ದಾವಣಗೆರೆ, ಮಾ.16- ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ಅಭಿವೃದ್ಧಿಗಾಗಿ ನಿಗಮಕ್ಕೆ 250 ಕೋಟಿ ರೂ.ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ಕರ್ನಾಟಕ ಅಲೆಮಾರಿ ಅಥವಾ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ತಿಳಿಸಿದರು.
ನಗರದ ಹೊರವಲಯದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅತೀ ಹಿಂದುಳಿದ ಅಲೆಮಾರಿ, ಅರೆ ಅಲೆಮಾರಿ ಜನಾಂಗಕ್ಕೆ ಸರ್ಕಾರದ ವಿವಿಧ ಯೋಜನೆಗಳಡಿ ವಸತಿ ಸೌಲಭ್ಯಗಳನ್ನು ಒದಗಿಸಿ ಡೇರೆ ಮುಕ್ತ ರಾಜ್ಯವನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದರು.
ರಾಜ್ಯದಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದ ಜನಸಂಖ್ಯೆ ಸುಮಾರು 70 ಲಕ್ಷದಷ್ಟಿದೆ. ನಿಗಮದಡಿಯಲ್ಲಿ 46 ಸಮುದಾಯಗಳು ಬರುತ್ತವೆ. ಅದರಲ್ಲಿ ಶೇಕಡ 95 ರಷ್ಟು ಜನರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಎಂದ ಅವರು, ನಿಗಮದೊಂದಿಗೆ ಹಿಂದುಳಿದ ಕಲ್ಯಾಣ ವರ್ಗಗಳ ಇಲಾಖೆ ಹಾಗೂ ಸರ್ಕಾರದ ನೆರವಿನೊಂದಿಗೆ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದ ಸಮೀಕ್ಷೆ ನಡೆಸಲಾಗುವುದು ಎಂದರು.
ಜಿಲ್ಲೆಯಲ್ಲಿ ಪಿಚ್ಚಗುಂಟ್ಲ, ಹೆಳವ, ಗೋಂಧಳಿ, ಭೈರಾಗಿ, ಗಾರುಡಿ, ಗೊಲ್ಲ ಅಥವಾ ಯಾದವ ಜನಾಂಗದವರಿದ್ದು, ಎಲ್ಲಾ ಸಮುದಾಯಗಳು ಒಗ್ಗಟ್ಟಾಗಿ ಸಂಘಟಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಹಾಗೂ ಸರ್ಕಾರದಿಂದ ದೊರೆಯುವ ಮೂಲಭೂತ ಸೌಕರ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದವರ ಪರಿಶೀಲನೆ ನಡೆಸಲು ಹಗರಿಬೊಮ್ಮನಹಳ್ಳಿಗೆ ತೆರಳಿದಾಗ ಅಲ್ಲಿರುವ ಬೈಲ ಪತ್ತಾರ್ ಜನಾಂಗದವರು ಇತ್ತ ಗುಡಿಸಲು ಅಲ್ಲದ ಅತ್ತ ಮನೆಯೂ ಅಲ್ಲದೇ ಡೇರೆ ಹಾಕಿ ವಾಸ ಮಾಡುತ್ತಿರುವುದನ್ನು ಕಂಡು ಬೇಸರವಾಯಿತು. ಈ ನಿಟ್ಟಿನಲ್ಲಿ ಸರ್ಕಾರದ ಜಾಗದಲ್ಲಿ ಈ ಜನಾಂಗದವರಿಗೆ ಸೂರು ನೀಡಬೇಕು. ಇಲ್ಲವೆಂದರೆ ಸರ್ಕಾರ ಖಾಸಗಿ ಜಾಗವನ್ನು ಖರೀದಿಸಿ ಮನೆ ಕಟ್ಟಿಸಿಕೊಡಬೇಕು ಎಂದು ಮನವಿ ಮಾಡಿದರು.
ಜಿ.ಪಂ. ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ, ನಿಗಮದ ನಿರ್ದೇಶಕ ಕೆ.ಹೆಚ್.ಲಕ್ಷ್ಮಣ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಂಗಪ್ಪ, ಗುಣ್ಣಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.