ಖರೀದಿ ಕೇಂದ್ರ: ಲಾಕ್‌ಡೌನ್‌ ಹಣಕಾಸನ್ನೂ ಪರಿಗಣಿಸಬೇಕು

ಖರೀದಿ ಕೇಂದ್ರ: ಲಾಕ್‌ಡೌನ್‌ ಹಣಕಾಸನ್ನೂ ಪರಿಗಣಿಸಬೇಕು - Janathavaniದಾವಣಗೆರೆ, ಮೇ 31 – ಭತ್ತದ ಖರೀದಿ ಕೇಂದ್ರ ತೆರೆಯಲು ಕೊರೊನಾ ಪರಿಸ್ಥಿತಿ ಹಾಗೂ ಲಾಕ್‌ ಡೌನ್‌ನಿಂದ ಉಂಟಾದ ಹಣಕಾಸು ವಿಷಯಗಳನ್ನೂ ಪರಿಗಣಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಇಂಗಿತ ವ್ಯಕ್ತಪಡಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾ ಡುತ್ತಿದ್ದ ಅವರಿಗೆ ಭತ್ತದ ಖರೀದಿ ಕೇಂದ್ರ ಸ್ಥಾಪಿಸುವ ಕುರಿತು ಪ್ರಶ್ನಿಸಿದಾಗ, ಈ ಬಗ್ಗೆ ಆಹಾರ ಸಚಿವರ ಜೊತೆ ಮಾತನಾಡಿರುವುದಾಗಿ ಹೇಳಿದರು.

ಕೊರೊನಾ ಸಂದರ್ಭದಲ್ಲಿ ಹೆಚ್ಚು ಸಮಯವನ್ನು ಸೋಂಕು ನಿವಾರಣೆಗೆ ಮೀಸಲಿಡಲಾಗುತ್ತಿದೆ. ರೈತರ ಬಗ್ಗೆಯೂ ಕಾಳಜಿ ಇದೆ. ಏನು ಮಾಡಬೇಕು ಎಂಬುದನ್ನು ಗಮನಿಸುತ್ತಿದ್ದೇವೆ ಎಂದರು.

ಆರ್ಥಿಕ ಪರಿಸ್ಥಿತಿಗಳನ್ನು ಮನಗಾಣಬೇಕಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಸರ್ಕಾರದ ಬೊಕ್ಕಸಕ್ಕೆ ಬರುವ ಹಣ ಇವೆಲ್ಲವನ್ನೂ ಗಮನಿಸಿ ನಿರ್ಧರಿಸಬೇಕಿದೆ ಎಂದವರು ಹೇಳಿದರು.

ಈಗಾಗಲೇ ರೈತರು ಬೆಳೆದ ಬೆಳೆ ಮಾರಾಟವಾಗಿ ಖಾಲಿಯಾಗುತ್ತಿದೆ. ಖರೀದಿ ಕೇಂದ್ರ ತೆರೆಯುವುದು ವಿಳಂಬವಾಗುತ್ತಿದೆ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರೈತರ ಬೆಳೆ ಖಾಲಿ ಆದರೆ ಮತ್ತೆ ಬೆಳೆಯಲ್ಲವಾ? ಮತ್ತೆ ಬರುವ ಬೆಳೆಗೆ ಬೇಡವಾ? ಎಂದು ಕೇಳಿದರು.

ಪಿಕ್‌ನಿಕ್‌ ಸಚಿವನಲ್ಲ : ಪಿಕ್‌ನಿಕ್‌ಗೆ ಬರುವ ಹಾಗೆ ದಾವಣಗೆರೆಗೆ ಬಂದು ಹೋಗುತ್ತಿರುವ ಆರೋಪವನ್ನು ತಳ್ಳಿ ಹಾಕಿರುವ ಸಚಿವ ಬೈರತಿ, ವಾರಕ್ಕೆ ಎರಡು ಬಾರಿ ಜಿಲ್ಲೆಯಲ್ಲಿದ್ದೇನೆ. ದಾವಣಗೆರೆ ಜಿಲ್ಲೆಯ ಜನಪ್ರತಿನಿಧಿ ಎಂದೇ ಭಾವಿಸಿಕೊಂಡಿದ್ದೇನೆ ಎಂದರು. ಕಳೆದ 20 ವರ್ಷಗಳ ಇತಿಹಾಸ ನೋಡಿ. ಯಾವೊಬ್ಬ ಉಸ್ತುವಾರಿ ಸಚಿವ ನನ್ನ ರೀತಿಯಲ್ಲಿ ಸ್ಪಂದನೆ ಮಾಡಿಲ್ಲ ಎಂದ ಅವರು, ನನಗೆ ಇದೊಂದೇ ಜಿಲ್ಲೆಯಲ್ಲದೇ ಸಚಿವನಾಗಿ ಇಡೀ ರಾಜ್ಯದ ಜವಾಬ್ದಾರಿ ಇದೆ. ಪ್ರತಿದಿನ ಪಾಲಿಕೆಗಳ ಅಧಿಕಾರಿಗಳನ್ನು ಸಂಪರ್ಕಿಸಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಇಲಾಖೆಗಳ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದೇನೆ ಎಂದರು.

error: Content is protected !!