ಯದಲ್ಲಿ 87,629 ಕ್ವಿಂಟಾಲ್‌ ಬಿತ್ತನೆ ಬೀಜವನ್ನು ವಿತರಿಸಲಾಗಿದ್ದು, ಇನ್ನೂ 1.63 ಲಕ್ಷ ಕ್ವಿಂಟಾಲ್‌ ಬಿತ್ತನೆ ಬೀಜ ದಾಸ್ತಾನಿದೆ. ಬಿತ್ತನೆ ಬೀಜಕ್ಕಾಗಿ ಮೊದಲು 50 ಕೋಟಿ ರೂ. ಸಬ್ಸಿಡಿ ಬಿಡುಗಡೆ ಮಾಡಿದ್ದು, ಕಳೆದ ಭಾನುವಾರ ಇನ್ನೂ 30 ಕೋಟಿ ರೂ. ಸಬ್ಸಿಡಿ ಬಿಡುಗಡೆ ಮಾಡಲಾಗಿದೆ ಎಂದರು.

 ದಾವಣಗೆರೆ ಜಿಲ್ಲೆಯಲ್ಲಿ ಕಳಪೆ ಗುಣಮಟ್ಟದ ಜೈವಿಕ ಕೀಟನಾಶಕ ಪೂರೈಸಿದ 59 ಪ್ರಕರಣಗಳನ್ನು ಪತ್ತೆಹಚ್ಚಿ, ಮೊಕದ್ದಮೆ ಹೂಡಲಾಗಿದೆ, ಕೃಷಿ ಪರಿಕರ ಮಾರಾಟ ಮಾಡುವ 10 ಅಂಗಡಿಗಳ ಲೈಸೆನ್ಸ್ ರದ್ದುಪಡಿಸಲಾಗಿದೆ ಎಂದವರು ಹೇಳಿದರು.

ಸೆಣಬು ಹಾಗೂ ಹಸಿರೆಲೆ ಗೊಬ್ಬರಕ್ಕೆ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರ 5 ಕೋಟಿ ರೂ. ಬಿಡುಗಡೆ ಮಾಡುತ್ತಿದೆ ಎಂದವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಈ ವರ್ಷ 120 ಮಿ.ಮೀ. ವಾಡಿಕೆ ಮಳೆ ಬದಲಿಗೆ, 203 ಮಿ.ಮೀ. ಹೆಚ್ಚು ಮಳೆ ಯಾಗಿದೆ.  ಮುಂಗಾರು ಹಂಗಾಮಿನಲ್ಲಿ 2.43 ಲಕ್ಷ ಹೆಕ್ಟೇರ್‌ ಬಿತ್ತನೆ ಕ್ಷೇತ್ರದ ಗುರಿ ಇದ್ದು, ಈವರೆಗೆ 8002 ಹೆಕ್ಟೇರ್‌ ಬಿತ್ತನೆಯಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಈಗಾಗಲೇ ಅಂತರ ಬೆಳೆ ಅಭಿಯಾನವನ್ನು ಆರಂಭಿಸಲಾಗಿದೆ.  ಜಿಲ್ಲೆಯಲ್ಲಿ 5 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ತೊಗರಿ ಬೆಳೆಯ ಲಾಗುತ್ತಿತ್ತು.  ಈ ವರ್ಷ ಒಟ್ಟು 16 ಸಾವಿರ ಹೆಕ್ಟೇರ್‌ನಲ್ಲಿ ತೊಗರಿಯನ್ನು ಅಂತರ ಬೆಳೆಯಾಗಿಸಲು ಗುರಿ ಹೊಂದಿದ್ದು, ಸುಮಾರು 1 ಲಕ್ಷ ಕ್ವಿಂಟಾಲ್‌ ತೊಗರಿ ಉತ್ಪಾದನೆಯ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ರೈತರಿಗೆ ಯಾವುದೇ ಬಗೆಯ ಬೀಜ ಹಾಗೂ ಗೊಬ್ಬರದ ಕೊರತೆಯಾಗದಂತೆ, ರೈತರಿಗೆ ಯಾವುದೇ ಅನಾನುಕೂಲವಾಗದಂತೆ ಕೃಷಿ ಸಾಮಗ್ರಿ ಪೂರೈಕೆಗೆ ಸರ್ಕಾರ ಬದ್ಧವಿದೆ ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಉಪಯುಕ್ತ ಯೋಜನೆಯಾಗಿದ್ದು, ಅಧಿಕಾರಿಗಳು ಯೋಜನೆಯನ್ನು ಹೆಚ್ಚು ಜನರಿಗೆ ತಲುಪಿಸಬೇಕು. ಒಂದು ವರ್ಷ ಹಣ ಬಂದಿಲ್ಲ ಎಂಬ ಕಾರಣಕ್ಕಾಗಿ ಜನ ಕಂತು ಕಟ್ಟುವುದನ್ನು ನಿಲ್ಲಿಸಬಾರದು ಎಂದರು.

ಸಭೆಯಲ್ಲಿ ಶಾಸಕರಾದ ಎಸ್.ಎ. ರವೀಂದ್ರನಾಥ್, ಮಾಡಾಳ್ ವಿರುಪಾಕ್ಷಪ್ಪ, ಎಸ್.ವಿ. ರಾಮಚಂದ್ರ, ಪ್ರೊ. ಲಿಂಗಣ್ಣ, ಮಹಾನಗರಪಾಲಿಕೆ ಮೇಯರ್‌ ಎಸ್.ಟಿ. ವೀರೇಶ್, ಕೃಷಿ ಇಲಾಖೆ ಅಪರ ಆಯುಕ್ತ ವೆಂಕಟರಾವ್ ಪಾಟೀಲ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್, ಎಸ್ಪಿ  ಹನುಮಂತರಾಯ ಮತ್ತಿತರರು ಉಪಸ್ಥಿತರಿದ್ದರು.

error: Content is protected !!