ಮೆಕ್ಕೆಜೋಳದೊಂದಿಗೆ ಮಿಶ್ರ ಬೆಳೆ ಸೂಕ್ತ

ದಾವಣಗೆರೆ, ಜೂ.2- ರೈತರು ಪ್ರತಿ ವರ್ಷ ಮೆಕ್ಕೆಜೋಳ ಬೆಳೆಯುವ ಮೂಲಕ ಏಕ ಬೆಳೆ ಪದ್ಧತಿಯನ್ನೇ ಅನುಸರಿಸುತ್ತಿದ್ದು, ಇಲ್ಲಿಯವರೆಗೂ ಯಾವುದೇ ಬೆಳೆ ಪರಿವರ್ತನೆ ಮಾಡದೇ ಇರುವುದು ಸರಿಯಲ್ಲ.  ಮೆಕ್ಕೆಜೋಳದೊಂದಿಗೆ ಮಿಶ್ರ ಬೆಳೆ ಅನುಸರಿಸುವುದು ಸೂಕ್ತ ಎಂದು ಎಂದು ಶಾಸಕ ಪ್ರೊ. ಲಿಂಗಣ್ಣ ತಿಳಿಸಿದರು.

ಮಾಯಕೊಂಡ ಹೋಬಳಿ ಹಿಂಡಸಘಟ್ಟ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ರಾಷ್ಟ್ರೀಯ ಆಹಾರ ಭದ್ರತಾ (ಎನ್‍ಎಫ್‍ಎಸ್‍ಎಂ) ಯೋಜನೆಯಡಿ ಇಂದು ಏರ್ಪಾಡಾಗಿದ್ದ ರೈತರಿಗೆ ಉಚಿತವಾಗಿ ತೊಗರಿ ಮಿನಿ ಕಿಟ್ ಅಥವಾ ಕಿರುಚೀಲ ವಿತರಿಸುವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. 

ರೈತರು ಯಾವುದಾದರೂ ಅಂತರ ಬೆಳೆ ಬೆಳೆಯಲು ಅನುಕೂಲವಾಗುವಂತಹ ಕಾರ್ಯಕ್ರಮ ಹಮ್ಮಿಕೊಂಡು ರೈತರಿಗೆ ಸಹಾಯ ಮಾಡಬೇಕೆಂದು ಕೃಷಿ ಇಲಾಖೆಯವರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಅದರಂತೆ ಪ್ರಸಕ್ತ ಮುಂಗಾರಿನಲ್ಲಿ ಸುಮಾರು 2000 ಹೆಕ್ಟೇರ್ ಪ್ರದೇಶಕ್ಕೆ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ತೊಗರಿ ಕಿರು ಚೀಲ ವಿತರಣೆ ಕಾರ್ಯಕ್ರಮ ಬಂದಿದ್ದು, ಅದರಂತೆ ಈ ಗ್ರಾಮದಲ್ಲಿ ವಿತರಣೆ ಮಾಡುತ್ತಿದ್ದೇವೆ. ರೈತರು ಯೋಜನೆಯ ಕುರಿತು ಇಲಾಖೆಯೊಂದಿಗೆ ತಾಂತ್ರಿಕ ಮಾಹಿತಿ ಪಡೆದು, ವ್ಶೆಜ್ಞಾನಿಕವಾಗಿ ರಸಗೊಬ್ಬರ ಬಳಕೆ ಮಾಡಿಕೊಂಡು ಉತ್ಪಾದನೆ ಹೆಚ್ಚಿಸಿಕೊಳ್ಳಬೇಕು ಎಂದು ಲಿಂಗಣ್ಣ ಸಲಹೆ ನೀಡಿದರು.

ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಣಬೇರು ಜೀವನಮೂರ್ತಿ ಮಾತನಾಡಿ, ಆಧುನಿಕ ಬೇಸಾಯ ಪದ್ಧತಿಯಿಂದ ಏಕ ಬೆಳೆ, ಕೇವಲ ರಾಸಾಯನಿಕ ಗೊಬ್ಬರ ಬಳಕೆ, ಅತಿಯಾದ ಕೀಟನಾಶಕ ಬಳಕೆ ಮಾಡುತ್ತಿರುವುದರಿಂದ ಇಂದು ರೋಗಯುಕ್ತ, ಒತ್ತಡಯುಕ್ತ ಜೀವನ ಹಾಗೂ ಸಾಲದ ಸುಳಿಯಲ್ಲಿ ರೈತ ಸಿಲುಕಿಕೊಂಡಿದ್ದಾನೆ. ಅದರಿಂದ ಹೊರ ಬರಲು ಏಕ ಬೆಳೆ ಬದಲು ಅಂತರ ಬೆಳೆ ಅಥವಾ ಬಹು ಬೆಳೆ ಬೆಳೆಯಬೇಕು ಎಂದು ಅವರು ರೈತರಿಗೆ ಮನವಿ ಮಾಡಿದರು.

ಉಪ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ ಮಾತನಾಡಿ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ವಿತರಿಸುತ್ತಿರುವ ಟಿಎಸ್3ಆರ್ ಕಿರುಚೀಲದ ತೊಗರಿ ತಳಿ ವೈಜ್ಞಾನಿಕ ವಿವರಗಳನ್ನು ಮತ್ತು ಅದರ ನಿರ್ವಹಣೆ ಬಗ್ಗೆ ಮಾಹಿತಿ ನೀಡಿ ತಾವು ಉತ್ತಮವಾಗಿ ಈ ಹಂಗಾಮಿನಲ್ಲಿ ಬೆಳೆದು ಅದೇ ಬೀಜಗಳನ್ನು ಮುಂದಿನ ಮೂರು ಹಂಗಾಮಿಗೆ ಬಳಕೆ ಮಾಡಿಕೊಳ್ಳಬಹುದು. ಇದರಿಂದ ಬಿತ್ತನೆ ಬೀಜಕ್ಕಾಗಿ ಇಲಾಖೆ ಅಥವಾ ಅಂಗಡಿಗಳ ಬಾಗಿಲಿಗೆ ಅಲೆದಾಡುವುದನ್ನು ತಪ್ಪಿಸಬಹುದು. 

ಮೆಕ್ಕೆಜೋಳದಲ್ಲಿ ತೊಗರಿ ಬೆಳೆಯನ್ನು ಅಂತರ ಬೆಳೆಯನ್ನಾಗಿ ಬೆಳೆಯುವುದರಿಂದ ಮೆಕ್ಕೆಜೋಳದ ಇಳುವರಿಯಲ್ಲಿ ಬದಲಾವಣೆ ಯಾಗುವುದಿಲ್ಲ.  ಜೊತೆಗೆ ಹೆಚ್ಚುವರಿಯಾಗಿ 2 ರಿಂದ 3 ಕ್ವಿಂಟಾಲ್ ಪ್ರತಿ ಎಕರೆಗೆ ತೊಗರಿ ಉತ್ಪಾದನೆಯಾಗುವುದರಿಂದ ಪ್ರಸ್ತುತ ದರಕ್ಕೆ ಹೋಲಿಸಿದಲ್ಲಿ ಸುಮಾರು 10 ಸಾವಿರದಿಂದ 12 ಸಾವಿರ ರೂ. ಹೆಚ್ಚುವರಿ ಆದಾಯ ಪಡೆಯಬ ಹುದಾಗಿದ್ದು, ಆದಾಯದ ಜೊತೆಗೆ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು ಎಂದು ತಿಳಿಸಿದರು.

ತಾ.ಪಂ. ಮಾಜಿ ಉಪಾಧ್ಯಕ್ಷ ನಾಗರಾಜ್‌, ಮಾಯಕೊಂಡ ಗ್ರಾಮದ ಗಣ್ಯರಾದ ದೇವೇಂದ್ರಪ್ಪ, ಗ್ರಾಮ ಪಂಚಾಯಿತಿ ಸದಸ್ಯರು, ಸಹಾಯಕ ಕೃಷಿ ನಿರ್ದೇಶಕ ಹೆಚ್.ಕೆ.ರೇವಣಸಿದ್ದನಗೌಡ, ಕೃಷಿ ಅಧಿಕಾರಿ ಆರ್.ವಿ. ತೇಜವರ್ಧನ್ ಪ್ರಗತಿ ಪರ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!