ರೈತರ ಬೆಳೆಗಳನ್ನು ನೀವೇ ಕೊಂಡುಕೊಳ್ಳಬೇಕು

ರಾಣೇಬೆನ್ನೂರಿನಲ್ಲಿ ರಾಜ್ಯ ಸರ್ಕಾರಕ್ಕೆ ಡಿ.ಕೆ.ಶಿವಕುಮಾರ್ ಡಿಮ್ಯಾಂಡ್

ರಾಣೇಬೆನ್ನೂರು, ಮೇ 31-  ಎಣ್ಣೆ ಮಾರಾಟಕ್ಕೆ ನಾಲ್ಕು ತಾಸು. ರೈತರ ತರಕಾರಿ, ಕಾಳುಕಡಿ ಮಾರಾಟಕ್ಕೆ ಎರಡು ತಾಸು. ತಂದ ಫಸಲುಗಳ ಗಂಟು ಮೂಟೆ ಬಿಚ್ಚಿ ಅವುಗಳನ್ನು ಜೋಡಿಸಲು ಒಂದು ತಾಸು ಕಳೆಯುತ್ತೆ. ಉಳಿದ ಒಂದು ತಾಸಿನಲ್ಲಿ ರೈತ ತನ್ನ ಫಸಲು ಮಾರಾಟ ಮಾಡಬೇಕು. ಇದು ಸರ್ಕಾರದ ನೀತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಅವರು ರಾಣೇಬೆನ್ನೂರಿನ ಕಾಂಗ್ರೆಸ್ ಪಕ್ಷ ಕೈಗೊಂಡ ಕೋವಿಡ್ ನಿಯಂತ್ರಣ ಹಾಗೂ ಪರಿಹಾರ ಕಾರ್ಯಕ್ರಮಗಳನ್ನು ಪರಿಶೀಲನೆ ಮಾಡಿ, ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದರು.

ನಾಲ್ಕು ತಾಸಿನಲ್ಲಿ ವಿಸ್ಕಿ ಯಾವಾಗಲಾದರು ನಾನು ತೆಗೆದುಕೊಳ್ಳಬಹುದು. ಆದರೆ ರೈತ ಒಂದು ತಾಸಿನಲ್ಲಿ ಮಾರಾಟ ಮಾಡಬೇಕು. ಮಾರಾಟ ಮಾಡಲಾಗದೇ ಕುಳಿತಾಗ ಉಳಿದದ್ದನ್ನು ಬ್ರೋಕರ್‌ಗಳು ಬಂದು ಅಷ್ಟೋ ಇಷ್ಟೋ ಕೊಟ್ಟು ಎತ್ತಿಕೊಂಡು ಹೋಗುತ್ತಾರೆ. ರೈತ ಇಲ್ಲೂ ಶೋಷಣೆಗೆ ಒಳಗಾಗಬೇಕಾಗುತ್ತದೆ. ರೈತರ ಬೆಳೆ ಮಾರಾಟಕ್ಕೆ 8 ತಾಸು ಕೊಡಿ. ಅವರನ್ನ ಫ್ರೀ ಬಿಡಿ ಎಂದ ಡಿಕೆಶಿ, ಇದನ್ನು ನಾನು ರಾಣೇಬೆನ್ನೂರಿನಿಂದ ಸರ್ಕಾರಕ್ಕೆ ಡಿಮ್ಯಾಂಡ್ ಮಾಡುತ್ತೇನೆ ಎಂದರು.

ನಿನ್ನೆ ಹುಬ್ಬಳ್ಳಿ ಧಾರವಾಡ ತಾಲ್ಲೂಕುಗಳಲ್ಲಿ ಬೀದಿ ವ್ಯಾಪಾರಸ್ಥರನ್ನು, ರೈತರನ್ನು ಭೇಟಿ ಮಾಡಿದೆ. ಎಲ್ಲರೂ ತಮ್ಮ ತಮ್ಮ ಗೋಳು ಹೇಳಿಕೊಂಡರು. ಹೂವು ಬೆಳೆಯುವ, ತರಕಾರಿ ಬೆಳೆಯುವವರಿಗೆ ಹೆಕ್ಟೇರ್‌ಗೆ 10 ಸಾವಿರ ಕೊಟ್ಟರೆ, ಗುಂಟೆಗೆ ನೂರು ರೂಪಾಯಿ. ಇದು ಹುಚ್ಚುತನದ ಪರಮಾವಧಿ. ಇದು ಮುಖ್ಯಮಂತ್ರಿಗಳ ಪ್ಯಾಕೇಜ್‌ನ  ಕಣ್ಣೊರೆಸುವ ತಂತ್ರ ಎಂದು  ಡಿಕೆಶಿ ಅಸಮಾಧಾನ ವ್ಯಕ್ತಪಡಿಸಿದರು. 

ಆಮ್ಲಜನಕವಿಲ್ಲದೇ ರಾಜ್ಯದಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಲಸಿಕೆ, ವೆಂಟಿಲೇಟರ್, ಆಕ್ಸಿಜನ್ ಬೆಡ್ ಮುಂತಾದವುಗಳ ಕೊರತೆಯ ಕೂಗು ರಾಜ್ಯಾದ್ಯಂತ  ಕೇಳಿಬರುತ್ತಿದೆ. ಒಟ್ಟಾರೆ ಈ ಸರ್ಕಾರ ರಾಜ್ಯದ ಜನರ ಪ್ರಾಣ ರಕ್ಷಣೆಗೆ ಸರಿಯಾದ ಕ್ರಮ ಕೈಗೊಳ್ಳಲೇ ಇಲ್ಲ. ಇದೊಂದು ಬೇಜವಾಬ್ದಾರಿ ಹಾಗೂ ಜನವಿರೋಧಿ ಸರ್ಕಾರ ಎಂದು ಡಿಕೆಶಿ ಹರಿಹಾಯ್ದರು.

ವಿಧಾನ ಪರಿಷತ್ ಸದಸ್ಯ ಆರ್.ಬಿ. ಮಾನೆ, ಮಾಜಿ ಸಚಿವರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಜಿ.ಪಂ. ಅಧ್ಯಕ್ಷ ಏಕನಾಥ ಭಾನುವಳ್ಳಿ, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ ಕೋಳಿವಾಡ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಮಂಜನಗೌಡ ಪಾಟೀಲ್, ಎಪಿಎಂಸಿ ಅಧ್ಯಕ್ಷ ಬಸವರಾಜ ಸವಣೂರ, ಡಾ. ಆರ್.ಎಂ. ಕುಬೇರಪ್ಪ, ಪ್ರಕಾಶ ಜೈನ್, ಎಪಿಎಂಸಿ, ನಗರ ಸಭೆ ಸದಸ್ಯರು ಸೇರಿದಂತೆ ಇನ್ನಿತರೆ ಮುಖಂಡರುಗಳಿದ್ದರು.

error: Content is protected !!