ಮಾಸ್ಕ್ ಜಾಗೃತಿ ಮೂಡಿಸಿದ ಡಿಸಿ

ಕೋವಿಡ್ ನಿಯಮ ಚಾಚೂ ತಪ್ಪದೇ ಪಾಲಿಸಲು ಕರೆ

ದಾವಣಗೆರೆ, ಮಾ.16- ಕೊರೊನಾ ಎರಡನೇ ಅಲೆ ಅಪ್ಪಳಿಸುವ ಸಾಧ್ಯತೆ ಇದ್ದು, ಒಂದು ವೇಳೆ ಅಪ್ಪಳಿಸಿದರೆ ಮತ್ತೊಮ್ಮೆ ಲಾಕ್‌ ಡೌನ್ ಸಂಕಷ್ಟಕ್ಕೆ ಒಳಗಾಗ ಬೇಕಾಗುತ್ತದೆ. ಆದ್ದರಿಂದ ಕೋವಿಡ್ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಲು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚನೆ ನೀಡಿದರು.

ಕೋವಿಡ್ ಸೋಂಕು ಹರಡದಂತೆ ತಡೆಯಲು ನಗರದಲ್ಲಿ ಹಮ್ಮಿಕೊಂಡಿದ್ದ ಕೊರೊನಾ ಜಾಗೃತಿ ಮತ್ತು ಮಾಸ್ಕ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತ ನಾಡಿದರು. ಅಂಗಡಿ ಹಾಗೂ ಬಸ್ ಮಾಲೀಕರಿಗೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು ತಮ್ಮಲ್ಲಿಗೆ ಬರುವ ಗ್ರಾಹಕರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚಿಸಬೇಕು. ಒಂದು ವೇಳೆ ಮಾಸ್ಕ್ ಧರಿಸದೇ ಇದ್ದಲ್ಲಿ ತಾವೇ ಜವಾಬ್ದಾರರಾಗಬೇಕಾ ಗುತ್ತದೆ. ತಮ್ಮ ಅಂಗಡಿಗಳನ್ನು ಮುಲಾಜಿಲ್ಲದೇ ಮುಚ್ಚಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಕೋವಿಡ್ ನಿಯಂತ್ರಣ ಕೇವಲ ಸರ್ಕಾರದ ಕರ್ತವ್ಯವಲ್ಲ. ಪ್ರತಿಯೊಬ್ಬರೂ ತಮ್ಮ ಜೀವನ ಉಳಿಸಿಕೊಳ್ಳಲು ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕೆಂದರು.

ಮತ್ತೆ ಲಾಕ್‌ಡೌನ್‌ನಂತಹ ಪರಿಸ್ಥಿತಿ ನಿರ್ಮಾಣವಾದರೆ, ವ್ಯಾಪಾರ ವಹಿವಾಟು ಏರುಪೇರಾಗಲಿದ್ದು, ಇದನ್ನು ನಂಬಿಕೊಂಡವರ ಜೀವನ ದುಸ್ತರವಾಗಲಿದೆ  ಎಂದು ಹೇಳಿದರು.

ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಜರ್ ಬಳಕೆ ಕಡ್ಡಾಯವಾಗಬೇಕೆಂದರು.

ಕೋವಿಡ್ ಸೋಂಕು ಹರಡದಂತೆ ನಡೆಸಿದ ಕೊರೊನಾ ಜಾಗೃತಿ ಕಾರ್ಯಕ್ರಮ ನಗರದ ಗುಂಡಿ ಸರ್ಕಲ್‌ನಿಂದ ಹೊರಟು ರಾಮ್ ಅಂಡ್ ಕೋ ಸರ್ಕಲ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ಗಡಿಯಾರ ಕಂಬದ ಮುಖಾಂತರ ಸಾಗಿದ ಅಧಿಕಾರಿಗಳ ತಂಡ ಜಾಗೃತಿ ಮೂಡಿಸುವಲ್ಲಿ ಮುಂದಾದರು.

ಎಸ್ಪಿ ಹನುಮಂತರಾಯ, ಜಿ.ಪಂ. ಸಿಇಒ ವಿಜಯ ಮಹಾಂತೇಶ್ ದಾನಮ್ಮನವರ್, ಡಿಹೆಚ್ಒ ಡಾ.ನಾಗರಾಜ್, ಡಿವೈಎಸ್ಪಿ ನಾಗೇಶ್ ಐತಾಳ್ ಮತ್ತಿತರರಿದ್ದರು.

error: Content is protected !!