ಮೂರು ದಿನದ ಪೂರ್ಣ ಲಾಕ್ ಬೆನ್ನಲ್ಲೇ ಮತ್ತೊಂದು ವಾರ ಕಠಿಣ ನಿರ್ಬಂಧ ಮುಂದುವರಿಸಿದ ಜಿಲ್ಲಾಡಳಿತ
ದಾವಣಗೆರೆ, ಮೇ 23- ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದ್ದ ಸಂಪೂರ್ಣ ಲಾಕ್ಡೌನ್ ಅನ್ನು ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ಮೇ 31ರ ಸೋಮವಾರ ಬೆಳಿಗ್ಗೆ 6 ಗಂಟೆವರೆಗೆ ಮುಂದುವರೆಸ ಲಾಗಿದೆ.
ಜಿಲ್ಲೆಯ ತಾಲ್ಲೂಕು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿ ಯಿಂದ ಕೆಲವು ನಿಬಂಧನೆಗಳಿಗೆ ಒಳಪಡಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭಾನುವಾರ ಸಂಜೆ ಆದೇಶ ಹೊರಡಿಸಿದ್ದಾರೆ.
ಕಳೆದ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಮೇ 24ರ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್ಡೌನ್ ಜಾರಿಗೊಳಿಸ ಲಾಗಿತ್ತು. ಇದೀಗ ಮತ್ತೆ ಒಂದು ವಾರಗಳ ಕಾಲ ಮುಂದೂಡಲಾಗಿದೆ. ಜನತೆಗೆ ದಿನಸಿ ಮತ್ತಿತರೆ ವಸ್ತುಗಳ ಖರೀದಿಗೆ ಸೋಮವಾರ ಬೆಳಿಗ್ಗೆ 6 ರಿಂದ 10ರವರೆಗೆ ಮಾತ್ರ ಕಾಲಾವಕಾಶ ನೀಡಿದಂತಾಗಿದೆ.
ಅವಕಾಶ ನೀಡಿರುವ ನಾಲ್ಕು ತಾಸುಗಳಲ್ಲಿ ವಸ್ತುಗಳನ್ನು ಮಾರಬೇಕೋ ಅಥವಾ ಕೊಂಡುಕೊಳ್ಳಬೇಕೋ ಎಂಬ ಜಿಜ್ಞಾಸೆ ಅಂಗಡಿಗಳ ಮಾಲೀಕರದ್ದಾದರೆ, ಮುಂದಿನ ವಾರಕ್ಕೆ ಬೇಕಾಗುವಷ್ಟು ವಸ್ತುಗಳನ್ನು ಕೊಂಡುಕೊಳ್ಳುವ ಉದ್ದೇಶ ಗ್ರಾಹಕರದ್ದಾಗಲಿದೆ. ಬೆಳಗಿನ ನಾಲ್ಕು ತಾಸು ಮಾರುಕಟ್ಟೆ, ದಿನಸಿ ಅಂಗಡಿ ಇರುವ ಪ್ರದೇಶಗಳು ಜಾತ್ರೆಯಂತಾಗುವ ಎಲ್ಲಾ ಲಕ್ಷಣಗಳೂ ಇವೆ ಎನ್ನಬಹುದು.
ರಾಜ್ಯಾದ್ಯಂತ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಅಂಗಡಿ ಮುಂಗಟ್ಟುಗಳನ್ನು ತೆರೆಯಲು ರಾಜ್ಯ ಸರ್ಕಾರ ಬೆಳಿಗ್ಗೆ 6 ರಿಂದ 10ರವರೆಗೆ ಅನುಮತಿ ನೀಡಿದ್ದರೂ, ದಾವಣಗೆರೆ ಜಿಲ್ಲೆಯಲ್ಲಿ ಮಾತ್ರ ಈ ರೀತಿ ವಾರಗಟ್ಟಲೆ ಸಂಪೂರ್ಣ ಲಾಕ್ ಮಾಡಿರುವ ಹಠಾತ್ ನಿರ್ಧಾರ ಸಾರ್ವಜನಿಕರನ್ನು ಸಮಸ್ಯೆಗೆ ಗುರಿ ಮಾಡಲಿದೆ. ನೂತನ ಆದೇಶದನ್ವಯ, ಎಲ್ಲಾ ಅಂಗಡಿ ಮುಂಗಟ್ಟುಗಳು, ವಾಣಿಜ್ಯ-ಕೈಗಾರಿಕಾ ಚಟುವಟಿಕೆಗಳನ್ನು ನಿರ್ಬಂಧಿಸ ಲಾಗಿದೆ. ಸಾರ್ವಜನಿಕರು ಅಗತ್ಯ ಚಟುವ ಟಿಕೆಗಳಿಗೆ ವಾಹನಗಳಲ್ಲಿ ಸಂಚರಿಸುವುದನ್ನು ನಿರ್ಬಂಧಿಸಿ, ನಡೆದುಕೊಂಡು ಹೋಗಲು ಮಾತ್ರ ಅವಕಾಶ ನೀಡಲಾಗಿದೆ. ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಮದುವೆ ಸಮಾರಂಭಕ್ಕೆ ಈಗಾಗಲೇ ನೀಡಲಾಗಿರುವ ಅನುಮತಿ ಪ್ರಕರಣಗಳಲ್ಲಿ ಕೇವಲ 10 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಕೃಷಿ ಚಟಿವಟಿಕೆಗಳಿಗೆ ಅನುಮತಿ
ಕೃಷಿ ಅವಲಂಬಿತ ಕೈಗಾರಿಕೆಗಳು ಕಾರ್ಯನಿರ್ವಹಿಸಲು ಅನುಮತಿಸಿದೆ ಹಾಗೂ ಕೃಷಿ ಉಪಕರಣ ಬಾಡಿಗೆ ಕೇಂದ್ರಗಳಿಗೆ, ಯಂತ್ರೋಪಕರಣಗಳಿಗೆ ಸಂಬಂಧಿಸಿದ ಅಂಗಡಿಗಳು ಮತ್ತು ಗೋದಾಮುಗಳು ಸೇರಿದಂತೆ ಎಲ್ಲಾ ಕೃಷಿ ಮತ್ತು ತತ್ಸಂಬಂಧಿತ ಅಂಗಡಿಗಳು ಮತ್ತು ಗೋದಾಮುಗಳು ಸೇರಿದಂತೆ ಎಲ್ಲಾ ಕೃಷಿ ಮತ್ತು ತತ್ಸಂಬಂಧಿತ ಕಾರ್ಯಚಟುವಟಿಕೆಗಳಿಗೆ ಹಾಗೂ ಸಿಬ್ಬಂದಿಗಳು ಕೃಷಿ ಕೈಗಾರಿಕಾ ಸಂಸ್ಥೆಗಳು ನೀಡಿದ ಅರ್ಹ ಗುರುತಿನ ಚೀಟಿ, ಅಧಿಕೃತ ಪತ್ರವನ್ನು ತೋರಿಸುವ ಮೂಲಕ ಓಡಾಡುವುದಕ್ಕೆ ಅನುಮತಿ ನೀಡಲಾಗಿದೆ. ಕೃಷಿ ಚಟುವಟಿಕೆಗಳಿಗೆ ಅನುವಾಗುವಂತೆ ಅಗತ್ಯ ವಸ್ತುಗಳಾದ ಬೀಜ, ಗೊಬ್ಬರ, ಕೀಟ ನಾಶಕಗಳು, ಕೃಷಿ ಕೋಯ್ಲು ಯಂತ್ರೋಪಕರಣಗಳ ಸಾಗಣೆ ಮತ್ತು ಸಂಬಂಧಿಸಿದ ಅಂಗಡಿ ಮತ್ತು ಗೋದಾಮುಗಳಲ್ಲಿ ಇಳಿಸಲು ಮತ್ತು ಪ್ರತಿ ದಿನ ಬೆಳಿಗ್ಗೆ 6 ಗಂಟೆಯಿಂದ 10ರ ವರೆಗೆ ವ್ಯಾಪಾರ ವಹಿವಾಟು ನಡೆಸಲು ಅನುಮತಿ ನೀಡಲಾಗಿದೆ.
ವಾರದ ಕಂತಿಗಾಗಿ ಒತ್ತಾಯಿಸುವಂತಿಲ್ಲ
ದಾವಣಗೆರೆ, ಮೇ 23- ಲಾಕ್ ಡೌನ್ ಸಂದರ್ಭದಲ್ಲಿ ಸಣ್ಣ ಸಣ್ಣ ಕೆಲಸ ಮಾಡುವವರು ಸ್ವ ಸಹಾಯ ಸಂಘಗಳಲ್ಲಿ ಸಾಲ ಪಡೆದಿರುವವರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಇವರುಗಳಿಗೆ ಸಾಲ ನೀಡಿರುವ ಮೈಕ್ರೋಫೈನಾನ್ಸ್ ಸಂಸ್ಥೆಗಳಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಉಜ್ಜೀವನ್ ಪೈನಾನ್ಸ್ ನಂತಹ ಅನೇಕ ಸಂಸ್ಥೆಗಳು ವಾರದ ಕಂತುಗಳನ್ನು ಕಟ್ಟಲು ಒತ್ತಾಯಿಸಬಾರದು ಎಂದು ಜಿಲ್ಲಾಡಳಿತ ಆದೇಶಿಸಿದೆ.
ಆದೇಶದ ಹೊರತಾಗಿಯೂ ಒಂದು ವೇಳೆ ಸಣ್ಣ ಪುಟ್ಟ ವ್ಯಾಪಾರ ಮಾಡುವವರನ್ನು ಕಂತುಗಳನ್ನು ಕಟ್ಟಲು ಒತ್ತಾಯಿಸುವಂತಹ ದೂರುಗಳು ಜಿಲ್ಲಾಡಳಿತಕ್ಕೆ ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ
ಈ ಮದುವೆಗಳಲ್ಲಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ನಿರ್ಬಂಧಿಸಲಾಗಿದೆ. ಕಿರಾಣಿ ಅಂಗಡಿಗಳು, ದಿನಸಿ, ಹಣ್ಣು ತರಕಾರಿಗಳು, ಮಾಂಸ ಮತ್ತು ಮೀನು, ಹಾಗೂ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯನ್ನು ಸಂಪೂರ್ಣ ವಾಗಿ ನಿಷೇಧಿಸಲಾಗಿರುತ್ತದೆ. ಎಲ್ಲಾ ರೀತಿ ಯ ಮದ್ಯದಂಗಡಿಗಳನ್ನು ಮತ್ತು ಬಾರ್ಗ ಳನ್ನು ಈ ಅವಧಿಯಲ್ಲಿ ನಿಷೇಧಿಸಲಾಗಿ ರುತ್ತದೆ. ಉಳಿದ ಎಲ್ಲಾ ಸಾಮಾಜಿಕ, ಧಾರ್ಮಿಕ ಸಭೆ ಸಮಾರಂಭಗಳನ್ನು ನಿರ್ಬಂಧಿಸಲಾಗಿದೆ. ಶವ ಸಂಸ್ಕಾರಗಳಲ್ಲಿ ಗರಿಷ್ಟ 5 ಜನರಿಗೆ ಮಾತ್ರ ಭಾಗವಹಿಸಲು ಅನುಮತಿಸಿದೆ. ದಾವಣಗೆರೆ ಜಿಲ್ಲೆಗೆ ಆಗಮಿಸುವವರನ್ನು ಪ್ರತೀ ಚೆಕ್ ಪೋಸ್ಟ್ಗಳಲ್ಲಿ ವಿಚಾರಣೆ ನಡೆಸಿ, ದಾವಣಗೆರೆ ಜಿಲ್ಲೆಯಲ್ಲಿ ವಾಸ್ತವ್ಯ ಹೂಡುವುದಾದಲ್ಲಿ ಎಲ್ಲಿ ತಂಗುತ್ತಾರೆ ಎಂಬ ಬಗ್ಗೆ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆನ್ನು ಪಡೆದುಕೊಳ್ಳಲಾಗುವುದು ಹಾಗೂ ಹೊರ ಜಿಲ್ಲೆಯಿಂದ ಆಗಮಿಸುವವರು ಕಡ್ಡಾಯವಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿ ಇರಬೇಕು. ವಾಹನ ಬಳಕೆಯನ್ನು ತುರ್ತು ವೈದ್ಯಕೀಯ ಸೇವೆಗಳಿಗೆ ಮಾತ್ರ ಬಳಸಬಹುದು,
ಕ್ಲಿನಿಕ್, ಆಸ್ಪತ್ರೆ, ಲಸಿಕೆ ಹಾಗೂ ಪರೀಕ್ಷೆ ಉದ್ದೇಶಗಳಿಗೆ ಕನಿಷ್ಟ ವೈದ್ಯಕೀಯ ದಾಖಲೆಗಳು, ವೈದ್ಯ ಸಲಹಾ ಚೀಟಿ, ಆಸ್ಪತ್ರೆಯಲ್ಲಿ ದಾಖಲಾದ ವಿವರಗಳ ರುಜುವಾತಿನೊಂದಿಗೆ ಸಂಚರಿಸಲು ಅನುಮತಿಸಲಾಗಿದೆ. ಹೋಟೆಲ್, ರೆಸ್ಟೋರೆಂಟ್ಗಳು, ಉಪಾಹಾರ ಗೃಹಗಳು ಪಾರ್ಸಲ್ ಸೇವೆಗಳನ್ನು ಗ್ರಾಹಕರ ಮನೆ ಬಾಗಿಲಿಗೆ ವಿತರಿಸಲು ಮಾತ್ರ ಅನುಮತಿ ಇದೆ. ಯಾವುದೇ ರೀತಿಯ ಪಾರ್ಸಲ್ ಗಳನ್ನು ಗ್ರಾಹಕರು ನೇರವಾಗಿ ಖರೀದಿಸಲು ಅವಕಾಶವಿರುವುದಿಲ್ಲ.
ಹಾಲು, ಡೈರಿ ಹಾಗೂ ಹಾಲಿನ ಬೂತ್ಗಳು ಮತ್ತು ಮೊಟ್ಟೆ ಅಂಗಡಿಗಳು ಮಾತ್ರ ಪ್ರತಿದಿನ ಬೆಳಿಗ್ಗೆ 6 ರಿಂದ 10.00 ಗಂಟೆಯವರೆಗೆ ತೆರೆಯಲು ಅನುಮತಿಸಲಾಗಿದೆ. ಇಂದಿರಾ ಕ್ಯಾಂಟೀನ್ ತೆರೆಯಲು ಅನುಮತಿಸಲಾಗಿದೆ ವಿಶೇಷವಾಗಿ ಅಮ್ಲಜನಕ ತರುವ ವಾಹನಗಳನ್ನು ತಡೆರಹಿತ ಸಾಗಾಟವನ್ನು ಅನುಮತಿಸಲಾಗಿದೆ.
ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಹಾಪ್-ಕಾಮ್ಸ್ ಮೂಲಕ ಮಾತ್ರ ಸಾರ್ವಜನಿಕರಿಗೆ ತರಕಾರಿಗಳನ್ನು ಹಾಗೂ ಹಣ್ಣುಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ಹಾಪ್-ಕಾಮ್ಸ್ ಲಭ್ಯವಿಲ್ಲದಿರುವ ಪ್ರದೇಶಗಳಲ್ಲಿ ಆಯುಕ್ತರು, ಮಹಾನಗರಪಾಲಿಕೆ ಮತ್ತು ಸಂಬಂಧಪಟ್ಟ ತಹಶೀಲ್ದಾರರು ಸ್ಥಳೀಯವಾಗಿ ಸೀಮಿತ ಸಂಖ್ಯೆಯಲ್ಲಿ ತಳ್ಳುವ ಗಾಡಿಯ ಮೂಲಕ ಮನೆ ಬಾಗಿಲಿಗೆ ತರಕಾರಿಗಳನ್ನು ಹಾಗೂ ಹಣ್ಣುಗಳನ್ನು ಮಾರಾಟ ಮಾಡಲು ಅನುಮತಿ ಕಲ್ಪಿಸಲಾಗಿದೆ.