ದಾವಣಗೆರೆ, ಜೂ.4- ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಆಗಿರುವ ಲಾಕ್‌ಡೌನ್ ಪರಿಣಾಮ ಬಡ ಮತ್ತು ಮದ್ಯಮ ವರ್ಗದವರು, ವರ್ತಕರು, ಕಾರ್ಮಿಕರು, ರೈತರಿಗೆ ಆಗುತ್ತಿರುವ ಅನಾನೂಕೂಲತೆಯನ್ನು ಪರಿಶೀಲಿಸಿ, ಪರಿಹಾರವನ್ನು ಒದಗಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ವಾರದಲ್ಲಿ 2 ದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ ಕಿರಾಣಿ, ತರಕಾರಿ, ಹಣ್ಣು ಹಾಗೂ ಹೂ ಮತ್ತಿತರೆ ಖರೀದಿಸಲು ಅನುಮತಿ ನೀಡಲಾಗಿದೆ. ಆದರೆ, ಅವಶ್ಯವಾದ ಬೆಳ್ಳಿ-ಬಂಗಾರ, ಸ್ಟೇಷನರಿ, ಆಟೋ ಮೊಬೈಲ್ ವಸ್ತುಗಳನ್ನೂ ಖರೀದಿಸಲು ಅವಕಾಶ ನೀಡುವಂತೆ ಛೇಂಬರ್ ಕೇಳಿಕೊಂಡಿದೆ.
ಕೃಷಿ ಅವಲಂಬಿತ ಕೈಗಾರಿಕೆಗಳು, ಕೃಷಿ ಉಪಕರಣ, ಬೀಜ – ಗೊಬ್ಬರದ ಅಂಗಡಿ, ಸಿಮೆಂಟ್, ಕಬ್ಬಿಣ, ಬಣ್ಣ ಮುಂತಾದ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ತೆರೆಯಲು ಜಿಲ್ಲಾಡಳಿತ ಅವಕಾಶ ನೀಡಿದೆ. ಆದರೆ, ರೈತರು, ಕಟ್ಟಡಗಳ ಮಾಲೀಕರು ತಮಗೆ ಬೇಕಾದ ವಸ್ತುಗಳ ಖರೀದಿಗೆ ಹೋದರೆ, ಪೊಲೀಸರು ರಸ್ತೆಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ, ಅಂಗಡಿಗಳಿಗೆ ಹೋಗಲು ಬಿಡುತ್ತಿಲ್ಲ ಎಂದು ಛೇಂಬರ್ ದೂರಿದೆ.
ಸರ್ಕಾರಿ ಆಸ್ಪತ್ರೆಗಳ ಮುಂದೆ ಲಸಿಕೆ ಹಾಕಿಸಿಕೊಳ್ಳಲು ಜನ ಜಂಗುಳಿ ಇರುತ್ತದೆ. ಇದರಿಂದ ಸೋಂಕು ಹರಡುವ ಅಪಾಯವಿದೆ. ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಬೇಕು ಎಂದು ಛೇಂಬರ್ ಒತ್ತಾಯಿಸಿದೆ.
ಕೊರೊನಾ 2ನೇ ಅಲೆಯ ವಿಷಮ ಪರಿಸ್ಥಿತಿಯಲ್ಲಿ ಜನರ ಜೀವ ಉಳಿಯ ಬೇಕು, ಜೀವನವೂ ನಡೆಯಬೇಕು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಛೇಂಬರ್ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣ, ಉಪಾಧ್ಯಕ್ಷ ಮಾಗಾನಹಳ್ಳಿ ನಿಜಾನಂದಪ್ಪ, ಕಾರ್ಯದರ್ಶಿ ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ ಅವರುಗಳು ಜಿಲ್ಲಾಧಿ ಕಾರಿ ಮಹಾಂತೇಶ್ ಬೀಳಗಿ ಅವರನ್ನು ಭೇಟಿ ಮಾಡಿ, ಲಿಖಿತ ಮನವಿ ಪತ್ರ ಸಲ್ಲಿಸಿದ್ದಾರೆ.