ಜಗತ್ತಿನ ಇತಿಹಾಸವನ್ನೊಮ್ಮೆ ಪುನರ್ಮನನ ಮಾಡಿಕೊಂಡಾಗ ಇದುವರೆಗೂ ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ, ಅಧ್ಯಾತ್ಮಿಕ, ರಾಜಕೀಯ, ವೈಜ್ಞಾನಿಕ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅನೇಕ ರೀತಿಯ ವಿದ್ಯಮಾನಗಳು ನಮ್ಮ ಸ್ಮೃತಿ ಪರದೆಯ ಮೇಲೆ ಹಾದು ಹೋಗುತ್ತವೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಮನುಷ್ಯ ವೈಜ್ಞಾನಿಕವಾಗಿ ಹೊಸ ಹೊಸ ಅನ್ವೇಷಣೆ ಮತ್ತು ಆವಿಷ್ಕಾರಗಳನ್ನು ಕೈಗೊಂಡು, ತಂತ್ರಜ್ಞಾನದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದರೂ ಮಾನವ ಸಮುದಾಯವನ್ನು ಸಾಂಕ್ರಾಮಿಕ ರೋಗಗಳಿಂದ ದೂರವಿಡಲು ಸಾಧ್ಯವಾಗುತ್ತಿಲ್ಲ. ಕಳೆದೆರಡು ವರ್ಷಗಳಿಂದ ಜಗತ್ತನ್ನೇ ವ್ಯಾಪಿಸಿ ಮನುಕುಲವನ್ನೇ ಸಂಕಷ್ಟಕ್ಕೀಡು ಮಾಡಿದ ಮಾರಣಾಂತಿಕ ಸೋಂಕು ಕೊರೊನಾ ಲಕ್ಷ ಲಕ್ಷ ಅಮಾಯಕ ಜೀವಗಳನ್ನು ಬಲಿ ಪಡೆಯುವ ಮೂಲಕ ಇಡೀ ಭೂ ಮಂಡಲವನ್ನೇ ಮಸಣ ಭೂಮಿಯನ್ನಾಗಿ ಮಾಡಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಮಹಾಮಾರಿ ಕೊರೊನಾಕ್ಕೆ ಬಂಧು-ಬಾಂಧವರ ಜೀವಗಳು ಬಲಿಯಾಗಿ ಆಶ್ರಿತರ ಆಕ್ರಂದನ ಮುಗಿಲು ಮುಟ್ಟಿದೆ. ಶವಸಂಸ್ಕಾರ ಕಾರ್ಯದಲ್ಲಿ ಭಾಗಿಯಾಗುವುದಿರಲಿ ಮುಖವನ್ನೂ ಸಹ ನೋಡಲಾಗದಂತಹ ದುರಂತ ಸನ್ನಿವೇಶಗಳು ಕರುಳು ಹಿಂಡುತ್ತಿವೆ. ತಂದೆ-ತಾಯಿ, ಗಂಡ-ಹೆಂಡತಿ ಮಕ್ಕಳಾದಿಯಾಗಿ ಸಾವಿಗೀಡಾದ ಸಂದರ್ಭದಲ್ಲಿ ಅವರ ಅಂತಿಮ ದರ್ಶನ ಪಡೆದುಕೊಂಡು ವಿದಾಯ ಹೇಳದಿರುವಷ್ಟು ದೌರ್ಭಾಗ್ಯವನ್ನು ತಂದಿಟ್ಟಿದೆ. ಕೊರೊನಾ ಬಂದು ಸತ್ತು ಶವವಾದ ಕುಟುಂಬಗಳ ಕಥೆ ಇದಾದರೆ, ಲಾಕ್‌ಡೌನ್ ಮಾಡಲೇಬೇಕಾದ ಅನಿವಾರ್ಯತೆಯಿಂದ ಎಷ್ಟೋ ಕುಟುಂಬಗಳು ಆಹಾರವಿಲ್ಲದೆ ನರಕ ಯಾತನೆ ಅನುಭವಿಸುವ ಕಥೆ ಇನ್ನೊಂದೆಡೆ. ದಿನಗೂಲಿ ನೌಕರರ ಹಾಗೂ ಬಡವರ ಜೀವನ ಬೀದಿಗೆ ಬಿದ್ದ ಭಿಕ್ಷುಕನಂತಾಗಿದೆ.
ನನ್ನ ಅರಿವಿಗೆ ಬಂದ ನೈಜ ಘಟನೆ… ನನ್ನ ಸಹೋದ್ಯೋಗಿ ಮಿತ್ರರೊಬ್ಬರ ಮನೆಯಲ್ಲಿ ಆರು ಜನರಿದ್ದಾರೆ. ಗಂಡ-ಹೆಂಡತಿ ಮತ್ತು ಮಕ್ಕಳು ಮೂವರು ಹಾಗೂ ಅವರ ತಾಯಿ. ಈ ಕುಟುಂಬ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿತ್ತು. ಇತ್ತೀಚೆಗಷ್ಟೇ ನೂತನ ಗೃಹಪ್ರವೇಶ ಮಾಡಿ ಎರಡೇ ದಿನಗಳಲ್ಲಿ ದಂಪತಿಗಳಿಬ್ಬರಿಗೂ ಕೊರೊನಾ ಪಾಸಿಟಿವ್ ಆಗಿದ್ದು, ನಂತರ ಎರಡು ದಿನದಲ್ಲಿ ಅವರಮ್ಮ ಹಾಗೂ ಇನ್ನೊಂದು ಮಗುವಿಗೂ ಸಹ ಪಾಸಿಟಿವ್ ಬಂದಿದ್ದು ನಾಲ್ಕು ಜನ ಮತ್ತೆ ವಾಪಸ್ ಬಾಡಿಗೆ ಮನೆಗೆ ಹೋಗಿದ್ದಾರೆ. ಪುಟ್ಟ 4 ವರ್ಷದ ಹುಡುಗಿ ಹಾಗೂ ಇನ್ನೊಂದು ಹತ್ತು ವರ್ಷದ ಹುಡುಗಿ ಇಬ್ಬರೇ ಜೀವನ ನಿರ್ವಹಣೆ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಮನೆಯಲ್ಲಿ ವ್ಯವಸ್ಥೆ ಸರಿಯಾಗಿಲ್ಲ, ಈಗಿನ ಕಾಲದಲ್ಲಿ ಮಕ್ಕಳಿಗೆ ಯಾವ ಕಷ್ಟದ ಪರಿಕಲ್ಪನೆಯೂ ಗೊತ್ತಿಲ್ಲದಂತೆ ಬೆಳೆದಿರುತ್ತವೆ. ಹೀಗಿರುವಾಗ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ 4 ವರ್ಷದ ಈ ಮಗುವನ್ನು ನೋಡಿಕೊಂಡು 10 ವರ್ಷದ ಮಗು ಮಹಾನಗರದಲ್ಲಿ ಜೀವನ ಮಾಡಬೇಕಾಗಿದೆ. ಇನ್ನೂ ಮಾಧ್ಯಮಗಳಲ್ಲಿ ಅನೇಕ ಕರುಳು ಕಿತ್ತು ಬರುವ ಸಂಗತಿಗಳನ್ನು ನೋಡಿದೀವಿ, ನೂರಾರು ಕನಸುಗಳನ್ನು ಕಟ್ಟಿಕೊಂಡ ತಂದೆ ಹುಟ್ಟಿದ ಮಗುವನ್ನು ನೋಡದೆ ಮರಣ ಹೊಂದಿದ್ದಾರೆ. ಈ ರೀತಿಯ ಘಟನೆಗಳನ್ನು ನೋಡ್ತಾ ಇದ್ರೆ ಹೃದಯಕ್ಕೆ ಬರಸಿಡಿಲು ಬಡಿದಂತಹ ಅನುಭವವಾಗುತ್ತದೆ. ಎಂತಹ ಭಯಾನಕ ಪರಿಸ್ಥಿತಿಯಲ್ಲಿ ನಾವಿಂದು ಬದುಕುತ್ತಿದ್ದೇವೆ ಎಂಬುದನ್ನು ಯಾರೊಂದಿಗೂ ಸಹ ಹೇಳಿಕೊಳ್ಳಲು ಆಗದ ಸ್ವತಃ ಅನುಭವಿಸಲೂ ಆಗದ ಸಂಕಷ್ಟದ ಸ್ಥಿತಿ ಬಂದಿದೆ.
ಬದಲಾಗದ ಮನುಷ್ಯನ ವರ್ತನೆಗಳನ್ನೇ ಬದಲಿಸಿದ ಕೊರೊನಾ… ಕೆಟ್ಟ ಸಂದರ್ಭಗಳ ಜೊತೆಗೊಂದಿಷ್ಟು ಒಳ್ಳೆಯದು ಇರಲೇಬೇಕು ಅಲ್ವಾ…? ಯಾರಿಂದಲೂ, ಯಾವುದರಿಂದಲೂ ಬದಲಾಗದ ಮನುಷ್ಯನನ್ನು ಕೊರೋನಾ ಬದಲಿಸಿದೆ. ಕೊರೊನಾ ಕಲಿಸಿದ ಪಾಠಗಳನ್ನು ಮರೆಯದೆ ಮುಂದುವರಿಸುವ ಜಾಣತನ ಬೇಕಷ್ಟೇ.
* ಆಹಾರ : ಹೊರಗಡೆ ತಿನ್ನಬೇಡಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಲಕ್ಷಾಂತರ ಲೇಖನಗಳು ಹಾಗೂ ಆರೋಗ್ಯ ತಜ್ಞರ ಮಾತಿಗೆ ಕಿವಿಗೊಡದೆ ಜನ ಇಂದು ಕೊರೊನಾದಿಂದ ಎಚ್ಚೆತ್ತಿದ್ದಾರೆ.
* ಒಂದಾದ ಕುಟುಂಬಗಳು : ಇನ್ನೂ ಸಂಬಂಧಗಳ ವಿಷಯಕ್ಕೆ ಬರುವುದಾದರೆ ಒಬ್ಬರಿಗೊಬ್ಬರು ಸಮಯ ಕೊಡಲಾಗದೆ ಅದೇ ವಿಷಯಕ್ಕೆ ಮನಸ್ತಾಪ ಮಾಡಿಕೊಂಡು ಕಿತ್ತಾಟ ನಡೆಸುತ್ತಿದ್ದರು. ಆದರೆ ಇಂದು ಪರಸ್ಪರ ಕಾಳಜಿ ತೋರುವ ಮಟ್ಟಕ್ಕೆ ಬದಲಾಗಿದ್ದಾರೆ.
* ಸ್ವಚ್ಛತೆ : ಶಿಸ್ತು ಮತ್ತು ಸ್ವಚ್ಛತೆಯ ಕುರಿತು ಬಾಯಿ ಬಾಯಿ ಬಡಿದುಕೊಂಡರೂ ಬದಲಾಗದ ಜನ ಇಂದು ಬದಲಾಗಿದ್ದಾರೆ. ಆಗಾಗ ಕೈತೊಳೆಯುತ್ತಿದ್ದಾರೆ ಸ್ವಚ್ಛತೆ ಕಾಪಾಡುತ್ತಿದ್ದಾರೆ.
* ಪ್ರಕೃತಿ ಖುಷ್ : ಪರಿಸರ ಜಾಗೃತಿ ಸಪ್ತಾಹ, ಲೇಖನಗಳು, ಮಾಧ್ಯಮಗಳ ಎಚ್ಚರಿಕೆಗಳು, ಅಧ್ಯಯನಗಳು ಎಲ್ಲದಕ್ಕೂ ಕಿವುಡಾಗಿದ್ದ ಜನ ಈಗ ಮನೆಯಲ್ಲೇ ಇರುವುದರಿಂದ ವಾಹನಗಳು ಬೀದಿಗೆ ಇಳಿಯದಿರುವುದ ರಿಂದ ಪ್ರಕೃತಿಗೆ ಆಗುತ್ತಿದ್ದ ಅನೇಕ ಮಾಲಿನ್ಯಗಳ ನಿಯಂತ್ರಣವಾಗಿದೆ.
* ಆತಂಕ ನಿವಾರಣೆ : ಯೋಗ, ಧ್ಯಾನ ಮತ್ತು ಪ್ರಾಣಾಯಾಮವೇ ನಮಗೀಗ ಮದ್ದು, ಒಂದು ಕ್ಷಣವು ಬಿಡುವಿಲ್ಲದೆ ಬ್ಯೂಸಿಯಾಗಿ ಇರುತ್ತಿದ್ದ ಜನ ಈಗ ಆರೋಗ್ಯವಾಗಿದ್ದರೆ ಸಾಕು ಎನ್ನುವ ಮಟ್ಟಕ್ಕೆ ಬಂದಿದ್ದಾರೆ. ಲಕ್ಷ ಲಕ್ಷ ಸಂಪಾದನೆ ನಷ್ಟ ಆದರೂ ತಲೆಕೆಡಿಸಿಕೊಳ್ಳದೆ ಯೋಗ ಧ್ಯಾನ, ಪ್ರಾಣಾಯಾಮಗಳ ಮೊರೆ ಹೋಗಿದ್ದಾರೆ. ಭೂಮಾತೆಯ ಸ್ವಚ್ಛತೆಗೆ ಮುನ್ನುಡಿ ಬರೆದು ಒತ್ತಡದ ಬದುಕಿಗೆ ಬೀಗ ಜಡಿದು ಅಂತರದ ಮಂತ್ರ ಜಪಿಸಿ ಪ್ರತಿಯೊಬ್ಬರೂ ಜಾಗೃತರಾಗಬೇಕು.
ಶ್ರೀಮತಿ ಸುನಿತ.ಡಿ.
ಸ.ಹಿ.ಪ್ರಾ.ಶಾಲೆ, ಕುಣೆಬೆಳಕೆರೆ.