ಏನಣಾ ಒಂದು ನಾಲ್ಕೈದು ದಿನಾ ಆತು ಫೋನೇ ಮಾಡಿರಲಿಲ್ಲ?
ಏನು ಮಾಡೋದು ತಮ್ಮಾ ಈಗ ರಾತ್ರಿಯಲ್ಲಾ ನಿದ್ದೇಗೆಡದೇ ಆಗೇತಿ. ವಿಚಾರ ಮಾಡೀ ಮಾಡೀ ತಲೆ ಕೆಟ್ಟು ಹೋಗೇತಿ.
ಅದು ಯಾರಣ್ಣಾ ನಿದ್ದೆ ಕೆಡಿಸಿದವರು!?
ಅದೇ ಆ ಗೌತಮ ಬುದ್ಧ!
ಬುದ್ಧ ಭಗವಾನ! ಅವರು ನಿನ್ನ ನಿದ್ದೆ ಹೆಂಗೆ ಕೆಡಿಸಿದರು?
ಬುದ್ಧ ಪೂರ್ಣಿಮಾ ದಿನ ನಾನು ಬುದ್ಧನನ್ನು ಪ್ರಾರ್ಥಿಸಿದೆ. ಅಪಾ ಪುಣ್ಯಾತ್ಮ ಹೆಂಗಾರ ಮಾಡಿ ಈ ಕೊರೊನಾ ಕತ್ತಲ ಕಳಿಯಪಾ ಎಂದು ಬೇಡಿಕೊಂಡೆ. ಅವತ್ತು ರಾತ್ರಿ ಆಸಾಮಿ ಕನಸನಲ್ಲಿ ಬಂದು ಬಿಡೋದಾ!
ಹೌದಾ! ನಿನ್ನ ಕನಸಿನ್ಯಾಗೆ. ಬಂದು ಏನಂದರು?
ನೋಡಪಾ. ಕೊರೊನಾ ಕತ್ತಲು ಕಳಿಯೋದು ನನ್ನ ಕೈಲಿಲ್ಲಾ. ನಿಮ್ಮ ಕೈಯಲ್ಲೇ ಇರೋದು ಅಂದಾ!
ಅದೆಂಗೆ ನಮ್ಮ ಕೈಲಿ ಐತಂತೆ?
ಅದೇ, ಫೋನ್ ಮಾಡಿದಾಗಲೆಲ್ಲಾ ಆ ಹೆಣ್ಣು ಮಗಳು ಒದರುಕೆಂತಳಲಾ…ಮಾಸ್ಕ್ ಹಾಕ್ಯಳ್ರೀ, ಸೋಪ್ ಹಚ್ಕೆಳ್ರೀ.. ಅಂತರ ಕಾಪಾಡ್ರೀ, ಗುಂಪು ಸೇರಬೇಡಿ ಅಂತಾ. ಇದನ್ನೇ ಅವನೂ ಹೇಳಿದಾ!
ಅಯ್ಯೋ ಇದನ್ನ ಹೇಳೋಕೆ ಬುದ್ಧ ಬರಬೇಕೇನು?
ನಾನೂ ಅದನ್ನೇ ಕೇಳಿದೆ. ಅದಕ್ಕವನು ನಾನು ಬಂದಿದ್ದು ಬೇರೆ ವಿಷಯ ಹೇಳೋಕೆ ಅಂದಾ!
ಏನು ವಿಷಯಾ?
ನೋಡಪಾ. ಎಲ್ಲರೂ ಸರಿಯಾದ ನಿಯಮವನ್ನು ಪಾಲಿಸಿದ ಮೇಲೆ, ಲಸಿಕೆ ಹಾಕಿಸಿಕೊಂಡ ಮೇಲೆ, ಕೊರೊನಾ ಕಾಟ ಕಡಿಮೆಯಾಗಿ ನಿಮ್ಮ ದುಡಿಮೆ ಚೆನ್ನಾಗಿ ಆಗುತ್ತೆ. ಆದರೇ, ನೀವು ಈ ಮುಖ್ಯವಾದ ವಿಷಯಕ್ಕೆ ಗಮನ ಕೊಡಬೇಕು.
ಯಾವುದಕ್ಕೇ?
ಅನಾದಿ ಕಾಲದಿಂದಾ ಇರುವ, ಕೊರೊನಾಕ್ಕಿಂತಾ ಭಯಂಕರ ವೈರಸ್ಸಿನ ಬಗ್ಗೆ. ಕೊರೊನಾ ಬರೀ ಮನುಷ್ಯನನ್ನ ಕೊಲ್ಲುತ್ತೆ. ಆದರೆ, ಈ ಮೂರೂ ವೈರಸ್ಸೂ ಮನುಷ್ಯತ್ವವನ್ನೇ ಕೊಲ್ಲುತ್ತವೆ ಎಂದ!
ಅವು ಯಾವ ವೈರಸ್ ಅಂತಪಾ?
ಒಂದು ಮತಾಂಧತೆ.
ಇನ್ನೆರಡು?
ಪ್ರತಿಷ್ಠೆ ಮತ್ತು ದ್ವೇಷ!!!