ಮೀಸಲಾತಿ ಹೋರಾಟ ಕೈ ಬಿಟ್ಟ ಪಂಚಮಸಾಲಿ ಶ್ರೀ

ಮೀಸಲಾತಿ ಹೋರಾಟ ಕೈ ಬಿಟ್ಟ ಪಂಚಮಸಾಲಿ ಶ್ರೀ - Janathavaniಯಡಿಯೂರಪ್ಪ ನೀಡಿದ ಭರವಸೆ ಹಿನ್ನೆಲೆ: ಧರಣಿ ಅಂತ್ಯ ಗೊಳಿಸಿದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ

ಬೆಂಗಳೂರು, ಮಾ. 15 – ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿಂದು ನೀಡಿದ ಭರವಸೆ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಕ್ಕೆ ತಮ್ಮನ್ನು ಸೇರಿಸಬೇಕೆಂಬ ಹೋರಾಟವನ್ನು ಪಂಚಮಸಾಲಿ ಸಮುದಾಯ ಕೈಬಿಟ್ಟಿದೆ. 

ತಮ್ಮ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ಕಳೆದ ಕೆಲವು ದಿನಗಳಿಂದ ಹೋರಾಟ ನಡೆಸುತ್ತಿದ್ದ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ ಅವರು, ಮುಖ್ಯಮಂತ್ರಿ ಅವರ ಭರವಸೆ ಹಿನ್ನೆಲೆಯಲ್ಲಿ ತಮ್ಮ ಧರಣಿ ನಿಲ್ಲಿಸಿದರು. 

ಸಮುದಾಯದ ಜನಪ್ರತಿನಿಧಿಗಳು ನಗರದ ಸ್ವಾತಂತ್ರ್ಯ ಸಂಗ್ರಾಮ ಉದ್ಯಾನವನದಲ್ಲಿ ಧರಣಿ ನಡೆಸುತ್ತಿದ್ದ ಸ್ವಾಮೀಜಿ ಅವರನ್ನು ಭೇಟಿ ಮಾಡಿ, ಸರ್ಕಾರದ ನಿಲುವು ತಿಳಿಸಿ, ಧರಣಿ ನಿಲ್ಲಿಸುವಂತೆ ಮನವಿ ಮಾಡಿದರು. 

ಸರ್ಕಾರದ ಭರವಸೆಗೆ ಸ್ಪಂದಿಸಿದ ಸ್ವಾಮೀಜಿ ಶೇಂಗಾ ಒಬ್ಬಟ್ಟು ಸವಿದು ಷರತ್ತಿನ ಮೇಲೆ ಧರಣಿ ಸ್ಥಗಿತಗೊಳಿಸಿದರು.

ಇದಕ್ಕೂ ಮುನ್ನ ವಿಧಾನಸಭಾ ಅಧಿವೇಶನ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪಂಚಮಸಾಲಿ ಸಮುದಾಯವನ್ನು 2ಎ ಪ್ರವರ್ಗಕ್ಕೆ ಸೇರಿಸುವ ಭರವಸೆಯನ್ನು ಸರ್ಕಾರ ನೀಡಬೇಕು ಹಾಗೂ ಎಷ್ಟು ದಿನಗಳಲ್ಲಿ ಸೇರಿಸುತ್ತೀರಿ ಎಂಬುದನ್ನು ತಿಳಿಸಬೇಕು ಎಂದು ಪಟ್ಟುಹಿಡಿದರು.  ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಬಸವರಾಜ ಬೊಮ್ಮಾಯಿ, ಸರ್ಕಾರದ ನಿಲುವನ್ನು ತಿಳಿಸಿದರಾದರೂ, ಇದಕ್ಕೆ ಯತ್ನಾಳ್ ತೃಪ್ತರಾಗಲಿಲ್ಲ. 

ಸದನದಲ್ಲಿ ಹಾಜರಿದ್ದ ಮುಖ್ಯಮಂತ್ರಿ ಮಾತನಾಡಿ, ಹಿಂದುಳಿದ ವರ್ಗಗಳ ಆಯೋಗ ಹಾಗೂ ಮೀಸಲಾತಿ ಹಂಚಿಕೆಗಾಗಿ ನೇಮಕವಾಗಿರುವ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿಗಳ ಸಮಿತಿಯ ವರದಿ ಬಂದ ತಕ್ಷಣ ಸಮಾಜಕ್ಕೆ ಸಲ್ಲಬೇಕಾದ ಮೀಸಲಾತಿಯನ್ನು ನೀಡುತ್ತೇನೆ ಎಂಬ ಭರವಸೆ ನೀಡಿದರು.  ಯತ್ನಾಳ್ ಮತ್ತು ಇತರೆ ಶಾಸಕರು ಎಷ್ಟೇ ಒತ್ತಾಯ ಮಾಡಿದರೂ, ಇಂತಿಷ್ಟು ಸಮಯದಲ್ಲಿ ಮೀಸಲಾತಿ ಕಲ್ಪಿಸಲಾಗುವುದು ಎಂಬ ಭರವಸೆಯನ್ನು ಮಾತ್ರ ಮುಖ್ಯಮಂತ್ರಿ ನೀಡಲಿಲ್ಲ. 

ಮುಖ್ಯಮಂತ್ರಿ ಅವರನ್ನು ಕಂಡರೆ ಸದಾ ಕೆಂಡ ಕಾರುತ್ತಿದ್ದ ಯತ್ನಾಳ್, ಮುಖ್ಯಮಂತ್ರಿ ಉತ್ತರಕ್ಕೆ ತೃಪ್ತಿ ಪಟ್ಟಿದ್ದಲ್ಲದೆ ಧನ್ಯವಾದ ತಿಳಿಸಿ, ನೀವು ನೀಡಿರುವ ಭರವಸೆ ಹಿನ್ನೆಲೆಯಲ್ಲಿ ಸ್ವಾಮೀಜಿಗಳನ್ನು ಭೇಟಿ ಮಾಡಿ, ಅವರ ಮನವೊಲಿಸಿ ಧರಣಿ ಕೈಬಿಡುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು. 

ಮುಖ್ಯಮಂತ್ರಿಗಳ ಉತ್ತರದಿಂದ ಸಮಾಧಾನವಾಗಿದೆ, ಆರು ತಿಂಗಳಲ್ಲಿ ಈ ವಿವಾದ ಇತ್ಯರ್ಥವಾಗಲಿ, ಒಂದು ವೇಳೆ ಇತ್ಯರ್ಥವಾಗದಿದ್ದರೆ ಪುನಃ ಹೋರಾಟದ ದಾರಿ ಹಿಡಿಯಬೇಕಾಗುತ್ತದೆ ಎಂದರು. 

error: Content is protected !!