ಲಾಕ್ ಡೌನ್, ಕರ್ಫ್ಯೂ ಹೇರಲ್ಲ

ಬೆಂಗಳೂರು, ಮಾ. 17 – ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‌ಡೌನ್, ಸೀಲ್‌ಡೌನ್ ಅಥವಾ ರಾತ್ರಿ ಕರ್ಫ್ಯೂ ಹೇರುವುದಿಲ್ಲ. ಆದರೆ, ಮಾಸ್ಕ್ ಕಡ್ಡಾಯ, ನಾಲ್ಕು ಗೋಡೆಗಳ ಮಧ್ಯೆ ಸಭೆ, ಸಮಾರಂಭಗಳಿಗೆ ನಿರ್ಬಂಧ ವಿಧಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. 

ಸೋಂಕು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಸೀಲ್‌ಡೌನ್ ಬದಲು ಮೈಕ್ರೋ ಕಂಟೈನ್‍ಮೆಂಟ್ ಪ್ರದೇಶಗಳನ್ನು ಗುರುತಿಸಿ ಬಿಗಿ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಸಭೆ, ಸಮಾರಂಭಗಳಿಗೆ ನಿಷೇಧ ಇಲ್ಲ. ಆದರೆ, ಕೇಂದ್ರ ಸರ್ಕಾರದ ಮಾರ್ಗಸೂಚಿ ಗಳನ್ನು ಪಾಲಿಸಬೇಕು, ಈಗಿರುವ ಮಾರ್ಗಸೂಚಿಗಳನ್ನು ಮುಂದುವರೆಸಲಾಗು ವುದು ಎಂದವರು ಹೇಳಿದ್ದಾರೆ.

ಸಾರ್ವಜನಿಕರು ಭೀತಿ ಪಡುವ ಅಗತ್ಯವಿಲ್ಲ ಹಾಗೆಂದು ಮೈಮರೆಯಬಾರದು, ಮಾಸ್ಕ್ ಧರಿಸಿ ಅಂತರ ಕಾಯ್ದುಕೊಳ್ಳಿ ಎಂದೂ ಮುಖ್ಯಮಂತ್ರಿ ಹೇಳಿದ್ದಾರೆ.

ರಾಷ್ಟ್ರದಲ್ಲಿ ಕೊರೊನಾ ಎರಡನೇ ಅಲೆ ಭೀತಿ ಕಾಣುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಎಲ್ಲಾ ರಾಜ್ಯಗಳ ಮುಖ್ಯ ಮಂತ್ರಿಗಳ ಜೊತೆ ವಿಡಿಯೋ ಸಂವಾದ ನಡೆಸಿದರು. ಸಂವಾದದ ನಂತರ ಪತ್ರಕರ್ತರೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ, ಸರ್ಕಾರದ ಮುಂದಿನ ಕ್ರಮಗಳ ಕುರಿತು ತಿಳಿಸಿದ್ದಾರೆ. ವಯೋಮಾನದ ಮಿತಿ ಇಲ್ಲದೆ ಎಲ್ಲರಿಗೂ ಲಸಿಕೆ ನೀಡುವಂತೆ ಮನವಿ ಮಾಡಲಾಗಿದೆ. ನನ್ನಂತೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳೂ ಕೋರಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಸೋಂಕು ನಿಯಂತ್ರಣಕ್ಕಾಗಿ ಆರ್ಥಿಕ ಚಟುವಟಿಕೆಗೆ ಅಡ್ಡಿಯಾಗುಂತಹ ಕಠಿಣ ಕ್ರಮಗಳನ್ನು ಜರುಗಿಸುವುದಿಲ್ಲ, ಅದರ ಬದಲು ಸೋಂಕಿನ ಎರಡನೇ ಅಲೆ ತಡೆಯಲು ನಿರ್ದಾಕ್ಷಿಣ್ಯ ಕ್ರಮಗಳನ್ನು ಜರುಗಿಸುವುದಾಗಿ ಪ್ರಧಾನಿ ಅವರಿಗೆ ಭರವಸೆ ನೀಡಿದ್ದೇನೆ ಎಂದರು. 

ಗಡಿಗೆ ಹೊಂದಿಕೊಂಡಿರುವ ಎರಡೂ ರಾಜ್ಯಗಳಲ್ಲಿ ಕೊರೊನಾ ಸೋಂಕು ಹರಡುವಿಕೆ ದೊಡ್ಡ ಪ್ರಮಾಣದಲ್ಲಿದೆ, ನಿರ್ಲಕ್ಷ್ಯ ಮಾಡಬೇಡಿ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ, ನಿಮಗೆ ಎಲ್ಲಾ ಸಹಕಾರ ಕೊಡುತ್ತೇವೆ ಎಂದು ಪ್ರಧಾನಿ ಹೇಳಿದ್ದಾರೆ. 

ಅವರ ಸಲಹೆ ಮೇರೆಗೆ ನಾಳೆಯಿಂದ ಇಡೀ ರಾಜ್ಯಾದ್ಯಂತ ಪ್ರತಿ ದಿನ ಒಂದು ಲಕ್ಷ ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗುವುದು ಹಾಗೂ ದಿನಂಪ್ರತಿ ಮೂರು ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡುವುದಾಗಿ ಮುಖ್ಯಮಂತ್ರಿ ತಿಳಿಸಿದರು. 

ರಾಜ್ಯದಲ್ಲಿ ಈವರೆಗೆ 9.61 ಲಕ್ಷಕ್ಕೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿದ್ದು, 12 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಕಳೆದ 10 ದಿನಗಳಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಏರುಗತಿಯಲ್ಲಿವೆ. ಪಾಸಿಟಿವಿಟಿ ರೇಟ್ ಮಾರ್ಚ್ 15ರಂದು ಶೇ. 1.65ರಷ್ಟು ವರದಿಯಾಗಿದೆ.

ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಹಾಗೂ ಬೆಂಗಳೂರಿನಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಪ್ರಕರಣಗಳು ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ಪರೀಕ್ಷಾ ಪ್ರಮಾಣವನ್ನೂ ಹೆಚ್ಚಿಸಲಾಗಿದೆ ಎಂದರು. 

ಕೊರೊನಾ ವಿರುದ್ಧ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು. ಮಾಸ್ಕ್ ಧಾರಣೆ ಕಡ್ಡಾಯಗೊಳಿಸುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜನಸಂದಣಿಯಾಗದಂತೆ ಮುನ್ನೆಚ್ಚರಿಕೆ ವಹಿಸುವ ಕುರಿತು ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಕೋವಿಡ್ ಸೋಂಕಿತರಿಗಾಗಿ ಹೆಚ್ಚುವರಿ ಹಾಸಿಗೆಗಳು, ಐಸಿಯುಗಳನ್ನು ಮೀಸಲಿಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರದ ನೀತಿಯಂತೆ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡಬೇಕಾಗಿದೆ.

ಬೆಂಗಳೂರಿನಲ್ಲಿ 3 ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ನಿರ್ಧರಿಸಲಾಗಿದೆ, ಇದರೊಂದಿಗೆ ರಾಜ್ಯದಲ್ಲಿನ 3,500 ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಅಭಿಯಾನ ತೀವ್ರಗೊಳಿಸಲಾಗುವುದು ಎಂದರು. 

error: Content is protected !!