ವಿದೇಶಿ – ದೇಶಿ ಲಸಿಕೆಗಳಿಗೆ ಬೇರೆ ನೀತಿಯೇ..?

ಲಸಿಕೆ ಬೆಲೆ ಕುರಿತೂ ಅಬ್ಬರಿಸಿ, ಹಲವರು ಬೊಬ್ಬಿರಿದರು.  ಕೋವಿಶೀಲ್ಡ್ ಬೆಲೆ ಪ್ರತಿ ಡೋಸ್‌ಗೆ 600 ರೂ. ನಿಗದಿ ಪಡಿಸಿದರೂ ದುಬಾರಿ, ಲಾಭಕೋರತನ ಎಂದು ಕೆಲವರು ಹೇಳುತ್ತಿದ್ದರು. ಆದರೆ, ರಷ್ಯಾದ ಸ್ಪುಟ್ನಿಕ್ ಲಸಿಕೆಯ ಬೆಲೆ ಪ್ರತಿ ಡೋಸ್‌ಗೆ ಸಾವಿರ ರೂಗಳಾದರೂ ಯಾರದೂ ಟೀಕೆ ಇಲ್ಲ.

ಕೊರೊನಾದ ಮೊದಲ ಅಲೆ ಬಂದಾಗ ಟೀಕೆಗಳ ಭಯಂಕರ ಕೊರತೆ ಎದುರಾಗಿತ್ತು. ಅಧಿಕಾರಸ್ಥರು, ಪೊಲೀಸರು, ಮುಂಚೂಣಿ ಕಾರ್ಯಕರ್ತರು ಕೊರೊನಾ ವಾರಿಯರ್‌ಗಳೆಂದು ಗೌರವ ಪಡೆದಿದ್ದರೆ, ಅಧಿಕಾರಸ್ಥರು ಪ್ರತಿಪಕ್ಷಗಳ ಟೀಕೆಗಳಿಂದ ವಿನಾಯಿತಿ ಪಡೆದಿದ್ದರು.

ಆದರೆ, ಎರಡನೇ ಅಲೆಯಲ್ಲಿ ಪರಿಸ್ಥಿತಿ ಬದಲಾಗಿದೆ. ಪ್ರತಿನಿತ್ಯ ವ್ಯವಸ್ಥೆ ಕುರಿತು ದಂಡಿಯಾಗಿ ಟೀಕೆಗಳು ಕೇಳಿ ಬರುತ್ತಿವೆ. ಸರ್ಕಾರದ ಮಂದಿಯನ್ನು ಪ್ರತಿಪಕ್ಷಗಳು ಹಾಗೂ ಜನರು ಟೀಕಿಸುವ ಜೊತೆಗೆ, ಲಸಿಕೆ ಉತ್ಪಾದಿಸುವ ಕಂಪನಿಗಳ ಮೇಲೂ ಟೀಕಾಸ್ತ್ರ ಬಿಡಲಾಗುತ್ತಿದೆ.

ಟೀಕಾಸ್ತ್ರ ಯಾವ ಮಟ್ಟಕ್ಕೆ ಹೋಯಿತು ಎಂದರೆ ಕೋವಿಶೀಲ್ಡ್ ಉತ್ಪಾದಿಸುವ ಎಸ್.ಐ.ಐ. ಕಂಪನಿಯ ಮಾಲೀಕ ಅದರ್ ಪೂನಾವಾಲಾಗೆ ಝಡ್ ಪ್ಲಸ್ ಹಂತದ ಭದ್ರತೆ ಕೊಡಬೇಕಾಯಿತು. ಕೊನೆಗೆ ಅವರು ಸಕುಟುಂಬ ಸಮೇತ ಬ್ರಿಟನ್‌ಗೆ ಪಲಾಯನ ಮಾಡಬೇಕಾಯಿತು.

ಕೋವ್ಯಾಕ್ಸಿನ್ ಹಣೇಬರಹವೂ ಉತ್ತಮವಾಗೇನೂ ಇಲ್ಲ. ಆರಂಭದಲ್ಲೇ ಅದಕ್ಕೆ ಅನುಮತಿ ನೀಡಿದ ಕುರಿತು ಅಪಸ್ವರ ಕೇಳಿ ಬಂತು. ನಂತರ ಅದೇ ಲಸಿಕೆಗೆ ಬೇಡಿಕೆ ಹೆಚ್ಚಾಗಿ, ಕೊನೆಗೆ ಪೂರೈಕೆಯ ವಿಷಯದಲ್ಲಿ ಆಮ್ ಆದ್ಮಿ ಪಾರ್ಟಿ ಆರೋಪ ಮಾಡುತ್ತಿದೆ. ಮುಂದುವರೆದ ಭಾಗವಾಗಿ ಕಾಂಗ್ರೆಸ್‌ ಹಿರಿಯ ನಾಯಕ ಪಿ.ಚಿದಂಬರಂ ಅವರೀಗ ಭಾರತೀಯ ಲಸಿಕೆ ಕಂಪನಿಗಳ ಸಿ.ಎ.ಜಿ. ಲೆಕ್ಕ ಪರಿಶೋಧನೆಗೆ ಒತ್ತಾಯಿಸಿದ್ದಾರೆ. ಮುಂದಿನ ಹಂತದಲ್ಲಿ ಸಿಬಿಐ ತನಿಖೆ, ಬಂಧನ ಇತ್ಯಾದಿಗಳಿಗೆ ಒತ್ತಾಯ ಕೇಳಿ ಬರುವ ನಿರೀಕ್ಷೆ ಇಟ್ಟುಕೊಳ್ಳಬಹುದೇನೋ?

ಲಸಿಕೆ ಬೆಲೆ ಕುರಿತೂ ಅಬ್ಬರಿಸಿ ಹಲವರು ಬೊಬ್ಬಿರಿದರು.  ಕೋವಿಶೀಲ್ಡ್ ಬೆಲೆ ಪ್ರತಿ ಡೋಸ್‌ಗೆ 600 ರೂ. ನಿಗದಿ ಪಡಿಸಿದರೂ ದುಬಾರಿ, ಲಾಭಕೋರತನ ಎಂದು ಕೆಲವರು ಹೇಳುತ್ತಿದ್ದರು. ಆದರೆ, ರಷ್ಯಾದ ಸ್ಪುಟ್ನಿಕ್ ಲಸಿಕೆಯ ಬೆಲೆ ಪ್ರತಿ ಡೋಸ್‌ಗೆ ಸಾವಿರ ರೂಗಳಾದರೂ ಯಾರದೂ ಟೀಕೆ ಇಲ್ಲ. 

ಇನ್ನು ಫೈಜರ್ ಲಸಿಕೆಯ ಬೆಲೆ ಪ್ರಸಕ್ತ ಪ್ರತಿ ಡೋಸ್‌ಗೆ 20 ಡಾಲರ್‌ (ಸುಮಾರು 1,450 ರೂ.) ಆಗಿದೆ. ಮೊಡೆರ್ನಾ ಲಸಿಕೆಯ ಬೆಲೆ 30 ಡಾಲರ್‌ (ಸುಮಾರು 2,100 ರೂ.) ಆಗಿದೆ. ಈ ಲಸಿಕೆಗಳನ್ನು ಭಾರತಕ್ಕೆ ತರಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿವೆ. ಕೋವಿಶೀಲ್ಡ್ ಬೆಲೆ ಬಗ್ಗೆ ಆಕ್ಷೇಪಿಸುತ್ತಿರುವವರು, ಫೈಜರ್, ಮೊಡೆರ್ನಾ ಇತ್ಯಾದಿಗಳ ಬಗ್ಗೆ ಮೌನವೇ ಆಭರಣ ಎಂಬಂತಿದ್ದಾರೆ.

ಲಸಿಕೆ ಕಂಪನಿಗಳ ಉತ್ಪಾದಕರನ್ನು ವಿದೇಶಗಳಲ್ಲಿ ಕಾಣುತ್ತಿರುವ ರೀತಿಯೇ ಬೇರೆಯಾಗಿದೆ. ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೇತನ್ಯಾಹು ಅವರು ತಾವು ಫೈಜರ್ ಕಂಪನಿ ಮುಖ್ಯಸ್ಥ ಅಲ್ಬರ್ಟ್ ಬೌರ್ಲ ಜೊತೆ ಮಾತನಾಡಲು 17 ಬಾರಿ ಕರೆ ಮಾಡಬೇಕಾಯಿತು ಎಂದು ಹೇಳಿಕೊಂಡಿದ್ದಾರೆ. ಫೈಜರ್ ಲಸಿಕೆಯ ಬೆಲೆ ಎಷ್ಟೇ ಆದರೂ ಮೌನವಾಗಿದ್ದಾರೆ. ಫೈಜರ್‌ ಕಂಪನಿ ತನ್ನ ಲಸಿಕೆಯಿಂದ ಏನೇ ಅಡ್ಡ ಪರಿಣಾಮವಾದರೂ ಹೊಣೆ ತಾನಲ್ಲ ಎಂದು ಮುಚ್ಚಳಿಕೆ ಬರೆದು ಕೊಡಬೇಕು ಎಂದರೆ ಅಲ್ಲಿನ ಸರ್ಕಾರಗಳು ಸಮ್ಮತಿಸಿವೆ.

ಒಂದು ಕ್ಷಣ ಯೋಚಿಸಿ, ಇಲ್ಲಿ ಭಾರತ ಸರ್ಕಾರವೇನಾದರೂ ಭಾರತೀಯ ಕಂಪನಿಗಳ ಜೊತೆ ಇದೇ ರೀತಿ ನಡೆದುಕೊಂಡಿದ್ದರೆ ಎಷ್ಟು ದೊಡ್ಡ ಗದ್ದಲವಾಗಿರುತ್ತಿತ್ತು? ಇಷ್ಟು ಸೌಲಭ್ಯ ಕೊಡುವುದಿರಲಿ, ಕಂಪನಿ ಮಾಲೀಕನೇ ಹೆದರಿ ದೇಶ ಬಿಟ್ಟು ಹೋಗುವಂತಾಗಿದೆಯಲ್ಲವೇ!

ಲಸಿಕೆಯನ್ನು ಕೇಂದ್ರ ಸರ್ಕಾರವಷ್ಟೇ ಏಕೆ ಕೊಡಬೇಕು? ಲಸಿಕೆ ಪ್ರಕ್ರಿಯೆಯಲ್ಲಿ ನಮಗೂ ಅವಕಾಶ ಕೊಡಿ ಎಂದು ರಾಜ್ಯ ಸರ್ಕಾರಗಳು ಕೇಳಿದವು. ಪ್ರಜಾಪ್ರಭುತ್ವ – ವಿಕೇಂದ್ರೀಕರಣ ಸೂತ್ರದ ಅನ್ವಯ ಕೇಂದ್ರ ಹಾಗೂ ರಾಜ್ಯಗಳು 50-50 ಲಸಿಕೆಯನ್ನು ಹಂಚಿಕೊಂಡವು. ನಂತರ ಆಗಿದ್ದೇನು? 

ಲಸಿಕೆ ವಿಷಯದಲ್ಲಿ ಪ್ರತಿ ರಾಜ್ಯದ್ದೂ ಒಂದೊಂದು ನೀತಿ.  ಪರಿಸ್ಥಿತಿ ನಿಭಾಯಿಸಲಾಗದೇ ಖಾಸಗಿಯವರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಧಾರೆ ಎರೆಯುವ ಘಟನೆಗಳೂ ನಡೆಯುತ್ತಿವೆ.  ಲಸಿಕೆ ಖರೀದಿಗಾಗಿ ಅಂತರರಾಷ್ಟ್ರೀಯ ಟೆಂಡರ್‌ಗಳ ಪ್ರಹಸನದ ನಂತರ ಕೇಂದ್ರ ಸರ್ಕಾರವೇ ಲಸಿಕೆ ಕೊಡಲಿ ಎಂದು ಮತ್ತೆ ದುಂಬಾಲು ಬೀಳಲಾಗಿದೆ. 

ಯಾವಾಗ ಲಸಿಕೆ ವಿಷಯ ರಾಜ್ಯಗಳ ಕುತ್ತಿಗೆಗೂ ಸುತ್ತಿಕೊಳ್ಳಬಹುದು ಎಂಬ ಶಂಕೆ ಉಂಟಾಯಿತೋ, ಆಗ ಲಸಿಕಾ ಕಂಪನಿಗಳನ್ನು ಸಿಎಜಿ ಇತ್ಯಾದಿ ತನಿಖೆಗೆ ಒಳಪಡಿಸುವ ಮಾತುಗಳು ಕೇಳಿ ಬರುತ್ತಿವೆ. ಪ್ರತಿಪಕ್ಷಗಳು ಈಗ ಲಸಿಕೆ ತಪ್ಪುಗಳನ್ನೆಲ್ಲಾ ಎರಡು ದೇಶೀಯ ಲಸಿಕಾ ಕಂಪನಿಗಳ ಕೊರಳಿಗೆ ಹಾಕುವ ಪ್ರಯತ್ನ ನಡೆಸುತ್ತಿರುವಂತಿದೆ.

ಕೇಂದ್ರ – ರಾಜ್ಯಗಳ ಜಟಾಪಟಿಯ ನಡುವೆ ಈಗಾಗಲೇ ಲಸಿಕಾ ನೀತಿ ಸಮಸ್ಯೆಗೆ ಸಿಲುಕಿದೆ. ಇದರ ನಡುವೆ ವಿದೇಶಿ ಲಸಿಕಾ ಕಂಪನಿಗಳಿಗೆ ಮಣೆ, ದೇಶೀಯ ಲಸಿಕಾ ಕಂಪನಿಗಳಿಗೆ ದೊಣ್ಣೆ ಎಂಬಂತಾದರೆ ಪರಿಸ್ಥಿತಿ ಇನ್ನೂ ಬಿಗಡಾಯಿಸಲಿದೆ.


ಅಸ್ಮಿತ ಎಸ್. ಶೆಟ್ಟರ್‌

 

error: Content is protected !!