ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದ ಸಂಸದ ಜಿ.ಎಂ. ಸಿದ್ದೇಶ್ವರ್
ದಾವಣಗೆರೆ, ಮಾ.13- 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ 45 ರಿಂದ 59 ವಯಸ್ಸಿನ ಸಹ ಅಸ್ವಸ್ಥತೆ ಹೊಂದಿರುವ ಎಲ್ಲಾ ವರ್ಗದ ಜನರು ಯಾವುದೇ ಆತಂಕವಿಲ್ಲದೇ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಚಿಗಟೇರಿ ಸಾರ್ವಜನಿಕ ಆಸ್ಪತ್ರೆಯ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಕೋವಿಡ್ ಲಸಿಕೆ ಪಡೆದುಕೊಳ್ಳುವ ಜನರಿಗೆ ಸಂಸದರು ಉತ್ತೇಜನ ನೀಡಿದರು.
ಸೇವೆಯೇ ಸಂಘಟನೆ ಎನ್ನುವ ಹೆಸರಿನೊಂದಿಗೆ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಸಂಸದರು ದೇಶಾದ್ಯಂತ ಇಲ್ಲಿಯವರೆಗೆ ಈಗಾಗಲೇ 2.80 ಕೋಟಿ ಜನರಿಗೆ ಲಸಿಕೆಯನ್ನು ನೀಡಲಾಗಿದೆ. ರಾಜ್ಯದಲ್ಲಿ 9 ಲಕ್ಷದಷ್ಟು ಜನರು ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 20 ಸಾವಿರ ಜನರು ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದರು.
ಕೋವಿಡ್ ಲಸಿಕಾ ಕೇಂದ್ರದಲ್ಲಿ ಕುಡಿಯುವ ನೀರಿನ ಲಭ್ಯತೆ ಖಚಿತಪಡಿಸಿಕೊಂಡರು ಹಾಗು ಲಸಿಕೆ ಪಡೆದ ಸಾರ್ವಜನಿಕರಿಗೆ ಜ್ಯೂಸ್ ವಿತರಿಸುವ ಮೂಲಕ ಉತ್ತೇಜನ ನೀಡಿದರು. ಬೇರೆ ದೇಶಗಳು ಕೋವಿಡ್ ಲಸಿಕೆಯನ್ನು ಸಂಶೋಧಿಸುವ ಮುಂಚೆಯೇ ಭಾರತ ಕೋವಿಡ್ ಲಸಿಕೆಯನ್ನು ಕಂಡು ಹಿಡಿದು, ಭಾರತದಲ್ಲಿ ಮಾತ್ರವಲ್ಲದೇ ಬೇರೆ ದೇಶಗಳಿಗೂ ಕೂಡ ಲಸಿಕೆಯನ್ನು ರವಾನಿಸಿ ಮಾನವೀಯತೆ ಮೆರೆದಿದೆ ಎಂದರು.
ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಅಷ್ಟೇ ಅಲ್ಲದೇ ತಾಲ್ಲೂಕು ಆಸ್ಪತ್ರೆಗಳಲ್ಲಿ ಹಾಗೂ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಕೂಡ ಕೋವಿಡ್ ಲಸಿಕೆ ನೀಡಲು ಪ್ರಾರಂಭ ಮಾಡಲಾಗಿದೆ, ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಮನೆ ಮನೆ ಸಂಪರ್ಕ ಮಾಡಿ ಹಿರಿಯ ನಾಗರಿಕರಿಗೆ ಲಸಿಕೆ ಪಡೆದುಕೊಳ್ಳುವಂತೆ ಉತ್ತೇಜನ ನೀಡುವಂತೆ ಸಂಸದರು ಮನವಿ ಮಾಡಿಕೊಂಡರು.
ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಹನಗವಾಡಿ ಎಸ್.ಎಂ.ವೀರೇಶ್, ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಪಾಲಿಕೆ ಮೇಯರ್ ಎಸ್.ಟಿ.ವೀರೇಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ರೇಣುಕ ಶ್ರೀನಿವಾಸ್, ಉಮಾ ಪ್ರಕಾಶ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮುಖಂಡರುಗಳಾದ ದೇವರಮನೆ ಶಿವಕುಮಾರ್, ಹೆಚ್.ಎನ್.ಶಿವಕುಮಾರ್, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಮಹೇಶ್, ಸವಿತಾ ರವಿಕುಮಾರ್, ಪಾಲಿಕೆ ಸದಸ್ಯರಾದ ಯಶೋಧ ಹೆಗ್ಗಪ್ಪ, ಮಂಜನಾಯ್ಕ, ಗೌರಮ್ಮ ಗಿರೀಶ್,ರಾಕೇಶ್ ಜಾಧವ್, ಸೌಮ್ಯ ನರೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.