ನಿಯಮ ಮೀರಿ ಕದ್ದುಮುಚ್ಚಿ ವ್ಯಾಪಾರ

ದಾವಣಗೆರೆ, ಮೇ 27- ಲಾಕ್‌ಡೌನ್ ಇದ್ದರೂ ಸಹ ಅಗತ್ಯ ವಸ್ತುಗಳಲ್ಲದ ಕೆಲವು ವ್ಯಾಪಾರಸ್ಥರು ಹಾಗೂ ನಿಗದಿತ ಸಮಯ ಮೀರಿಯೂ ಕೆಲ ಅಗತ್ಯ ವಸ್ತುಗಳ ವ್ಯಾಪಾರಸ್ಥರೂ ಸಹ ಕದ್ದು ಮುಚ್ಚಿ ವ್ಯಾಪಾರ-ವಹಿವಾಟು ನಡೆಸುತ್ತಿರುವುದು ನಗರದಲ್ಲಿ ಬೆಳಕಿಗೆ ಬರುತ್ತಿದೆ. ಇದಕ್ಕೆ ಸಾಮಾಜಿಕ ಕಾರ್ಯಕರ್ತರಿಂದ ಆಕ್ಷೇಪವೂ ವ್ಯಕ್ತವಾಗುತ್ತಿದೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಳಿಗ್ಗೆ 6 ರಿಂದ 10 ಗಂಟೆ ತನಕ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ನಿಯಮವನ್ನು ಗಾಳಿಗೆ ತೂರಿ ಅಗತ್ಯ ವಸ್ತುಗಳಲ್ಲದ ವ್ಯಾಪಾರ ಕದ್ದು ಮುಚ್ಚಿ ನಡೆಸ ಲಾಗುತ್ತಿದೆ. ಲಾಕ್‌ಡೌನ್‌ಗೆ ಸಹಕರಿಸುತ್ತೇವೆ, ಯಾವುದೇ ಕಾರಣಕ್ಕೂ ಸರ್ಕಾರದ ನಿಯಮ ಮೀರುವುದಿಲ್ಲ, ವ್ಯಾಪಾರ ಮಾಡುವುದಿಲ್ಲ, ನಮಗೆ ವ್ಯಾಪಾರ ಮುಖ್ಯವಲ್ಲ, ಆರೋಗ್ಯ ಮುಖ್ಯ,  ವರ್ಷವೆಲ್ಲಾ ವ್ಯಾಪಾರ ಮಾಡುತ್ತೇವೆ. ಕೋವಿಡ್ ಅಲೆ ಹೋಗಲು ನಮ್ಮ ಸಹಕಾರ ಜಿಲ್ಲಾಡಳಿತದ ಜೊತೆ ಇದೆ ಎಂದು ಹೇಳುವ ಬದಲು ಕದ್ದು ಮುಚ್ಚಿ ವ್ಯಾಪಾರಕ್ಕೆ ಕೆಲವು ಅಂಗಡಿಯವರು ಮುಂದಾಗಿರುವುದಕ್ಕೆ ಅಲ್ಲಿ ನಡೆಯುತ್ತಿರುವ ವ್ಯಾಪಾರವೇ ಸಾಕ್ಷಿಯಾಗಿದೆ.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ತಹಶೀಲ್ದಾರ್ ಗಿರೀಶ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಎಸ್ಪಿ ಹನುಮಂತರಾಯ ಇವರೆಲ್ಲರೂ ಜಿಲ್ಲೆಯಲ್ಲಿನ ಕೊರೊನಾ ತಗ್ಗಿಸಲು ಜನಸಂಚಾರ, ಅನಗತ್ಯ ಓಡಾಟ, ಜನಸಂದಣಿ ತಪ್ಪಿಸಲು ಸ್ವತಃ ನೇರ ಕಾರ್ಯಾಚರಣೆಗಿಳಿದು ಲಾಕ್‌ಡೌನ್ ಹಾಗೂ ಕೋವಿಡ್ ಹರಡದಂತೆ ಕ್ರಮ ವಹಿಸಲು ಶ್ರಮಿಸುತ್ತಿದ್ದಾರಲ್ಲದೇ,  ಸಹಕರಿಸುವಂತೆ ಸಾರ್ವಜನಿಕರಿಗೆ  ಕೈ ಮುಗಿದು ಪರಿ ಪರಿಯಾಗಿ ಮನವಿ ಮಾಡಿದ್ದಾರೆ. 

ಹೀಗಿದ್ದರೂ ನಿಯಮ ಮೀರಿ ಬೆಳಿಗ್ಗೆ ಐದು ಗಂಟೆ, ಆರು ಗಂಟೆ, ಹತ್ತು ಗಂಟೆಯ ತನಕ ಕದ್ದು ಮುಚ್ಚಿ ವ್ಯಾಪಾರ ಮಾಡುವವರ ಸಂಖ್ಯೆ ಹೆಚ್ಚಾ ಗಿದೆ. ಕುಂಟು ನೆಪ ಹೇಳಿ ನಗರದ ಹಳೇ ಭಾಗಕ್ಕೆ ಹಳ್ಳಿ ಹಳ್ಳಿಯಿಂದ ಕೆಲವು ಸಣ್ಣ ಅಂಗಡಿಯವರು, ಅನೇಕ ಜನರು ಬಂದು ವ್ಯಾಪಾರ ಮಾಡಲು ಚಾಕಲೇಟ್, ಕುರು ಕುರೇ, ದಿನಸಿ ಸಾಮಾನು, ಬಿಸ್ಕತ್, ಪ್ಲಾಸ್ಟಿಕ್ ಲೋಟ, ತರಕಾರಿ ಖರೀದಿ ಮಾಡಲು ಬರುತ್ತಿದ್ದಾರೆ.  ಅಲ್ಲಲ್ಲಿ ಪೊಲೀಸ್ ತಪಾಸಣೆ ಇದ್ದರೂ ಸಹ ಕಣ್ ತಪ್ಪಿಸಿ ನಗರಕ್ಕೆ ಬರುತ್ತಿದ್ದಾರೆ. ಮಾಹಿತಿ ಪಡೆದ ಬಸವನಗರ ಠಾಣೆಯ ಪೊಲೀಸ್ ಸಿಬ್ಬಂದಿಗಳು ಬಾಗಿಲು ತೆರೆದ  ಅಂಗಡಿಯವರ ಫೋಟೋ ತೆಗೆದು ನೋಟಿಸ್ ಕಳುಹಿಸಲು ಕ್ರಮ ವಹಿಸಿದ್ದಾರೆ.

ಫೋನ್ ನಂಬರ್ ನೀಡಿ ಫೋನ್‌ನಲ್ಲಿ ಆರ್ಡರ್ ಪಡೆದು ಸರಕುಗಳನ್ನು ನೀಡುವುದು ಕಂಡುಬರುತ್ತಿದೆ. ಉಚಿತವಾಗಿ ದಿನಸಿ ಹಂಚಬೇಕು, ಊಟ ಪಾರ್ಸಲ್ ಕೊಡಲು ಕವರ್‌ಗಳು ಬೇಕು ಎಂದು ಬಾಗಿಲು ತೆರೆಸಿ ಖರೀದಿ ಮಾಡಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ತಿಳಿಸಿದ್ದಾರೆ.

ಕಳೆದ ಕೋವಿಡ್ ಅಲೆಯಲ್ಲಿ ಮನೆ ಬಾಗಿಲಿಗೆ ತರಕಾರಿ ಹಾಗೂ ಹಣ್ಣುಗಳ ಗಾಡಿಗಳನ್ನು ಯಶಸ್ವಿಯಾಗಿ ಕಳಿಸಿದ ಜಿಲ್ಲಾಡಳಿತ ಈ ಬಾರಿಯೂ ಸೂಕ್ತ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ. 

ಇಂತಹ ಗಾಡಿಗಳಲ್ಲಿ ಪ್ರತಿದಿನ ಚಾಮರಾಜ ಪೇಟೆ ಸುತ್ತಮುತ್ತ ಸಾಮಾಜಿಕ ಅಂತರವಿಲ್ಲದೇ ವ್ಯಾಪಾರ ಮಾಡಲಾಗುತ್ತಿದೆ. ಸರ್ಕಾರದ ಆದೇಶದಂತೆ ನಡೆದುಕೊಂಡು ಹೋಗಿ ಖರೀದಿಸಿ ವಾಹನ ಬಳಕೆ ಬೇಡ ಎಂದರೆ ಜನ ಮಾತ್ರ ಇದನ್ನು ಪಾಲನೆ ಮಾಡುತ್ತಿಲ್ಲ. ಚೆಕ್ ಪೋಸ್ಟ್‌ಗಳನ್ನು ದಾಟಿ ವಾಹನಗಳು ನಗರಕ್ಕೆ ಹೇಗೆ ಬರುತ್ತಿವೆ. ಜಿಲ್ಲಾಡಳಿತ ಪ್ರತಿದಿನ ಬೆಳಿಗ್ಗೆ ಕಾರ್ಯಾಚರಣೆ ಮಾಡಿದರೆ ಜಿಲ್ಲೆಯಲ್ಲಿ ಕೋವಿಡ್ ಅಲೆ ಹರಡುವುದನ್ನು ತಪ್ಪಿಸಬಹುದು ಎಂದು ಹೇಳಿದ್ದಾರೆ.

error: Content is protected !!