ರಾಜ ಕಾಲುವೆ, ಹೈಟೆನ್ಷನ್ ವೈರ್ ಜಾಗ ಒತ್ತುವರಿ: ಜನಸ್ಪಂದನದಲ್ಲಿ ದೂರು

ಅಕ್ರಮ ಕಟ್ಟಡಗಳ ತೆರವು, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಜನಸ್ಪಂದನೆಯಲ್ಲಿ ಮನವಿ ಸಲ್ಲಿಕೆ

ದಾವಣಗೆರೆ, ಮಾ. 18 – ನಗರದಲ್ಲಿ ರಾಜ ಕಾಲುವೆ ಹಾಗೂ ಹೈಟೆನ್ಷನ್ ವೈರ್‌ಗಳ ಕೆಳಗಿನ ಜಾಗಗಳೂ ಸೇರಿದಂತೆ ಸರ್ಕಾರಿ ಜಾಗ ಒತ್ತುವರಿ ಮಾಡಿ ಅಕ್ರಮವಾಗಿ ಕಟ್ಟಿರುವ ಮನೆ ಮತ್ತು ಕಟ್ಟಡಗಳನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಅರ್ಜಿ ದಾಖಲಿಸಲಾಗಿದೆ.

ಜಿಲ್ಲಾ ಕನ್ನಡ ಪರ ಸಂಘಟನೆಗಳು ಒಕ್ಕೂಟದ ಪರವಾಗಿ ಕೆ.ಜಿ. ಎಲ್ಲಪ್ಪ ಗೌಡ, ಅವಿನಾಶ್ ಮತ್ತಿತರರು ಅರ್ಜಿ ದಾಖಲಿಸಿದ್ದು, ಈಗ ಕೆಡವಲಾಗಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಬಳಿಯ ರಾಜ ಕಾಲುವೆ ಸೇರಿದಂತೆ ಹಲವೆಡೆ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಬಡವರು ಅಕ್ರಮವಾಗಿ ಮನೆ ಕಟ್ಟಿಕೊಂಡಿರುವುದನ್ನು ಕೆಡವಿ, ಉಳ್ಳವರು ಕೋರ್ಟ್ ಮೊರೆ ಹೋಗಲು ಅವಕಾಶ ಕೊಡಲಾಗುತ್ತಿದೆ. ಈ ರೀತಿ ಒತ್ತುವರಿಗೆ ಅವಕಾಶ ಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಎಂದು ಒತ್ತಾಯಿಸಿದರು. ಈ ಬಗ್ಗೆ ಜಿಲ್ಲಾಡಳಿತ, ನಗರ ಪಾಲಿಕೆ ಹಾಗೂ ದೂಡಾ ಸೇರಿಕೊಂಡು ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಬೀಳಗಿ ಸೂಚಿಸಿದರು.

ಚನ್ನಗಿರಿ ತಾಲ್ಲೂಕಿನ ನಲ್ಲೂರಿನಲ್ಲಿ ಭಾನುವಾರ ಮಧ್ಯಾಹ್ನ ಔಷಧಿ ಅಂಗಡಿಯವರು ಬಾಗಿಲು ಮುಚ್ಚುತ್ತಿದ್ದಾರೆ. ಭಾನುವಾರ ಆಸ್ಪತ್ರೆಗಳೂ ಸಿಗುವುದಿಲ್ಲ. ಹೀಗಾಗಿ ಜನರು ಬಹಳ ಸಂಕಷ್ಟದಲ್ಲಿದ್ದಾರೆ ಎಂದು ಕನ್ನಡ ಜಾಗೃತಿ ಸಮಿತಿಯ ಮಂಜಪ್ಪ ದೂರಿದರು. ಔಷಧಿ ಅಂಗಡಿ ಮುಚ್ಚುವುದು ಕಾಯ್ದೆಗೆ ವಿರುದ್ಧ ಎಂದು ಹೇಳಿದ ಡಾ. ನಾಗರಾಜ್, ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು‌.

ಚನ್ನಗಿರಿ ತಾಲ್ಲೂಕಿನ ಕೆರೆಬಿಳಚಿ ಗ್ರಾಮಕ್ಕೆ ದಾವಣಗೆರೆಯಿಂದ ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯ ಕಲ್ಪಿಸಲು ಜಿಲ್ಲಾಧಿಕಾರಿಗಳು ಕಳೆದ ಫೆಬ್ರವರಿ 18ರಂದು ಸೂಚನೆ ನೀಡಿದ್ದರೂ, ಇದುವರೆಗೂ ಕ್ರಮ ತೆಗೆದುಕೊಂಡಿಲ್ಲ ಎಂದು ವಿದ್ಯಾರ್ಥಿ ಹೈದರ್ ಅಲಿ ಖಾನ್ ಅವರು ದೂರಿದರು. 

ನ್ಯಾಮತಿಯ ಶಿವಾನಂದಪ್ಪ ಬಡಾವಣೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಅಕ್ರಮವಾಗಿ ಕಟ್ಟಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸುವಂತೆ ಹಾಗೂ ನೀರು ಮತ್ತು ವಿದ್ಯುತ್ ಸೌಲಭ್ಯ ಕಲ್ಪಿಸಬೇಕು. ಅಲ್ಲದೇ, ನಿಯಮ ಬಾಹಿರವಾಗಿ 15 ಕುಟುಂಬಗಳಿಗೆ ಹಕ್ಕು ಪತ್ರ ನೀಡಿರುವ ಕುರಿತು ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಮಾದಿಗ ದಂಡೋರ ಸಮಿತಿ ಪರವಾಗಿ ಮನವಿ ಸಲ್ಲಿಸಲಾಯಿತು. 

ಎರಡು ವರ್ಷಗಳ ಹಿಂದೆ ತಮ್ಮ ಸಹೋದರಿಯನ್ನು ಸೌದಿ ಅರೇಬಿಯಾಗೆ ಕೆಲಸಕ್ಕೆ ಕರೆದುಕೊಂಡು ಹೋದವರು ಬಲವಂತವಾಗಿ ಅಲ್ಲೇ ಇರಿಸಿಕೊಂಡಿದ್ದಾರೆ ಎಂದು ನಗರದ ಶಿವನಗರದ ನಸ್ರೀನ್ ಬಾನು ಎಂಬುವವರು ದೂರಿದರು. ಈ ಬಗ್ಗೆ ಸಂಸದರು ಹಾಗೂ ವಿದೇಶಾಂಗ ಇಲಾಖೆಯ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ,  ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಡಿಹೆಚ್‍ಒ ಡಾ.ನಾಗರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ರೇಷ್ಮಾ ಕೌಸರ್ ಸೇರಿದಂತೆ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!