ಪ್ರಧಾನಿ ಹೇಳಿದ್ದನ್ನೆಲ್ಲಾ ಕೇಳಿದರೂ ಲಸಿಕೆಗೆ ಪರದಾಟ

ನಗರದಲ್ಲಿ 2ನೇ ಡೋಸ್‌ ಲಸಿಕೆ ಪಡೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಶುಕ್ರವಾರ ದಾವಣಗೆರೆಯಲ್ಲಿ ಏರ್ಪಡಾಗಿದ್ದ, ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರು ಕೊಡುಗೆ ನೀಡಿರುವ ಉಚಿತ ಕೋವಿಡ್ ಲಸಿಕೆ ವಿತರಣಾ ಅಭಿಯಾನವನ್ನು 2ನೇ ಡೋಸ್‌ ಲಸಿಕೆ ಪಡೆಯುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಿದರು.

ಎಸ್ಸೆಸ್ ಕೊಡುಗೆ ನೀಡಿದ ಲಸಿಕಾ ಶಿಬಿರದ ಉದ್ಘಾಟನೆಯಲ್ಲಿ ಡಿಕೆಶಿ ಟೀಕೆ

ದಾವಣಗೆರೆ, ಜೂ.4- ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದನ್ನೆಲ್ಲಾ ಕೇಳಿದರೂ ಲಸಿಕೆ ನೀಡುವ ವಿಚಾರದಲ್ಲಿ ಜನರನ್ನು ಪರದಾಡುವಂತೆ ಮಾಡಲಾಯಿತು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದರು.

ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ಮನೆತನದಿಂದ ಕೊಡುಗೆ ನೀಡಿರುವ ಉಚಿತ ಕೋವಿಡ್ ಲಸಿಕೆ ಶಿಬಿರಕ್ಕೆ ತಾವು 2ನೇ ಹಂತದ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. 

ಮಹಾಭಾರತ 18 ದಿನ ನಡೆಯಿತು, ನಾನು 21 ದಿನದಲ್ಲಿ ಲಸಿಕೆ ತರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಕೊರೊನಾ ಬಂದಾಗ ಚಪ್ಪಾಳೆ ತಟ್ಟಿದೆವು, ದೀಪ ಹಚ್ಚಿದೆವು, ಗಂಟೆ ಬಡಿದೆವು. ಅವರು ಹೇಳಿದ್ದನ್ನೆಲ್ಲಾ ಕೇಳಿದರೂ ಜನರು ಲಸಿಕೆಗಾಗಿ ಪರದಾಡುವಂತಹ ಸ್ಥಿತಿ ಕಂಡರು. ಹೀಗೆ ಸುಳ್ಳು ಮಾತಿನಿಂದ ನಂಬಿಸದೇ ಲಸಿಕೆ ಕೊಟ್ಟು ಜನರ ಪ್ರಾಣ ಉಳಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು. 

ಲೋಕಸಭೆಯಲ್ಲಿ ಕಾಂಗ್ರೆಸ್‍ನವರು 30 ರಿಂದ 40 ಜನರಿದ್ದು, ಬಿಜೆಪಿಯವರು 400 ಜನರು ಗೆದ್ದಿದ್ದಾರೆ. ಇಡೀ ದೇಶಕ್ಕೆ ಪ್ರಧಾನಿ ಮೋದಿ ಅವರು ಒಂದು ಶಕ್ತಿ ಕೊಡುತ್ತಾರೆ ಎಂದು ನಂಬಿದ್ದೆವು. ಅದನ್ನು ಉಳಿಸಿಕೊಳ್ಳಲಿಲ್ಲ. ಪ್ರದಾನಿ ಮೋದಿ,  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಷ್ಟೇ ಏಕೆ ಯಡಿಯೂರಪ್ಪ ಅವರ ಮಂತ್ರಿಗಳ ಮಾತುಗಳನ್ನು ಕೇಳಿದೆವು. ಮುಖ್ಯಮಂತ್ರಿಗಳು 18 ರಿಂದ 44 ವರ್ಷ ವಯಸ್ಸಿನವರೆಗೆ ಲಸಿಕೆ ಕೊಡುತ್ತೇವೆ ಎಂದು ಹೇಳಿದರು. ಆದರೆ, ಅದನ್ನು ಪಡೆಯಲು ಆನ್‍ಲೈನ್ ನೋಂದಣಿ ಮಾಡುವುದನ್ನು ನಿಲ್ಲಿಸಲಾಗಿದೆ. ಹಾಗಾದರೆ ಈ ಸರ್ಕಾರಗಳಲ್ಲಿ ಲಸಿಕೆ ಇಲ್ಲವಾಗಿದೆ ಎಂದು ಡಿಕೆಶಿ ಗುಡುಗಿದರು.

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಜನರನ್ನು ಕೊರೊನಾದಿಂದ ತಡೆಯಲು ವ್ಯಾಕ್ಸಿನ್ ನೀಡುವುದು ಮುಖ್ಯವಾಗಿದೆ. ಸರ್ಕಾರದವರು ಇಂದು-ನಾಳೆ ಎಂದು ಹೇಳುತ್ತಿದ್ದರು. ಆದರೆ, ಲಸಿಕೆ ಮಾತ್ರ ಕೊಡಲಿಲ್ಲ. ಆಗ ನಾವು ದಾವಣಗೆರೆಯ ಜನರಿಗೆ ಬೇಕಾಗುವಷ್ಟು ಲಸಿಕೆ ನೀಡಿದರೆ, ಅದರ ಅರ್ಧ ಹಣವನ್ನು ಭರಿಸುವುದಾಗಿ ಹೇಳಿದ್ದೆ. ಅದಕ್ಕೆ ಆಡಳಿತ ಪಕ್ಷದ ಸರ್ಕಾರ ಕಿವಿಕೊಡಲಿಲ್ಲ. ಆದ್ದರಿಂದ ನಾವೇ ಲಸಿಕೆ ತಂದು ಕೊಡಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು. 

ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಮಾತನಾಡಿ, ತಮ್ಮ ತಂದೆ ಶಿವಶಂಕರಪ್ಪ ಅವರು ಜನರಿಗೆ ಲಸಿಕೆ ಕೊಡುವುದಾಗಿ ಘೋಷಣೆ ಮಾಡಿದ್ದರು. ನಂತರ ತಾನು ವ್ಯಾಕ್ಸಿನ್ ಕಂಪನಿಗಳೊಂದಿಗೆ ಮಾತುಕತೆ ನಡೆಸಿ, ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸಹಕಾರದಿಂದ ಮೊದಲ ಹಂತದಲ್ಲಿ 10 ಸಾವಿರ ಡೋಸ್ ಲಸಿಕೆ ನೀಡುತ್ತಿದ್ದು, ಇದೇ ದಿನಾಂಕ ಜೂನ್ 10 ರಂದು ಮತ್ತೆ 50 ಸಾವಿರ ಡೋಸ್ ಲಸಿಕೆ ಬರಲಿದೆ. ಇಂದು ಸಾಂಕೇತಿಕವಾಗಿ ಲಸಿಕೆ ಶಿಬಿರಕ್ಕೆ ಚಾಲನೆ ನೀಡಿದ್ದು, ನಾಳೆಯಿಂದ ನಗರದ ಐದು ಕಡೆಗಳಲ್ಲಿ ಉಚಿತ ಲಸಿಕೆಯನ್ನು ವಾರ್ಡುವಾರು ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಲೀಂ ಅಹ್ಮದ್, ವಿಧಾನ ಪರಿಷತ್ ಸದಸ್ಯರಾದ ಯು.ಬಿ. ವೆಂಕಟೇಶ್, ಕೆ.ಸಿ. ಕೊಂಡಯ್ಯ, ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ, ಮುಖಂಡರಾದ ಸಚಿನ್ ಮಿಗಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಅಬ್ದುಲ್ ಜಬ್ಬಾರ್, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಪ್ರಸಾದ ನಿಲಯದಲ್ಲಿ ಇಂದು ಮಧ್ಯಾಹ್ನ ಈ ಕಾರ್ಯಕ್ರಮ ಏರ್ಪಾಡಾಗಿತ್ತು. ಕೋವಿಡ್ ಲಸಿಕಾ ಶಿಬಿರದ ಉದ್ಘಾಟನೆಗೂ ಮುನ್ನಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ದುರ್ಗಾಂಬಿಕಾ ದೇವಾಲಯಕ್ಕೆ ತೆರಳಿ ದೇವಿಯ ದರ್ಶನ ಪಡೆದರು.

error: Content is protected !!