ಸಿದ್ಧಗಂಗಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಆಮ್ಲಜನಕ ಸಾಂದ್ರಕಗಳು ಸೇವೆಗೆ ಸಮರ್ಪಣೆ

ಕೋವಿಡ್‌ ಸಂದಿಗ್ಧ ಪರಿಸ್ಥಿತಿ ಸಮರ್ಥವಾಗಿ ಎದುರಿಸಲು ಪ್ರಾಮಾಣಿಕ ಪ್ರಯತ್ನ

– ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ

ದಾವಣಗೆರೆ, ಜೂ.6- ಕೋವಿಡ್‌ ಸಂದಿಗ್ಧ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿ ಇಂದು ಏರ್ಪಾಡಾಗಿದ್ದ ಶಾಲೆಯ ಹಿರಿಯ ವಿದ್ಯಾರ್ಥಿಗಳು ಮತ್ತು ಅವರ ಸ್ನೇಹಿತರ ಸಹಾಯಾರ್ಥದಲ್ಲಿ 5 ಲಕ್ಷ ರೂ. ವೆಚ್ಚದ ಹತ್ತು ಆಮ್ಲಜನಕ ಸಾಂದ್ರಕಗಳನ್ನು (ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳು) ಕೊರೊನಾ ಸೋಂಕಿತರ ಸೇವೆಗೆ ಲೋಕಾರ್ಪಣೆ ಮಾಡಿ ಮಾತನಾಡಿದರು.

ಕೊರೊನಾ ಮೊದಲನೇ ಅಲೆ ಎದುರಾದ ಸಂದರ್ಭದಲ್ಲೂ ಕೂಡ ಸಿದ್ಧಗಂಗಾ ವಿದ್ಯಾಸಂಸ್ಥೆ ಸಂಕಷ್ಟಕ್ಕೀಡಾದವರಿಗೆ ಆಹಾರ ಧಾನ್ಯ ಕಿಟ್‌ ವಿತರಿಸಿ ಮಾನವೀಯತೆ ಮೆರೆದಿತ್ತು. ಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್‌ ಡಿಸೌಜ ಹಾಗೂ ಹೇಮಂತ್‌, ಡಾ. ಜಯಂತ್‌ ಸೇವಾ ಮನೋಭಾವನೆ ಸ್ಮರಣೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದಾವಣಗೆರೆ ಜಿಲ್ಲೆಯಲ್ಲಿರುವಷ್ಟು ಹೃದಯ ವೈಶಾಲ್ಯತೆ ಹೊಂದಿದ ಜನರನ್ನು ಬೇರೆ ಯಾವ ಜಿಲ್ಲೆಯಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಅಭಿಮಾನ ಪೂರ್ವಕವಾಗಿ ನುಡಿದರು.

ಆಸ್ಪತ್ರೆಯಿಂದ ಬಿಡುಗಡೆಯಾದ ಕೊರೊನಾ ಪೀಡಿತರಿಗೆ ಕೆಲವು ಸಂದರ್ಭದಲ್ಲಿ ಮನೆಯಲ್ಲಿಯೇ ಬಳಸಲು ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳ ಅಗತ್ಯವಿ ರುತ್ತದೆ. ಆದರೆ ಉಳ್ಳವರು ವೆಚ್ಚ ಭರಿಸಿ ಕೊಳ್ಳುತ್ತಾರೆ. ಬಡವರು, ಮಧ್ಯಮ ವರ್ಗದ ಜನರಿಗೆ ಕಷ್ಟಸಾಧ್ಯ. ಇಂತಹ ಸಂದರ್ಭದಲ್ಲಿ ಉಚಿತವಾಗಿ ಸಿದ್ಧಗಂಗಾ ಸಂಸ್ಥೆಯಂತಹ ದಾನಿಗಳು ನೀಡುವ ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಮೇಯರ್‌ ಎಸ್‌.ಟಿ. ವೀರೇಶ್‌ ಮಾತನಾಡಿ, ಕೋವಿಡ್‌ನಂತಹ ವಿಷಮ ಪರಿಸ್ಥಿತಿಯಲ್ಲಿ ಬಹುಪಾಲು ಜನರು ಕೊರೊನಾ ಮಹಾಮಾರಿ ವಿರುದ್ಧದ ಸಮರದಲ್ಲಿ ಸಾಮಾಜಿಕ ಹೊಣೆಗಾರಿಕೆ ಅರಿತು ಹೋರಾಟ ನಡೆಸುತ್ತಿದ್ದಾರೆ ಎಂದರು.

ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ನಿರ್ದೇಶಕ ಡಾ. ಡಿ.ಎಸ್‌. ಜಯಂತ್‌ ಮಾತನಾಡಿ, ತಮ್ಮ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಅಮೆರಿಕಾ, ನ್ಯೂ ಜರ್ಸಿ, ಬೆಂಗಳೂರು ಮತ್ತಿತರೆ ಕಡೆಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ. ಅವರು ನೀಡಿದ ಧನ ಸಹಾಯದಿಂದ ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳನ್ನು ಖರೀದಿಸಿ ಕೊರೊನಾ ಪೀಡಿತರ ರಕ್ಷಣೆಗೆ ನೀಡಲಾಗುತ್ತದೆ ಎಂದು ತಿಳಿಸಿದರು.

ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್‌ ಡಿಸೌಜಾ, ಹೇಮಂತ್‌, ಪ್ರಶಾಂತ್‌ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!