ಲಾಕ್‌ಡೌನ್‌ ನಡುವೆ ಬೆಲೆ ಏರಿಕೆ ಬಿಸಿ

ಹರಿಹರದಲ್ಲಿ ಅಂತರ ಮರೆತು ಖರೀದಿಗಿಳಿದ ಜನರು

ತರಕಾರಿ ವ್ಯಾಪಾರಸ್ಥರಿಗೆ ದರಪಟ್ಟಿ ನೀಡಲಾಗಿದೆ. ದರಪಟ್ಟಿ ಬಿಟ್ಟು, ಇಷ್ಟ ಬಂದಂತೆ ದರ ಏರಿಸಿ ಮಾರಾಟ ಮಾಡುತ್ತಿರುವುದು ನಮ್ಮ ಗಮನಕ್ಕೆ ಕ್ರಮ ಕೈಗೊಳ್ಳಲಾಗುವುದು.

ಎಸ್. ಲಕ್ಷ್ಮಿ , ಪೌರಾಯುಕ್ತೆ

ಹರಿಹರ, ಜೂ.3- ಕೊರೊನಾ ರೋಗ ಹಾಗೂ ಲಾಕ್‌ಡೌನ್‌ನಿಂದ ಉದ್ಭವಿಸಿರುವ ಸಮಸ್ಯೆಗಳು ಈಗಾಗಲೇ ಸಾರ್ವಜನಿಕರನ್ನು ತಲ್ಲಣಗೊಳಿಸಿದ್ದು, ಇದರ ಜೊತೆಗೆ ಹಣ್ಣು-ತರಕಾರಿ, ದಿನಸಿ ಪದಾರ್ಥಗಳು, ಮಟನ್, ಚಿಕನ್‌ ಬೆಲೆಗಳು ಗಗನಕ್ಕೇರಿ ಗಾಯದ ಮೇಲೆ ಬರೆ ಎಳೆದಂತಾಗಿದೆ.

ನಗರಸಭೆ, ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆ, ತಾ.ಪಂ. ಕಚೇರಿ, ಬಿಸಿಎಂ ಇಲಾಖೆ, ಕೃಷಿ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಪ್ರತಿನಿತ್ಯವೂ ಜವಾಬ್ದಾರಿಯಿಂದ ಕೊರೊನಾ ತೊಲಗಿಸಲು ಹಗಲು, ರಾತ್ರಿ ಎನ್ನದೆ ಶ್ರಮವಹಿಸಿ ಕೆಲಸ ಮಾಡುತ್ತಿದ್ದು, ತಾಲ್ಲೂಕು ಆಡಳಿತ ಎಲ್ಲಾ ಇಲಾಖೆಯಲ್ಲಿ ಯಾವುದೇ ತೊಂದರೆ ಬರದಂತೆ ಬೇಕಾಗುವ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.

ಇಂತಹ ಸಂದರ್ಭದಲ್ಲಿ ಕೆಲವು ದಿನಸಿ ಅಂಗಡಿಯವರು ಮತ್ತು ತರಕಾರಿ ಅಂಗಡಿಯವರು, ಪಾನ್‌ಬೀಡಾ ಅಂಗಡಿಯವರು ದುಪ್ಪಟ್ಟು ದರಗಳಲ್ಲಿ ವಸ್ತುಗಳನ್ನು ಮಾರಾಟ ಮಾಡುವುದಕ್ಕೆ ಮುಂದಾಗಿದ್ದಾರೆ.

ಅಕ್ಕಿ 25 ಕೆ.ಜಿ. ಪಾಕೆಟ್ 1000 ದಿಂದ 1400 ರೂ. ಎಣ್ಣೆ ಟಿನ್ 2,700 ರೂ., ಬೇಳೆ ಕೆ.ಜಿ. 100 ರೂ., ಸಕ್ಕರೆ ಕೆ.ಜಿ. 45 ರೂ., ಟೀ ಪುಡಿ ಕೆ.ಜಿ. 240 ರೂ. , ಮತ್ತು ಎಲ್ಲಾ  ಕಾಳುಗಳ ದರದಲ್ಲಿ ಏರಿಕೆಯಾಗಿದೆ. ತರಕಾರಿ ಈರುಳ್ಳಿ ಕೆ.ಜಿ‌. 30 ರೂ., ಬೀನ್ಸ್ 100 ರೂ., ಕ್ಯಾರೆಟ್ 60 ರೂ., ಬೆಂಡೆಕಾಯಿ 40 ರೂ., ಮೆಣಸಿನಕಾಯಿ 40 ರೂ., ಹೀರೆಕಾಯಿ 80 ರೂ.,  ಜವಳೆಕಾಯಿ 40 ರೂ., ಆಲೂಗೆಡ್ಡೆ 40 ರೂ., ಬೆಳ್ಳುಳ್ಳಿ 80 ರೂ., ಹುಣಸೆ ಹಣ್ಣು 120  ರೂ., ಟೊಮ್ಯಾಟೋ 20 ರೂ.,  ಕೊತ್ತಂಬರಿ ಸೊಪ್ಪು 10 ರೂ.,  ಮೆಂತೆ 10 ರೂ., ಪುದೀನಾ 8, ಸಬಸ್ಸಿಗೆ 15, ಮೂಲಂಗಿ 20 ರೂಪಾಯಿಗೆ ಮೂರು, ಹೀಗೆ ವಿವಿಧ ತರಕಾರಿಗಳ ದರ ಏರಿಕೆಯಾಗಿದ್ದರೆ, ಗುಟ್ಕಾ, ಸಿಗರೇಟ್, ಮಟನ್, ಚಿಕನ್, ಬೆಲೆ ಕೇಳುವ ಹಾಗೆಯೇ ಇರಲಿಲ್ಲ. 

ಸೋಮವಾರ ಮತ್ತು ಗುರುವಾರ ಬೆಳಗ್ಗೆ 6 ಗಂಟೆಯಿಂದ 12 ಗಂಟೆಯವರೆಗೆ ಲಾಕ್ ಡೌನ್ ಸಡಿಲಿಸಿ ಸಾರ್ವಜನಿಕರು ವಸ್ತುಗಳನ್ನು ಖರೀದಿಸಲು ಅವಕಾಶ ನೀಡಲಾಗಿದ್ದು,  ಗಾಂಧಿ ಮೈದಾನದಲ್ಲಿ ಜನರ ದಂಡೇ ನೆರೆದಿತ್ತು.  ಸಾಮಾಜಿಕ ಅಂತರ ಮರೆತಿದ್ದರು. ಕೆಲವರಂತೂ ಮಾಸ್ಕ್ ಧರಿಸದೆ ಬೀದಿಗಿಳಿದಿದ್ದರು.

error: Content is protected !!