ಆಧಾರ್ ಕೊಡುತ್ತಿಲ್ಲ, ಲಸಿಕೆ ಪಡೆಯುತ್ತಿಲ್ಲ

ಜಿಲ್ಲಾ ಸಮನ್ವಯ ಸಮಿತಿಯಲ್ಲಿ ಹಾಸ್ಟೆಲ್‌ಗಳಿಗೆ ಟ್ಯಾಂಕರ್ ನೀರು ಪೂರೈಕೆಗೆ ಸೂಚನೆ

ದಾವಣಗೆರೆ, ಮಾ. 18 – ರಾಜ್ಯ ಸರ್ಕಾರ ಬಿ.ಪಿ.ಎಲ್. ಕಾರ್ಡುಗಳ ಪರಿಶೀಲನಾ ಕ್ರಮ ತೆಗೆದುಕೊಳ್ಳುತ್ತಿದೆ. ಇದಕ್ಕಾಗಿ ಅಧಿಕಾರಿಗಳಿಂದ ಹೆಸರು, ವಿಳಾಸ, ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆಯ ವಿವರ ಬೇಕಿದೆ. ಪ್ರಮುಖ ಕಚೇರಿಗಳು ಇನ್ನೂ ಮಾಹಿತಿ ನೀಡಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಸಮನ್ವಯ ಸಮಿತಿಯ ಸಭೆಗೆ ತಿಳಿಸಲಾಯಿತು.

ಮಾಹಿತಿ ಕೇಳಿದಾಗ ಕೆಲ ಇಲಾಖೆಗಳು ಅಧಿಕಾರಿಗಳ ನಿಯೋಜನೆಗೆ ಪತ್ರ ಬರೆಯಲಾಗಿದೆ ಎಂದು ತಪ್ಪಾಗಿ ತಿಳಿದಿವೆ ಎಂದು ಆಹಾರ ಇಲಾಖೆಯ ಅಧಿಕಾರಿ ತಿಳಿಸಿದರು. ಈ ವಿಷಯ ಪರಿಗಣಿಸಿದ ಜಿಲ್ಲಾಧಿಕಾರಿ, ಶನಿವಾರದ ಒಳಗೆ ಎಲ್ಲ ಕಚೇರಿಗಳು ತಮ್ಮ ನೌಕರರ ಆಧಾರ್ ಕಾರ್ಡ್ ಮತ್ತಿತರೆ ವಿವರಗಳನ್ನು ಆಹಾರ ಇಲಾಖೆಗೆ ನೀಡಬೇಕೆಂದು ತಿಳಿಸಿದರು.

ಹಲವಾರು ಇಲಾಖೆಗಳ 45 ವರ್ಷ ಮೀರಿದ ಸಹ ಅಸ್ವಸ್ಥತೆ ಹೊಂದಿದವರು ಹಾಗೂ ಲಸಿಕೆಗೆ ಅರ್ಹತೆ ಪಡೆದವರು ಒಂದು ಸುತ್ತಿನ ಕೊರೊನಾ ಲಸಿಕೆ ಪಡೆದ ನಂತರ ಎರಡನೇ ಸುತ್ತಿಗೆ ಬಂದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್ ತಿಳಿಸಿದರು. ಮಧ್ಯ ವಯಸ್ಸಿನವರೇ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೊರೊನಾ ಸೋಂಕಿಗೆ ಗುರಿಯಾಗುತ್ತಿದ್ದಾರೆ ಎಂದು ತಿಳಿಸಿದ ಜಿಲ್ಲಾಧಿಕಾರಿ ಬೀಳಗಿ, ತ್ವರಿತವಾಗಿ ಅಧಿಕಾರಿಗಳು ಲಸಿಕೆ ಪಡೆಯುವಂತೆ ಕಿವಿಮಾತು ಹೇಳಿದರು. ಗಿರಿಯಪ್ಪ ಲೇಔಟ್ ಹಾಗೂ ಎಂ.ಸಿ.ಸಿ. ಬಿ ಬ್ಲಾಕ್‌ನಲ್ಲಿರುವ ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಿಗೆ ನಗರ ಪಾಲಿಕೆಯಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಕೆಲವು ಹಾಸ್ಟೆಲ್‌ಗಳಲ್ಲಿ ಬೋರ್‌ಗಳು ವಿಫಲವಾಗಿದ್ದರೆ, ಇನ್ನು ಕೆಲವೆಡೆ ನೀರು ಕಡಿಮೆ ಇದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ರೇಷ್ಮ ಕೌಸರ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಆರ್. ಗಂಗಪ್ಪ ತಿಳಿಸಿದರು. ಹಾಸ್ಟೆಲ್‌ಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಸ್ಮಾರ್ಟ್ ಸಿಟಿ ಬ್ಯಾರೇಜ್‌ಗೆ ಜಮೀನು ವಶಪಡಿಸಿಕೊಳ್ಳಬೇಕಿದ್ದು, ಇದಕ್ಕಾಗಿ ಅಗತ್ಯ ಹಣ ನೀಡಲು ಸಿದ್ಧವಿದ್ದರೂ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ತಿಳಿಸಿದರು. ಈ ಬಗ್ಗೆ ತ್ವರಿತ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ತಿಪ್ಪಗೊಂಡನಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ : ನಾಡಿದ್ದು ದಿನಾಂಕ 20ರ ಶನಿವಾರ ಚನ್ನಗಿರಿ ತಾಲ್ಲೂಕಿನ ತಿಪ್ಪಗೊಂಡನಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ನಡೆಸಲಾಗುವುದು. ನ್ಯಾಮತಿ ತಾಲ್ಲೂಕು ಮಲ್ಲಿಗೇನಹಳ್ಳಿಯಲ್ಲಿ ಇದೇ ದಿನಾಂಕ 24ರಂದು 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ §ಕನಸು ಬಿತ್ತುವ, ರಾಷ್ಟ್ರ ಕಟ್ಟುವ¬ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಜಿಲ್ಲಾಧಿಕಾರಿ ಇದೇ ಸಂದರ್ಭದಲ್ಲಿ ತಿಳಿಸಿದರು.

error: Content is protected !!