ಅವೈಜ್ಞಾನಿಕ ಆಸ್ತಿ ತೆರಿಗೆ ಹೆಚ್ಚಳ ಕೈ ಬಿಡದಿದ್ದರೆ ಹೋರಾಟ ನಿಶ್ಚಿತ

ದಾವಣಗೆರೆ, ಆ. 2- ಪಾಲಿಕೆಯಿಂದ ಅವೈಜ್ಞಾನಿಕ ವಾಗಿ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದನ್ನು ತೀವ್ರವಾಗಿ ಖಂಡಿಸಿರುವ ಜಿಲ್ಲಾ ಕಾಂಗ್ರೆಸ್,  ಶೀಘ್ರವೇ ರದ್ದು ಪಡಿಸಿ ಹಿಂದಿನ ಆಸ್ತಿ ತೆರಿಗೆಯನ್ನೇ ಮುಂದುವರೆಸಬೇಕು. ಇಲ್ಲದಿದ್ದರೆ ಹೋರಾಟ ನಡೆಸುವುದು ಶತಃಸಿದ್ಧ ಎಂದು ಎಚ್ಚರಿಸಿದೆ.

ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಖಾಲಿ ನಿವೇಶನಗಳಿಗೆ ಉಪ ನೋಂದಣಾಧಿಕಾರಿಗಳ ಕಚೇರಿಯ ಎಸ್.ಆರ್. ದರದ ಮೇಲೆ ಕಂದಾಯ ಹೆಚ್ಚಿಸಲಾಗಿದ್ದು, ಕಳೆದ ವರ್ಷ 1 ಸಾವಿರ ರೂ. ಕಂದಾಯ ಕಟ್ಟಿದವರು ಈ ಬಾರಿ 5 ಸಾವಿರ ರೂ. ಪಾವತಿಸಬೇಕಾಗಿದೆ. ಕೊರೋನಾ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಇದರಿಂದ ಆರ್ಥಿಕ ಹೊರೆಯಾಗಿದೆ ಎಂದು ಹೇಳಿದರು.

ಮನೆಗಳು, ವಾಣಿಜ್ಯ ಕಟ್ಟಡಗಳು, ಕೈಗಾರಿಕಾ ಕಟ್ಟಡಗಳ ಸುತ್ತ ಸಾವಿರ ಅಡಿಗೂ ಹೆಚ್ಚಿನ ಜಾಗಕ್ಕೆ ತೆರಿಗೆ ವಿಧಿಸಲಾಗುತ್ತಿದ್ದು, ಇದೊಂದು ಅವೈಜ್ಞಾನಿಕ ಕ್ರಮ. ಇದನ್ನು ಕೈ ಬಿಡುವಂತೆ ಅವರು ಆಗ್ರಹಿಸಿದರು. ನಗರಕ್ಕೆ ಹರಿಹರ ದಿಂದ ನೇರವಾಗಿ ಅಶುದ್ಧ ನೀರು ಪೂರೈಕೆ ಮಾಡಲಾ ಗುತ್ತಿದೆ. ಮಳೆಗಾಲದಲ್ಲೂ ಕೆರೆಗಳಿಗೆ ನೀರು ಸಂಗ್ರಹಿಸಿಟ್ಟು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಕನಿಷ್ಟ ಪಕ್ಷ ನೀರನ್ನು ಕಾಯಿಸಿ ಕುಡಿಯಿರಿ ಎಂದು ಜನತೆಗೆ ಹೇಳುವ ಅರಿವೂ ಪಾಲಿಕೆ ಅಧಿಕಾರಿಗಳಿಗೆ, ಮೇಯರ್‌ಗಳಿಗೆ ಇಲ್ಲ ಎಂದರು.

ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಆಸ್ತಿ ತೆರಿಗೆಯನ್ನು ಕನಿಷ್ಟ ಶೇ.15ರಿಂದ ಗರಿಷ್ಟ ಶೇ.30ರೊಳಗೆ ಹೆಚ್ಚಿಸಬೇಕಿತ್ತು. ಆದರೆ ಪಾಲಿಕೆಯಿಂದ ವಸತಿ ನಿವೇಶನಗಳಿಗೆ ಶೇ.18ರಷ್ಟು ಹಾಗೂ ವಾಣಿಜ್ಯ ನಿವೇಶನಗಳಿಗೆ ಶೇ.24ರಷ್ಟು ಹೆಚ್ಚು ಮಾಡಲಾಗಿದೆ. ಇದು ಜನತೆಗೆ ತೀವ್ರ ಹೊರೆಯಾಗಿದೆ. ಇದನ್ನು ಪುನರ್ ಪರಿಶೀಲಿಸಬೇಕು. ಆಸ್ತಿ ತೆರಿಗೆ ಚರ್ಚೆ ಬಗ್ಗೆಯೇ ಪ್ರತ್ಯೇಕವಾಗಿ  ಪಾಲಿಕೆ ಮಾನ್ಯ ಸಭೆ ನಡೆಸುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಪೂರ್ತಿ ಹೆಲ್ಮೆಟ್ ಬೇಡ: ಕೊರೊನಾದಿಂದ ಸಂಕಷ್ಟದಲ್ಲಿರುವ ಜನರು ಸುಮಾರು 2 ಸಾವಿರ ರೂ. ಮೌಲ್ಯದ ಪೂರ್ಣ ಹೆಲ್ಮೆಟ್ ಕೊಳ್ಳಲು ಕಷ್ಟ. ಆದ್ದರಿಂದ ಐ.ಎಸ್.ಐ. ಗುಣಮಟ್ಟದ ಅರ್ಧ ಹೆಲ್ಮೆಟ್ ಧರಿಸಲು ಅವಕಾಶ ನೀಡುವಂತೆ ಮನವಿ ಮಾಡಿರುವ ನಾಗರಾಜ್, ಈ ಬಗ್ಗೆ ಪಾಲಿಕೆ ಸದಸ್ಯರೆಲ್ಲರೂ ಸೇರಿ ಎಸ್ಪಿ ಅವರಿಗೆ ಮನವಿ  ಸಲ್ಲಿಸುವುದಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅನಿತಾಬಾಯಿ ಮಾಲತೇಶ್ ಜಾಧವ್, ಅಯೂಬ್ ಪೈಲ್ವಾನ್, ಸುಷ್ಮಾ ಪಾಟೀಲ್, ಯತಿರಾಜ್ ಮಠದ್, ಶಶಿಧರ ಪಾಟೀಲ್, ಜಬ್ಬಾರ್, ಹರೀಶ್ ಬಸಾಪುರ, ಮನೋಜ್ ಕುಮಾರ್, ಶ್ರೀಕಾಂತ್ ಬಗರೆ, ಸೋಹೆಲ್, ಸೋಹೆಲ್, ಅಣ್ಣೇಶ್ ಇತರರು ಉಪಸ್ಥಿತರಿದ್ದರು.

error: Content is protected !!