ಕೋವಿಡ್ ಸೋಂಕಿತರಿಗೆ ಉಚಿತ ಟೆಲಿಕನ್ಸಲ್ಟೇಷನ್

ದಾವಣಗೆರೆ, ಮೇ 28- ಎಸ್.ಎಸ್.ವೈದ್ಯಕೀಯ ಕಾಲೇಜು – ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರವು ಕರ್ನಾಟಕ ರಾಜ್ಯ ಸರ್ಕಾರ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ಹಾಗೂ ಸ್ಟೆಪ್ ಒನ್ ಫ್ರೆಶ್‍ಡೆಸ್ಕ್‌ ಸಹಯೋಗದೂಂದಿಗೆ ಕೋವಿಡ್ – 19 ರೋಗಿಗಳಿಗೆ ಉಚಿತ ಹೋಂ ಐಸೋಲೇಷನ್ – ಟೆಲಿಕನ್ಸ ಲ್ಟೇಷನ್ ಚಿಕಿತ್ಸಾ ಕಾರ್ಯಕ್ರಮವನ್ನು ಆರಂಭಿಸಿದೆ.

ಈ ಕಾರ್ಯಕ್ರಮವು ಮಾಜಿ ಸಚಿವರೂ ಆಗಿರುವ ಎಸ್.ಎಸ್. ವೈದ್ಯಕೀಯ ಕಾಲೇಜಿನ ಛೇರ್ಮನ್‍ ಎಸ್.ಎಸ್.ಮಲ್ಲಿಕಾರ್ಜುನ್‌ ಅವರ ಮಾರ್ಗದರ್ಶನದಡಿಯಲ್ಲಿ   ಎಸ್.ಎಸ್. ಹೈಟೆಕ್ ಕಾಲೇಜಿನ ಪ್ರಾಂಶುಪಾಲ ಡಾ|| ಬಿ.ಎಸ್.ಪ್ರಸಾದ್‍ ಅವರ ಮುಂದಾಳತ್ವದಲ್ಲಿ ಮೇ ತಿಂಗಳ ಮೊದಲನೇ ವಾರದಿಂದ ಪ್ರಾರಂಭಗೊಂಡಿದೆ. 

ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದಿಂದ ಆಯ್ಕೆಯಾಗಿ ತರಬೇತಿ ಪಡೆದ ಈ ಕಾಲೇಜಿನ ಮಾಸ್ಟರ್ ಟ್ರೇನರ್ಸ್‌ಗಳಾದ ಡಾ|| ಎಂ.ಬಸವರಾಜಪ್ಪ, ಡಾ|| ಜಿ. ಎಸ್.ಲತಾ, ಡಾ|| ಜೆ.ಮಂಜುನಾಥ್‌, ಡಾ|| ವಿ.ಎಸ್.ಹರೀಶ್ ಕುಮಾರ್, ಡಾ|| ಎನ್.ಮೃತ್ಯುಂಜಯ ಅವರುಗಳು ಅಂತಿಮ
ವರ್ಷದ 130 ವೈದ್ಯಕೀಯ ವಿದ್ಯಾರ್ಥಿಗಳನ್ನು ಹಾಗೂ 15 ಜನ ತಜ್ಞ ವೈದ್ಯರುಗಳನ್ನು ತರಬೇತಿಗೊಳಿಸಿ, ಈ ಕಾರ್ಯಕ್ರಮವನ್ನು  ನಡೆಸಿಕೊಡುತ್ತಿದ್ದಾರೆ.

ಐ.ಸಿ.ಎಂ.ಆರ್ ಪೋರ್ಟಲ್‍ನಲ್ಲಿ ಕೋವಿಡ್ ಪಾಸಿಟಿವ್ ಎಂದು ದಾಖಲೆಗೊಂಡಿರುವ ರೋಗಿಗಳಿಗೆ ದೂರವಾಣಿ ಕರೆಗಳ ಮುಖಾಂತರ ಸೌಜನ್ಯ ಪೂರ್ವಕವಾಗಿ ಮಾತನಾಡಿಸಿ, ರೋಗಿಗಳ ಮಾನಸಿಕ ಸ್ಥಿತಿಯನ್ನು ಸದೃಢಗೊಳಿಸಿ, ಇವರಲ್ಲಿ ರೋಗ ಲಕ್ಷಣಗಳಿಲ್ಲದ ಹಾಗೂ ತೀವ್ರತರದ ರೋಗ ಲಕ್ಷಣಗಳಿಲ್ಲದ ಕೋವಿಡ್ ಪಾಸಿಟಿವ್ ರೋಗಿಗಳನ್ನು ಸಮರ್ಥವಾಗಿ ವಿಂಗಡಿಸಿ, ತಜ್ಞ ವೈದ್ಯರುಗಳ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿಗಳು ಸೂಕ್ತ ಚಿಕಿತ್ಸೆ  ಹಾಗೂ ಸಲಹೆ – ಸಮಾಲೋಚನೆಯನ್ನು ನೀಡಿ, ರೋಗಿಗಳಲ್ಲಿ ಆತ್ಮವಿಶ್ವಾಸ ತುಂಬುತ್ತಿದ್ದಾರೆ.

ಚಿಕ್ಕ ಮಕ್ಕಳು, ಗರ್ಭಿಣಿ ಸ್ತ್ರೀಯರು, ಮಧುಮೇಹ, ರಕ್ತದೊತ್ತಡ, ಹೃದಯ
ಸಂಬಂಧಿ, ಕ್ಯಾನ್ಸರ್‍ನಂತಹ ಇತರೆ ಕಾಯಿಲೆಗಳಿರುವ ಕೋವಿಡ್ ಪಾಸಿಟಿವ್ ರೋಗಿಗಳಿಗೆ ತಜ್ಞ ವೈದ್ಯರುಗಳ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಚಿಕಿತ್ಸೆ ಹಾಗೂ ಸಮಾಲೋಚನೆ ಮಾಡಲಾಗುತ್ತಿದೆ.

ಈ ಕಾರ್ಯಕ್ರಮದಿಂದ ಕರ್ನಾಟಕದಾದ್ಯಂತ ಇದುವರೆಗೂ 20 ಸಾವಿರ ಕ್ಕೂ ಅಧಿಕ ಕೋವಿಡ್ ಪಾಸಿಟಿವ್ ರೋಗಿಗಳೊಂದಿಗೆ ಕಾಲೇಜಿನ ವಿದ್ಯಾರ್ಥಿಗಳು ಸಮಾಲೋಚಿಸಿದ್ದು, ರೋಗಿಗಳು ಇದರ ಪ್ರಯೋಜನ ಪಡೆದು ಗುಣಮುಖರಾಗಿದ್ದಾರೆ. ಇದರಿಂದಾಗಿ ಕೋವಿಡ್-19 ಸೋಂಕನ್ನು ಮತ್ತಷ್ಟು ಹರಡದಂತೆ ತಡೆಗಟ್ಟಿ ಅತ್ಯಗತ್ಯವಾಗಿ ವೈದ್ಯಕೀಯ ಸೌಲಭ್ಯಗಳ ಅಗತ್ಯವಿರುವಂತಹ ರೋಗಿಗಳಿಗೆ ತಜ್ಞ ವೈದ್ಯರುಗಳು ಗಮನ ಹರಿಸುವಲ್ಲಿ ಸಹಕಾರಿಯಾಗುತ್ತಿದೆ.

ಈ ಕಾಲೇಜಿನ ಉಚಿತ ಸೇವೆಯನ್ನು ಕರ್ನಾಟಕ  ಸರ್ಕಾರ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ಶ್ಲ್ಯಾಘಿಸಿ, ಕಾಲೇಜಿನ ಪ್ರಾಂಶುಪಾಲ ಡಾ|| ಬಿ.ಎಸ್.ಪ್ರಸಾದ್‍ ಅವರಿಗೆ, ಮಾಸ್ಟರ್ ಟ್ರೇನರ್‍ಗಳಿಗೆ, ತಜ್ಞ ವೈದ್ಯರು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. 

ಅಂತೆಯೇ ವಿದ್ಯಾರ್ಥಿಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿ ಅಭಿನವ್ ಎನ್. ಸೊಪ್ಪಿನ್‍ ಅವರಿಗೆ ಉಪ ಮುಖ್ಯಮಂತ್ರಿ ಡಾ|| ಸಿ.ಎನ್.ಅಶ್ವತ್ಥನಾರಾಯಣ್‍ ಅವರು ಅಭಿನಂದನಾ ಪತ್ರವನ್ನು ನೀಡಿ ಸನ್ಮಾನಿಸಿದ್ದಾರೆ.

error: Content is protected !!