ನಾಲ್ವರು ಕಳ್ಳರ ಬಂಧನ : 5 ಲಕ್ಷ ರೂ. ಮೌಲ್ಯದ ಅಡಿಕೆ ವಶ

ನಾಲ್ವರು ಕಳ್ಳರ ಬಂಧನ : 5 ಲಕ್ಷ ರೂ. ಮೌಲ್ಯದ ಅಡಿಕೆ ವಶ - Janathavaniದಾವಣಗೆರೆ, ಮಾ.15- ಅಡಿಕೆ ಕಳ್ಳತನ ಮಾಡಿದ್ದ ನಾಲ್ವರನ್ನು ಬಂಧಿಸಿ, ಎರಡು ಪ್ರಕರಣಗಳಿಗೆ ಸಂಬಂಧಿಸಿ ದಂತೆ ಒಟ್ಟು 50 ಕೆ.ಜಿ. ತೂಕವಿರುವ 4 ಅಡಿಕೆ ಚೀಲಗಳು, 62 ಕೆ.ಜಿ. ತೂಕವಿರುವ 15 ಅಡಿಕೆ ಚೀಲಗಳು ಸೇರಿ ಸುಮಾರು 5 ಲಕ್ಷ ರೂ. ಮೌಲ್ಯದ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ ಓಮ್ನಿ ವಾಹನವನ್ನು ಹೊನ್ನಾಳಿ ವೃತ್ತದ ನ್ಯಾಮತಿ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆ ಕುಂಸಿಯ ಮುದುವಾಲ ಗ್ರಾಮದ ಅಬ್ದುಲ್ ಮಜೀದ್ ಅಲಿಯಾಸ್ ಸದ್ದಾಂ, ಕಾನೂನು ಸಂಘರ್ಷಕ್ಕೊಳಗಾದ ಬಾಲಕ, ಶಿವಮೊಗ್ಗದ ಸಾಗರ ತಾಲ್ಲೂಕಿನ ಆನಂದಪುರದ ಮಹಮ್ಮದ್ ತೌಸೀಫ್, ಹೊಸನಗರ ತಾಲ್ಲೂಕು ರಿಪ್ಪನ್ ಪೇಟೆಯ ಕೇದಲಗುಂಡಿ ನಾಗಾರ್ಜುನ ಬಂಧಿತರು.

ಮಾ.9ರಂದು ನ್ಯಾಮತಿಯ ಮಾದಾಪುರ ಗ್ರಾಮದ ಬಸವಗೌಡ ಎಂಬುವರ ಗೋದಾಮಿನಲ್ಲಿ ಇಟ್ಟಿದ್ದ ಸುಮಾರು 65 ಅಡಿಕೆ ಚೀಲ ಪೈಕಿ 15 ಅಡಿಕೆ ಚೀಲಗಳನ್ನು ಕಳವು ಮಾಡಲಾಗಿತ್ತು. ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್ಪಿ ಹನುಮಂತರಾಯ, ಎಎಸ್ಪಿ ಎಂ. ರಾಜೀವ್ ಹಾಗೂ ಚನ್ನಗಿರಿ ಪೊಲೀಸ್ ಉಪಾಧೀಕ್ಷಕ ಬಿ.ಎಸ್. ಬಸವರಾಜ ಮಾರ್ಗದರ್ಶನದಲ್ಲಿ ಹೊನ್ನಾಳಿ ವೃತ್ತ ನಿರೀಕ್ಷಕ ಟಿ.ವಿ. ದೇವರಾಜ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.  

ಇದೇ ಮಾ.14ರಂದು ಹೊನ್ನಾಳಿ ಸಿಪಿಐ ಟಿ.ವಿ. ದೇವರಾಜ್ ನೇತೃತ್ವದಲ್ಲಿ ನ್ಯಾಮತಿ ಪಿಎಸ್ ಐ ರಮೇಶ್ ಹಾಗೂ ಸಿಬ್ಬಂದಿಗಳಾದ ಹರೀಶ , ಎನ್. ರವಿನಾಯಕ, ಚಂದ್ರಶೇಖರಪ್ಪ, ಉಮೇಶ, ಮೌನೇಶಾಚಾರಿ, ಕೆ. ರಾಮಪ್ಪ, ಜಿ. ಸಿದ್ದಪ್ಪ, ಕೆ. ಮಂಜಪ್ಪ, ಹೊನ್ನಾಳಿ ಪೊಲೀಸ್ ಸಿಬ್ಬಂದಿಗಳಾದ ಬಸವರಾಜ ವೆಂಕಟರಾಮ, ಫೈರೋಜ್ ಖಾನ್, ಜಗದೀಶ್ ಒಳಗೊಂಡ ತಂಡವು ಸವಳಂಗ ಕಡೆ ತೆರಳುವ ವಾಹನಗಳ ತಪಾಸಣೆ ಮಾಡುತ್ತಿರುವಾಗ ಆಯನೂರು ಕಡೆಯಿಂದ ಸವಳಂಗ ಕಡೆಗೆ ಬಂದ ಓಮಿನಿ ವಾಹನವನ್ನು ತಪಾಸಣೆ ನಡೆಸಿದಾಗ ಬಂಧಿತ ಆರೋಪಿಗಳು 4 ಅಡಿಕೆ ಚೀಲಗಳ ಸಹಿತ ಸೆರೆ ಸಿಕ್ಕಿದ್ದಾರೆ. ವಿಚಾರಿಸಿದಾಗ ಮಾದಾಪುರ ಗ್ರಾಮದಲ್ಲಿ ಹಾಗೂ ಶಿವಮೊಗ್ಗದ ಮುದುವಾಲ ಗ್ರಾಮದಲ್ಲಿ ಅಡಿಕೆ ಕಳ್ಳತನ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾರೆ.

error: Content is protected !!