ಜಿಲ್ಲಾಧಿಕಾರಿ ವಿರುದ್ಧ ಶಾಸಕರ ಆರೋಪ ಸರಿಯಲ್ಲ: ಸಚಿವ ಭೈರತಿ
ಹರಿಹರ, ಮೇ 31- ಕೊರೊನಾ ರೋಗದ ಸಮಸ್ಯೆ ಹೆಚ್ಚಾಗುತ್ತಿದ್ದಂತೆ ನಾನು ಮೂರು ಬಾರಿ ಭೇಟಿ ನೀಡಿ ಜಿಲ್ಲೆಯ ಎಲ್ಲಾ ತಾಲ್ಲೂಕಿಗೆ ಸರಿ ಸಮಾನ ವಾದ ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದ್ದು, ಯಾವುದೇ ತಾಲ್ಲೂಕಿಗೆ ತಾರತಮ್ಯ ಮಾಡಿರುವುದಿಲ್ಲ. ಸ್ಥಳೀಯ ಶಾಸಕರು ಯಾವ ರೀತಿಯಲ್ಲಿ ಕೆಲಸ ಮಾಡುತ್ತಾರೆ ಮತ್ತು ಅಧಿಕಾರಿಗಳಿಂದ ಯಾವ ರೀತಿ ಕೆಲಸವನ್ನು ತೆಗೆದುಕೊಳ್ಳು ತ್ತಾರೆ ಎಂಬುದು ಮುಖ್ಯವಾಗಿರುತ್ತದೆ. ಅದನ್ನು ಬಿಟ್ಟು ಜಿಲ್ಲಾಧಿಕಾರಿಗಳ ಮೇಲೆ ಸ್ಥಳೀಯ ಶಾಸಕರು ಆರೋಪಗಳನ್ನು ಮಾಡುವುದು ಉತ್ತಮ ಬೆಳವಣಿಗೆಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು 70 ಲಕ್ಷ ರೂಪಾಯಿ ವೆಚ್ಚದ ಆಕ್ಸಿಜನ್ ಪ್ಲಾಂಟ್ ನಿರ್ಮಾಣದ ಸ್ಥಳ ಪರಿಶೀಲಿಸಿ ಅವರು ಮಾತನಾಡಿದರು.
ನಾನು ಜಿಲ್ಲೆಯ ಜಗಳೂರು, ಮಾಯಕೊಂಡ, ಹೊನ್ನಾಳಿ, ದಾವಣಗೆರೆ, ಚನ್ನಗಿರಿ ಸೇರಿದಂತೆ ಎಲ್ಲಾ ತಾಲ್ಲೂಕಿಗೆ ಏನೇನು ಸಹಕಾರ ಬೇಕೋ ಅದನ್ನು ಒದಗಿಸಲು ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರವನ್ನು ನೀಡಲಾಗಿದೆ. ಅವರು ಸಹ ಹಗಲು ರಾತ್ರಿ ಎನ್ನದೆ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಯಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮತ್ತು ಆರೋಗ್ಯ ಇಲಾಖೆಯ ಜಿಲ್ಲಾ ಅಧೀಕ್ಷಕರಿಗೆ ಮತ್ತು ತಾಲ್ಲೂಕು ಅಧೀಕ್ಷಕರಿಗೆ ಸೌಲಭ್ಯಗಳ ಕೊರತೆ ಬರದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.
ಕೊರೊನಾ ರೋಗದಿಂದ ಮರಣ ಹೊಂದಿದವರ ಸಂಖ್ಯೆಯನ್ನು ಮುಚ್ಚಿಟ್ಟರೆ ನಮಗೆ ಕಿರೀಟ ಬರುವುದಿಲ್ಲ. ಕೊರೊನಾ ರೋಗವು ಪ್ರತಿದಿನ ಎಷ್ಟು ಜನರಿಗೆ ಹರಡುತ್ತಿದೆ. ಮತ್ತು ಎಷ್ಟು ಜನರು ಮರಣವನ್ನು ಹೊಂದಿದರು ಎಂಬುದರ ಬಗ್ಗೆ ಪ್ರತಿನಿತ್ಯವೂ ರಾಜ್ಯದ ಆರೋಗ್ಯ ಇಲಾಖೆಯು ಸಂಪೂರ್ಣವಾಗಿ ಮಾಹಿತಿಯನ್ನು ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.
ನಾವು ಇಂತಹ ಸಮಯದಲ್ಲಿ ರಾಜಕಾರಣ ಮಾಡುವುದು ಸೂಕ್ತವಲ್ಲ. ಸಾರ್ವಜನಿಕರಿಗೆ ಏನು ತೊಂದರೆ ಆಗುತ್ತಿದೆ ಯೋ ಅದರ ಬಗ್ಗೆ ಹೆಚ್ಚು ಗಮನವನ್ನು ಕೊಡಬೇಕಾಗುತ್ತದೆ. ಜನರ ಪ್ರಾಣವನ್ನು ರಕ್ಷಣೆ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲೆ ಹೆಚ್ಚು ಇರುತ್ತದೆ. ಅದಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಹಿಂದಿನ ಉಸ್ತುವಾರಿ ಸಚಿವರು ಮಾಡದ ಕೆಲಸವನ್ನು ನಾನು ಮಾಡುತ್ತಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಬಳಿ ದಾವಣಗೆರೆ ಜಿಲ್ಲೆಯ ಸಮಸ್ಯೆಗಳನ್ನು ಪರಿಹರಿಸಲು ತಿಳಿಸಲಾಗಿದೆ. ಮತ್ತು ದಾವಣಗೆರೆ ಸಿಜಿ ಆಸ್ಪತ್ರೆಯನ್ನು ಹೊಸದಾಗಿ ಕಟ್ಟಲು 200 ಕೋಟಿ ಬಿಡುಗಡೆ ಮಾಡುವಂತೆ ಮನವಿಯನ್ನು ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಅದೂ ಕೂಡಾ ಆಗಲಿದೆ ಎಂದರು.
ಸರ್ಕಾರ ಇತ್ತೀಚೆಗೆ ವಿಶೇಷವಾಗಿ ತಜ್ಞ ವೈದ್ಯರ ಮತ್ತು ಸರ್ಜನ್‌ಗಳ ನೇಮಕಾತಿ ಮಾಡುವುದಕ್ಕೆ ಆದೇಶವನ್ನು ನೀಡಿದೆ. ಅದರಂತೆ ಖಾಸಗಿ ವೈದ್ಯರು ಸೇವೆಯನ್ನು ಮಾಡಲು ಮುಂದೆ ಬಂದರೆ ಅವರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು. ಹರಿಹರ ತಾಲ್ಲೂಕಿನಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದಾರೆ ಎಂದು ನಮಗೆ ದಾಖಲೆ ಸಮೇತ ನೀಡಿದರೆ ಹಿಂದೆ ಮುಂದೆ ನೋಡದೆ ಅಧಿಕಾರಿಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಮಾಹಂತೇಶ್ ಬೀಳಗಿ ಮಾತನಾಡಿ, ತಾಲ್ಲೂಕಿನಲ್ಲಿ ವೃದ್ಧಾಪ್ಯ ವೇತನ ಬಿಡುಗಡೆ ಮಾಡುವುದಕ್ಕೆ ಪ್ಲಾನಿಂಗ್ ಸೆಕ್ಟರ್ ಕಾರ್ಯದರ್ಶಿಯವರ ಬಳಿ ಚರ್ಚೆ ಮಾಡಲಾಗಿದೆ ಇನ್ನೂ ಸ್ವಲ್ಪ ದಿನದಲ್ಲಿ ವೃದ್ಧಾಪ್ಯ ವೇತನವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯಪ್ಪ ಮಾತನಾಡಿ, ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆ ಎಂದು ಶಾಸಕ ಎಸ್. ರಾಮಪ್ಪನವರು ಹೇಳಿದರೆ ಸಾಲದು ಯಾರು ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆ ಅವರ ಮೇಲೆ ಪ್ರಕರಣ ದಾಖಲಿಸಬೇಕು ಅದನ್ನು ಬಿಟ್ಟು ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ನಾಗರಾಜ್ ಮಾತನಾಡಿ, ಹರಿಹರ ತಾಲ್ಲೂಕಿನಲ್ಲಿ ಒಂದು ಆಕ್ಸಿಜನ್ ಕೇಂದ್ರವನ್ನು ತೆರೆಯಲಾಗುತ್ತದೆ ಎಂದು ತಿಳಿಸಲಾಗಿತ್ತು. ಅದರಂತೆ ನಾಳೆ ಅಥವಾ ನಾಡಿದ್ದು ಗುದ್ದಲಿ ಪೂಜೆಯನ್ನು ಸಚಿವ ಭೈರತಿ ಬಸವರಾಜ್, ಸಂಸದರಾದ ಜಿ.ಎಂ. ಸಿದ್ದೇಶ್ವರ್, ಶಾಸಕ ಎಸ್. ರಾಮಪ್ಪ ಮಾಡಲಿದ್ದಾರೆ. ಸುಮಾರು ಸುಮಾರು 70 ಲಕ್ಷ ರೂಪಾಯಿ ವೆಚ್ಚದ 20×30 ಅಳತೆ ಜಾಗದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ದಾವಣಗೆರೆ ಉಪವಿಭಾಗಧಿಕಾರಿ ಮಮತಾ ಹೊಸಗೌಡ್ರು, ಜಿಲ್ಲಾ ಆರೋಗ್ಯ ನ್ಯೂಡಲ್ ಅಧಿಕಾರಿ ನಟರಾಜ್, ತಹಶೀಲ್ದಾರ ಕೆ.ಬಿ. ರಾಮಚಂದ್ರಪ್ಪ, ಆಸ್ಪತ್ರೆ ಆಡಳಿತಾಧಿಕಾರಿ ಡಾ. ಹನುಮನಾಯ್ಕ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಚಂದ್ರಮೋಹನ್, ಪೌರಾಯುಕ್ತೆ ಎಸ್. ಲಕ್ಷ್ಮೀ, ತಾ.ಪಂ. ಇಓ ಗಂಗಾಧರನ್, ಕೆ.ಜಿ. ಕೃಷ್ಣ ಇನ್ನಿತರರು ಹಾಜರಿದ್ದರು.