ಸಂಕಷ್ಟದಲ್ಲಿ ಆಹಾರ ನೀಡುವ ಕೆಚ್ಚೆದೆಯ ಕನ್ನಡಿಗರ ಪಡೆ

ದಾವಣಗೆರೆ, ಮೇ 23- ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಬರುವ ಸುದ್ದಿ, ವೀಡಿಯೋಗಳನ್ನು ನೋಡಿ ಹತ್ತಾರು ಜನರಿಗೆ ಫಾರ್ವರ್ಡ್ ಮಾಡಿ ಕುಳಿತುಕೊಳ್ಳುವ ಜನರೇ ಹೆಚ್ಚು.

ಆದರೆ ಅದೇ ಸಾಮಾಜಿಕ ಜಾಲ ತಾಣಗಳ ಮೂಲಕವೇ ಹಣ ಸಂಗ್ರಹಿಸಿ, ಸಂಕಷ್ಟದಲ್ಲಿರುವವರಿಗೆ ಸದ್ದಿಲ್ಲದೆ ಆಹಾರ, ನೀರು ನೀಡುವ ಮೂಲಕ ನೆರವಿನ ಹಸ್ತ ಚಾಚುತ್ತಿದೆ ದಾವಣಗೆರೆಯ ಕೆಚ್ಚೆದೆಯ ಕನ್ನಡಿಗರ ಪಡೆ

ಹೌದು, ಸದ್ಯದ ಸಂದರ್ಭದಲ್ಲಿ ಹೊತ್ತಿನ ಊಟಕ್ಕೂ ಪರಿತಪಿಸುವ ಸಂದರ್ಭ ಎದುರಾಗಿದೆ. ಹೋಟೆಲ್‌ಗಳು ಬಂದ್‌ ಆಗಿರುವುದರಿಂದ ಹೊರ ಊರುಗಳಿಂದ ನಗರ ಪ್ರವೇಶಿಸಿ ತೆರಳುವ ಲಾರಿ ಚಾಲಕರು, ಕ್ಲೀನರ್‌ಗಳು, ನಗರದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರು, ಪೌರ ಕಾರ್ಮಿಕರು, ನಿರ್ಗತಿಕರು ಹೀಗೆ ಹಲವಾರು ವರ್ಗದ ಜನತೆ ನೀರು ಹಾಗೂ ಊಟಕ್ಕೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಅದಕ್ಕಾಗಿಯೇ ಕನ್ನಡಿಗರ ಪಡೆಯ ಹದಿನೈದಕ್ಕೂ ಹೆಚ್ಚು ಸದಸ್ಯರು ದಿನ ಬಿಟ್ಟು ದಿನ ನಗರದ ವಿವಿಧ ಪ್ರದೇಶಗಳಲ್ಲಿ 400ಕ್ಕೂ ಹೆಚ್ಚು ಆಹಾರದ ಪೊಟ್ಟಣಗಳನ್ನು ಹಾಗೂ ನೀರಿನ ಬಾಟೆಲ್‌ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಅಷ್ಟೇ ಅಲ್ಲ, ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ ಸಹ.

ಪಿಯುಸಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳು, ವೈದ್ಯ ವಿದ್ಯಾರ್ಥಿಗಳನ್ನೊಳಗೊಂಡ ಈ `ಪಡೆ’ಗೆ ತಂಡದ ಸದಸ್ಯರ ಸ್ನೇಹಿತರು, ಕುಟುಂಬ ವರ್ಗವೂ ಸಹಕಾರ ನೀಡುತ್ತಿದೆ.

1.25 ಲಕ್ಷ ರೂ. ಸಂಗ್ರಹ: ನಾವು ಯಾರ ಬಳಿಯೂ ಹಣ ಯಾಚಿಸಿಲ್ಲ. ಕೇವಲ ಸಾಮಾಜಿಕ ಜಾಲ ತಾಣಗಳ ಮೂಲಕ ನಾವು ಮಾಡಲುದ್ದೇಶಿಸಿದ ಕಾರ್ಯ ತಿಳಿದೇ ಸ್ನೇಹಿತರು, ಸಂಬಂಧಿಗಳು ಹಣ ನೀಡಿದ್ದಾರೆ. ಇಲ್ಲಿವರೆಗೆ 1.25 ಲಕ್ಷ ರೂ. ಹಣ ಸಂಗ್ರಹವಾಗಿದೆ. ಈ ಹಣದಿಂದಲೇ ನಾವು ಆಹಾರ, ನೀರು ನೀಡುತ್ತಿದ್ದೇವೆ ಎನ್ನುತ್ತಾರೆ ಕೆಚ್ಚೆದೆಯ ಕನ್ನಡಿಗರ ಪಡೆಯ ಎ.ಎಂ.ವಿ. ಒಡೆಯರ್.

ಬಸವ ಜಯಂತಿಯಂದು ಈ ಸೇವಾ ಕಾರ್ಯ ಆರಂಭಿಸಿದೆವು. ನಗರದ ಸಿದ್ದವೀರಪ್ಪ ಬಡಾವಣೆಯಲ್ಲಿನ ನಮ್ಮ ಮನೆಯಾದ ಶರಣಧಾಮದಲ್ಲಿ ಆಹಾರ ತಯಾರಾಗುತ್ತದೆ. ಆಟೋ ಚಾಲಕರೂ ಆದ ವೀರೇಶ್ ಎಂಬುವವರು ಪ್ರತಿ ದಿನ ಆಹಾರ ತಯಾರಿಸಿ ಕೊಡುತ್ತಿದ್ದಾರೆ. ಬೆಳಿಗ್ಗೆ 7 ಗಂಟೆ ಸುಮಾರಿಗೆ ಸುಮಾರು 40ಕೆ.ಜಿ.ಯಷ್ಟು ಅಕ್ಕಿ ಬೇಯಿಸಿ ಚಿತ್ರಾನ್ನ, ಪಲಾವ್, ಕ್ಯಾಪ್ಸಿಕಮ್ ರೈಸ್ ಹೀಗೆ ವಿವಿಧ ರೀತಿಯ ಪ್ರತಿ ದಿನ ಒಂದೊಂದು ಬಗೆಯ ಅಡುಗೆ ತಯಾರಿಸಿ 10.30ರ ವೇಳೆಗೆ ಪೊಟ್ಟಣಗಳನ್ನು ಮಾಡುತ್ತೇವೆ. ನಂತರ ವಿತರಣೆಗೆ ಮುಂದಾಗುತ್ತೇವೆ. ನಮ್ಮ ಈ ಕಾರ್ಯಕ್ಕೆ ಹಲವೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದು ನಮ್ಮನ್ನು ಮತ್ತಷ್ಟು ಹುರಿದುಂಬಿಸುತ್ತಿದೆ ಎನ್ನುವುದು ಒಡೆಯರ್ ಮಾತು.

ಡಾ.ಎ.ಎಂ. ಕೃಪಾನಿಧಿ, ಡಾ.ಎಸ್.ಎಂ. ವಿನುತ, ಸಪ್ಪಿ ಒಡೆಯರ್, ಬಿ.ಎಂ. ಅಭಿಷೇಕ್, ಆರ್.ಸುಜಯ್ ರಾಜ್, ರೋಹನ್, ಸಾಗರ್, ಯಶವಂತ್ ಶಾಮನೂರು, ವಚನ್ ಹೊಸಮಠ್, ವಿನೀತ್ ಶರಣ್, ಕೆ.ಜಿ. ಪೃಥ್ವಿ, ಶರತ್ ಒಡೆಯರ್, ಬಿ.ಎಂ. ಅಕ್ಷಯ್, ದರ್ಶನ್ ಶಾಮನೂರು, ಅಜಯ್, ಯು.ಪಿ. ವಿನಯ್ ಈ `ಪಡೆ’ಯಲ್ಲಿದ್ದಾರೆ.

error: Content is protected !!