ದಾವಣಗೆರೆ, ಆ.3- ಕೋವಿಡ್-19 ಸಂಭಾವ್ಯ ಮೂರನೇ ಅಲೆ ನಿರ್ವಹಿಸುವ ನಿಟ್ಟಿನಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಆ.31 ರವರೆಗೆ ಅಥವಾ ಮುಂದಿನ ಆದೇಶದವರೆಗೆ ಜಿಲ್ಲೆಯ ಎಲ್ಲಾ ಮುಜರಾಯಿ ದೇವಾಲಯಗಳು ಮತ್ತು ಖಾಸಗಿ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದ್ದು, ಶನಿವಾರ ಮತ್ತು ಭಾನುವಾರಗಳಂದು ಭಕ್ತಾದಿಗಳ ದೇಗುಲ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶ ಹೊರಡಿಸಿದ್ದಾರೆ.
ರಾತ್ರಿ ಕರ್ಫ್ಯೂ: ಕಟ್ಟು ನಿಟ್ಟಿನ ಜಾರಿ
ಪ್ರತಿದಿನ ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ ಹಾಗೂ ದೇವಾಲಯಗಳಲ್ಲಿ ಜನಸಂದಣಿ ನಿಯಂತ್ರಣವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸ್ಥಳೀಯ ಪ್ರಾಧಿಕಾರಿಗಳು ಜನಸಂದಣಿ ತಡೆಯಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಿದೆ. ಅಗತ್ಯವಾದರೆ ಪ್ರತಿನಿತ್ಯ ಸ್ವತಃ ಎಸ್ಪಿ ಜೊತೆ ಸೇರಿ ಅಭಿಯಾನ ನಡೆಸುವುದಾಗಿ ಅವರು ಹೇಳಿದರು.
ಭಕ್ತಾದಿಗಳಿಗೆ ದೇವಾಲಯದ ಪ್ರವೇಶ ಹಾಗೂ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಿದ್ದು ಉತ್ಸವ, ಸೇವೆ, ಮಡಿ, ಪ್ರಸಾದ, ದಾಸೋಹ ಇತ್ಯಾದಿಗಳನ್ನು ನಿಷೇಧಿಸಿದೆ. ಶನಿವಾರ ಮತ್ತು ಭಾನುವಾರಗಳಂದು ಅರ್ಚಕರುಗಳಿಂದ ಸಾಂಪ್ರಾದಾಯಿಕ ಪೂಜೆಗೆ ಮಾತ್ರ ಅವಕಾಶ ಕಲ್ಪಿಸಿ, ಭಕ್ತಾದಿಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.