ಗಡಿ ದಾಟಿದ ಕೊರೊನಾ ಅಮ್ಮ

ಮಲೇಬೆನ್ನೂರು, ಮೇ 25- ಮಹಾಮಾರಿ ಕೊರೊನಾ 2ನೇ ಅಲೆಯಲ್ಲಿ ಸಾಕಷ್ಟು ಸಾವು-ನೋವುಗಳಿಂದ ದೇಶ ನಲುಗಿ ಹೋಗಿದ್ದು, ಸೋಂಕು ಹರಡುವು ದನ್ನು ತಡೆಯಲು ಸರ್ಕಾರ ಸಕಲ ಪ್ರಯತ್ನ ಮಾಡುತ್ತಿದೆ.

ಇದರ ನಡುವೆ ಹಳ್ಳಿಗಳಲ್ಲಿ ಕೊರೊನಾ ಓಡಿಸುವುದಕ್ಕಾಗಿ ಜನರು ಕೊರೊನಾ ಅಮ್ಮನನ್ನು ಗ್ರಾಮದಿಂದ ಗಡಿ ದಾಟಿಸುವ ಹಬ್ಬವನ್ನು ಆಚರಿಸುತ್ತಿದ್ದಾರೆ.

ಈ ಹಿಂದೆ ಪ್ಲೇಗ್‌, ಕಾಲರಾದಂತಹ ಮಹಾಮಾರಿ ಕಾಯಿಲೆಗಳು ವಕ್ಕರಿಸಿದಾಗ ಊರನ್ನೇ ಖಾಲಿ ಮಾಡುತ್ತಿದ್ದ ಜನರು, ದೇವರ ಆರಾಧನೆ ಮಾಡಿ, ಕಾಯಿಲೆಗಳನ್ನು ಹೊಡೆದೋಡಿಸು ತಾಯಿ ಎಂದು ಪೂಜಿಸುತ್ತಿದ್ದರು. ಆದರೀಗ ಗ್ರಾಮಕ್ಕೆ ವಕ್ಕರಿಸಿರುವ ಕೊರೊನಾ ಸೋಂಕಿನಿಂದ ನಮ್ಮನ್ನು ಪಾರು ಮಾಡು ಎಂದು ಪ್ರಾರ್ಥಿಸಿ, ಅಜ್ಜಿ ಹಬ್ಬವನ್ನು ಎಲ್ಲಾ ಕಡೆ ವಿಶೇಷವಾಗಿ ಆಚರಿಸಲು ಹಳ್ಳಿಗಳಲ್ಲಿ ತೀರ್ಮಾನಿಸಿದ್ದಾರೆ.

ಬೇವಿನ ಮರಕ್ಕೆ ವಿಶೇಷ ಪೂಜೆ ಮಾಡಿ, ಅದರ ಮುಂಭಾಗ ಎಡೆ ಇಟ್ಟು ಪೂಜೆ ಸಲ್ಲಿಸುತ್ತಾರೆ. ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಉತ್ತಮ ಮಳೆ, ಬೆಳೆ ಆಗಲಿ ಮತ್ತು ಯಾವುದೇ ರೋಗ, ರುಜಿನಗಳು ಬಾರದಿರಲಿ ಎಂದು ಈ ಹಿಂದೆ ಹಳ್ಳಿಗಳಲ್ಲಿ ಅಜ್ಜಿ ಹಬ್ಬ ಆಚರಿಸುತ್ತಿದ್ದರು.

ಕೊರೊನಾ 2ನೇ ಅಲೆ ಹಳ್ಳಿಗಳನ್ನು ವ್ಯಾಪಿಸಿದ್ದು, ಹೆಚ್ಚಾಗುತ್ತಿರುವ ಸಾವು-ನೋವು ತಡೆಗಟ್ಟಲು ಹರಿಹರ ತಾಲ್ಲೂಕಿನ ಕಡರನಾಯ್ಕನ ಹಳ್ಳಿ ಗ್ರಾಮಸ್ಥರು ಕೊರೊನಾ ಅಮ್ಮನ ಹಬ್ಬ ಆಚರಿಸಿ, ಗಮನ ಸೆಳೆದಿದ್ದಾರೆ.

ಶುಕ್ರವಾರ ಗಡಿದುರ್ಗಮ್ಮ ದೇವಿಯನ್ನು ಗಡಿದಾಟಿಸುವ ಹಬ್ಬ ಆಚರಿಸಿದ್ದ ಗ್ರಾಮಸ್ಥರು, ಸೋಮವಾರ ಬೆಳಗಿನ ಜಾವ ಶ್ರೀ ಆಂಜನೇಯ ಸ್ವಾಮಿ ದೇವರ ಸಮ್ಮುಖದಲ್ಲಿ ಗ್ರಾಮವನ್ನು ನಾಲ್ಕು ದಿಕ್ಕುಗಳಲ್ಲಿ ಹಾಲು-ತುಪ್ಪ ಹಾಕಿ ಕಾವ್‌ಕಟ್ ಮಾಡಿದ್ದಾರೆ.

ಇದಕ್ಕೆ ಮುನ್ನ 5 ದಿನ ಗ್ರಾಮದ ಚೌಡೇಶ್ವರಿ ದೇವಸ್ಥಾನದಲ್ಲಿ ದೀಪ ಹಾಕಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಗ್ರಾಮದಲ್ಲಿ ಈ ಎಲ್ಲಾ ಪೂಜೆಗಳನ್ನು ಮಾಡಿದ ನಂತರ ಒಂದೂ ಸಾವಾಗಿಲ್ಲ ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ವಿ. ಕುಬೇರಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭುಗೌಡ §ಜನತಾವಾಣಿ¬ಗೆ ತಿಳಿಸಿದ್ದಾರೆ.

ವಿಷಯ, ಚರ್ಚೆ ಏನೇ ಇರಲಿ ಜನರ ಭಾವನೆಗಳಿಗೆ ನಿಜವಾಗಲೂ ಮಹತ್ವ ಇದೆ ಎಂಬುದಕ್ಕೆ ಕೆ.ಎನ್. ಹಳ್ಳಿ ಸಾಕ್ಷಿಯಾಗಿದೆ.

ಕಳೆದ 20 ದಿನಗಳಲ್ಲಿ 18 ಕ್ಕೆ ಹೆಚ್ಚು ಜನರು ಗ್ರಾಮದಲ್ಲಿ ನಾನಾ ಕಾರಣಗಳಿಂದ ಸಾವನ್ನಪ್ಪಿದ್ದರು. ಜ್ವರ ಬಾಧೆಯಿಂದ ಜನರು ನರಳುತ್ತಿದ್ದರು. ಇದನ್ನು ಮನಗಂಡ ಗ್ರಾಮಸ್ಥರು ಗಡಿ ದುರ್ಗಮ್ಮ ದೇವಿಯ ಗಡಿ ದಾಟಿಸಲು ನಿರ್ಧರಿಸಿ, ಅಜ್ಜಿ ಹಬ್ಬ ಆಚರಿಸಿದರು.

ಅಮ್ಮನನ್ನು ಗಡಿ ದಾಟಿಸಿದ ನಂತರ ನಾಲ್ಕು ದಿನಗಳಲ್ಲಿ ಗ್ರಾಮದಲ್ಲಿ ಒಬ್ಬರೂ ಮೃತ ಪಟ್ಟಿಲ್ಲ. ನಮ್ಮ ಪೂಜೆಗಳು ಸಫಲವಾಗಿದೆ ಎಂಬ ಸಮಾಧಾನದಲ್ಲಿ ಕೆ.ಎನ್. ಹಳ್ಳಿ ಗ್ರಾಮಸ್ಥರು ಇದ್ದಾರೆ.

ಸ್ಪಷ್ಟನೆ: ಕೆ.ಎನ್. ಹಳ್ಳಿ ಗ್ರಾಮದಲ್ಲಿ ಸಂಭವಿಸಿರುವ ಸಾವುಗಳ ಬಗ್ಗೆ ಸ್ಪಷ್ಟನೆ ನೀಡಿರುವ ಗ್ರಾ.ಪಂ. ಅಧ್ಯಕ್ಷ ಭರಮಗೌಡ ಪಾಟೀಲ್, ಕೊರೊನಾದಿಂದ ಇಬ್ಬರು ಮಾತ್ರ ಸಾವನ್ನಪ್ಪಿದ್ದಾರೆ. ಉಳಿದ 18 ಜನರು ನಾನಾ ಕಾರಣಗಳಿಂದ ಮರಣ ಹೊಂದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.


ಗಡಿ ದಾಟಿದ ಕೊರೊನಾ ಅಮ್ಮ - Janathavani– ಜಿಗಳಿ ಪ್ರಕಾಶ್‌,
[email protected]

error: Content is protected !!