ಜಿಲ್ಲಾಧಿಕಾರಿಗಳಿಂದ ತಾರತಮ್ಯ ನೀತಿ

ಹರಿಹರಕ್ಕೆ ಸೌಲಭ್ಯ ಕಲ್ಪಿಸುವಲ್ಲಿ ಜಿಲ್ಲಾಡಳಿತ ವಿಫಲ: ಶಾಸಕ ರಾಮಪ್ಪ

ಹರಿಹರ, ಮೇ 24- ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ತಾರತಮ್ಯ ನೀತಿಯಿಂದಾಗಿ ಹರಿಹರ ತಾಲ್ಲೂಕಿನಲ್ಲಿ ಕೊರೊನಾ ರೋಗದಿಂದ ಹೆಚ್ಚಿನ ಪ್ರಮಾ ಣದಲ್ಲಿ ಮರಣಗಳು ಸಂಭವಿಸುತ್ತಿದ್ದು,  ಈ ಬೆಳವಣಿಗೆ ಹಾಗೇಯೇ ಮುಂದುವರೆದರೆ ಮುಂದಾಗುವ ಪರಿಣಾಮವನ್ನು ಜಿಲ್ಲಾಧಿಕಾರಿಗಳು ಎದುರಿಸಬೇಕಾಗುತ್ತದೆ ಎಂದು ಶಾಸಕ ಎಸ್‌. ರಾಮಪ್ಪ ಖಾರವಾಗಿ ಹೇಳಿದ್ದಾರೆ.

ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಶಾಸಕರು, ಹರಿಹರ ತಾಲ್ಲೂಕಿನಲ್ಲಿ ಪ್ರತಿನಿತ್ಯ ಅಧಿಕ ಸಂಖ್ಯೆಯಲ್ಲಿ ಜನರು ಮರಣ ಹೊಂದುತ್ತಿದ್ದಾರೆ. ಆದರೆ, ಎಷ್ಟು ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ ಮತ್ತು ಎಷ್ಟು ಜನ ಮರಣ ಹೊಂದಿದ್ದಾರೆ  ಎಂದು ಸರಿಯಾದ ಅಂಕಿ, ಅಂಶಗಳನ್ನು ಜಿಲ್ಲಾಧಿ ಕಾರಿಗಳು ನೀಡುತ್ತಿಲ್ಲ. ಇದು ಅನುಮಾನಕ್ಕೆ  ಎಡೆ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿಗಳು ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕಿನಲ್ಲಿರುವ ಆಸ್ಪತ್ರೆಗೆ ಆಕ್ಸಿಜನ್ ಹೆಚ್ಚು ಕಳಿಸಿದ್ದಾರೆ. ಆದರೆ, ಹರಿಹರ ನಗರಕ್ಕೆ ಆಕ್ಸಿಜನ್ ಕಡಿಮೆಯಾಗಿದೆ ಎಂದವರು ಹೇಳಿದರು.

ಸರ್ಕಾರ ಕೂಡ ದಿನಕ್ಕೊಂದು ಹೇಳಿಕೆಯನ್ನು ಕೊಡುತ್ತಾ, ಜನರನ್ನು ದಿಕ್ಕು ತಪ್ಪಿಸುತ್ತಿದ್ದು,  ಯಾವುದೇ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಹರಿಹರ ನಗರಕ್ಕೆ ಅನುಗುಣವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯಗಳನ್ನು ಒದಗಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ದೂರಿದರು. 

ಪಾಸಿಟಿವ್ ಬಂದವರು ಕೋವಿಡ್ ಕೇರ್ ಸೆಂಟರ್‌ಗೆ ಆಗಮಿಸುತ್ತಿಲ್ಲ. ಆಶಾ ಕಾರ್ಯಕರ್ತರು ಕರೆಯಲು ಹೋದಾಗ ಅವರಿಗೆ ಬೈದು ಹಲ್ಲೆ ಮಾಡುತ್ತಿದ್ದಾರೆ. ಇದರಿಂದಾಗಿ ತಾಲ್ಲೂಕಿನ ಒಂದೇ ಗ್ರಾಮದಲ್ಲಿ ಅಧಿಕ ಪ್ರಮಾಣದಲ್ಲಿ ಜನರು ಮರಣ ವನ್ನು ಹೊಂದಲು ದಾರಿಯಾಯಿತು ಎಂದರು.

ನನ್ನ ಅನುದಾನದಲ್ಲಿ ತುರ್ತಾಗಿ ಬಳಕೆ ಮಾಡಲು ಸರ್ಕಾರಿ ಆಸ್ಪತ್ರೆಗೆ 44 ಲಕ್ಷ ರೂ.ಗಳ ಯೋಜನೆ ರೂಪಿಸಿ, ಮಾನಿಟರ್ 10, ಆಕ್ಸಿಜನ್ ಸಿಲಿಂಡರ್ 50, ಆಕ್ಸಿಜನ್ ನಾಸಲ್ 50, ಆಕ್ಸಿಜನ್ ಫೇಸ್ ಮಾಸ್ಕ್ 50, ಆಕ್ಸಿಜನ್ ಫ್ಲೋ ಮೀಟರ್ 50, ಇಸಿಜಿ ಯಂತ್ರ 2, 30 ಹಾಸಿಗೆೆಗಳು  ಸೇರಿದಂತೆ ವಿವಿಧ ವೈದ್ಯಕೀಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್ ಮಾತನಾಡಿ, ಮೂವರು ವೈದ್ಯರು ಮತ್ತು 3 ಸಿಬ್ಬಂದಿಗಳ ನೇಮಕ ಮಾಡಲಾಗಿದೆ. ಕಳೆದ 10 ನೇ ತಾರೀಖು ಕೆಲವು ವೈದ್ಯರ ನೇಮಕಾತಿ ಮಾಡಲಾ ಗಿದೆ. ಆದರೆ, ಅವರು ಇನ್ನೂ ಕೆಲಸಕ್ಕೆ ಹಾಜ ರಾಗಿಲ್ಲ. ಇದುವರೆಗೆ ಒಟ್ಟು 39,706 ಜನರಿಗೆ ಶೇ. 51 ರಷ್ಟು ಲಸಿಕೆಯನ್ನು ಹಾಕಲಾಗಿದೆ  ಎಂದರು.

ಈ ಸಂದರ್ಭದಲ್ಲಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಹನುಮನಾಯ್ಕ್, ಡಾ. ರಾಜಪ್ಪ, ಪಿಎಸ್ಐ ಸುನೀಲ್ ಬಸವರಾಜ್, ಸಲಹಾ ಸಮಿತಿ ಸದಸ್ಯ ಮಂಜುನಾಥ್, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ವಿಜಯ ಮಾಂತೇಶ್ , ಹನುಮಂತಪ್ಪ, ಎನ್.ಇ. ಸುರೇಶ್, ಕೊಟ್ರಪ್ಪ ಇನ್ನಿತರರು ಹಾಜರಿದ್ದರು.

error: Content is protected !!