ದಾವಣಗೆರೆ, ಮೇ 21 – ಕೊರೊನಾ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ಶೇ.50 ಹಾಗೂ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಶೇ.75ರವರೆಗೆ ಬೆಡ್ ನೀಡದೇ ಇರುವುದನ್ನು ಯಾವ ಸರ್ಕಾರವೂ ಒಪ್ಪಲಾಗದು ಎಂದು ಹೇಳಿರುವ ಆರೋಗ್ಯ ಸಚಿವ ಡಾ. ಸುಧಾಕರ್, ಬೆಡ್ ಕೊಡದೇ ಇದ್ದರೆ ಅನಿವಾರ್ಯವಾಗಿ ಕ್ರಮ ಜರುಗಿಸ ಬೇಕಾಗುತ್ತದೆ ಎಂದು ಹೇಳಿದ್ದಾರೆ.
ಜಿಲ್ಲಾಡಳಿತ ವತಿಯಿಂದ ಕರೆಯಲಾಗಿದ್ದ ಕೊರೊನಾ ನಿಯಂತ್ರಣ ಕುರಿತ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಎಸ್.ಎಸ್.ಐ.ಎಂ.ಎಸ್. ಹಾಗೂ ಜೆ.ಜೆ.ಎಂ.ಸಿ. ವೈದ್ಯಕೀಯ ಕಾಲೇಜುಗಳಿಂದ 91 ಬೆಡ್ಗಳನ್ನು ಮಾತ್ರ ಸರ್ಕಾರಕ್ಕೆ ಕೊಡಲಾಗಿದೆ ಎಂಬ ಮಾಹಿತಿ ನಂತರ ಈ ಮಾತುಗಳನ್ನು ಆಡಿದ್ದಾರೆ.
ನಾವು ಯಾರದೇ ದಯೆ, ಇಲ್ಲವೇ ದಾನ ಕೇಳುತ್ತಿಲ್ಲ. ಪ್ರತಿ ರೋಗಿಯನ್ನು ಖಾಸಗಿ ಆಸ್ಪತ್ರೆಗಳಿಗೆ ಕಳಿಸಿದಾಗ ಹಣ ಕೊಡುತ್ತಿದ್ದೇವೆ. ಇಷ್ಟಾದರೂ ಬೆಡ್ಗಳನ್ನು ಕೊಡುವುದಿಲ್ಲ, ಸಿಗುವುದಿಲ್ಲ ಎಂದಾದರೆ ನಾವು ನಾಗರಿಕ ಸಮಾಜದಲ್ಲಿದ್ದೀವಾ? ಎಂಬ ಪ್ರಶ್ನೆ ಹುಟ್ಟುತ್ತದೆ ಎಂದರು.
ಕೆ.ಪಿ.ಎಂ.ಇ. ಕಾಯ್ದೆ ಹಾಗೂ ವಿಕೋಪ ನಿರ್ವಹಣೆ ಕಾಯ್ದೆಯಡಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಖಾಸಗಿ ಆಸ್ಪತ್ರೆಗಳಿಂದ ಶೇ.50 ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಿಂದ ಶೇ.75ರಷ್ಟು ಬೆಡ್ ಪಡೆಯಬೇಕು. ಬೆಡ್ ಕೊಡದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ರಾಜ್ಯದ ಪ್ರಮುಖ ಮಠಾಧೀಶರು ನಡೆಸು ತ್ತಿರುವ ವೈದ್ಯಕೀಯ ಕಾಲೇಜು ಆಸ್ಪತ್ರೆಗಳೂ ಸೇರಿದಂತೆ ಎಲ್ಲ ಆಸ್ಪತ್ರೆಗಳು ಬೆಡ್ಗಳನ್ನು ಕೊಟ್ಟಿವೆ. ಹೀಗಿರುವಾಗ ದಾವಣಗೆರೆ ಒಂದು ಮಾತ್ರ ವಿಶೇಷ ಎಂದಾಗಬಾರದು. ಯಾವ ವೈದ್ಯಕೀಯ ಕಾಲೇಜೂ ಸಹ ಈ ರೀತಿ ಅನ್ಯಾಯವಾಗಿ ನಡೆದುಕೊಂಡಿಲ್ಲ, ಬಹಳ ನೋವಾಗುತ್ತಿದೆ ಎಂದು ತಿಳಿಸಿದರು.
ಖಾಸಗಿ ವೈದ್ಯಕೀಯ ಕಾಲೇಜುಗಳು ಸ್ಪಂದಿಸದಿದ್ದರೆ ಕಷ್ಟ: ಸಚಿವ ಸುಧಾಕರ್
ದಾವಣಗೆರೆ ಜಿಲ್ಲೆಯಲ್ಲಿ ಎರಡು ವೈದ್ಯಕೀಯ ಕಾಲೇಜುಗಳಿವೆ ಎಂಬ ಕಾರಣಕ್ಕಾಗಿ ಸರ್ಕಾರ ಇಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮುಂದಾಗಿಲ್ಲ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ವೈದ್ಯಕೀಯ ಕಾಲೇಜುಗಳಿಂದ ಚಿಕಿತ್ಸೆಯಷ್ಟೇ ಅಲ್ಲದೇ ವೈದ್ಯಕೀಯ ಸಿಬ್ಬಂದಿಗೆ ಶಿಕ್ಷಣ ಹಾಗೂ ಕೌಶಲ್ಯ ಕಲಿಸುವ ಅಗತ್ಯಗಳೂ ಈಡೇರಬೇಕು. ಇದಕ್ಕಾಗಿಯೇ ನಾವು ನಿಮಗೆ ಎಲ್ಲ ರೀತಿಯ ಸಬ್ಸಿಡಿ ಹಾಗೂ ಸಹಕಾರ ಕೊಡುತ್ತೇವೆ ಎಂದು ಹೇಳಿದರು. ಇಲ್ಲಿ ಇನ್ನೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದು ನಮಗೆ ಬಹಳ ಸುಲಭ, ಇದಕ್ಕೆ ಹೆಚ್ಚು ಹಣವೂ ಬೇಡ. ಇಲ್ಲಿ ಎರಡು ವೈದ್ಯಕೀಯ ಕಾಲೇಜುಗಳಿವೆ ಎಂಬ ಕಾರಣಕ್ಕೆ ಅಂತಹ ಕ್ರಮ ತೆಗೆದುಕೊಂಡಿಲ್ಲ. ಜಿಲ್ಲೆಯ ಜನರಿಗೆ ನೀವು ಸಮರ್ಪಕವಾಗಿ ಸ್ಪಂದಿಸದೇ ಹೋದರೆ ಕಷ್ಟವಾಗುತ್ತದೆ ಎಂದರು.
ಇದು ಆರೋಗ್ಯ ತುರ್ತು ಸ್ಥಿತಿ ಕಾಲವಾಗಿದ್ದು, ಅತ್ಯಂತ ತುರ್ತು ನಾನ್ ಕೋವಿಡ್ ರೋಗಿಗಳಿಗೆ ಮಾತ್ರ ಖಾಸಗಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳು ಚಿಕಿತ್ಸೆ ನೀಡಬೇಕು. ಇತರೆ ಚಿಕಿತ್ಸೆಗಳನ್ನು 2-3 ತಿಂಗಳು ಮುಂದೂಡಬೇಕು ಎಂದು ಸುಧಾಕರ್ ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜೆ.ಜೆ.ಎಂ.ಸಿ. ಕಾಲೇಜಿನ ಪ್ರಾಂಶುಪಾಲ ಡಾ. ಕುಮಾರ್, ಜಿಲ್ಲಾಡಳಿತದ ಆದೇಶದಂತೆ ಬಾಪೂಜಿ ಆಸ್ಪತ್ರೆಯಲ್ಲಿ ಕೋವಿಡ್ ಹಾಗೂ ನಾನ್ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸುಧಾಕರ್, ಸರ್ಕಾರದ ಆಡಳಿತವನ್ನು ಜಿಲ್ಲಾಧಿಕಾರಿ ದುರ್ಬಲಗೊಳಿಸಲು ಬರುವುದಿಲ್ಲ. ಬೇಕೆಂದರೆ ಇನ್ನಷ್ಟು ಬಲಗೊಳಿಸಬಹುದು ಎಂದರು.
ಆಗ ಉತ್ತರಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಸರ್ಕಾರದ ಆದೇಶವನ್ನು ಪಾಲಿಸಿದ್ದೇವೆ. ಬೆಡ್ಗಳನ್ನು ಕೊಡದೇ ಇರುವ ಬಗ್ಗೆ ಕಾರಣ ಕೇಳಿ ನೋಟಿಸ್ ಕಳಿಸಲಾಗಿದೆ ಎಂದು ಹೇಳಿದರು.
ಈ ಬಗ್ಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ನಮಗೆ ಜನರ ಪ್ರಾಣ ರಕ್ಷಣೆ ಮುಖ್ಯ. ಖಾಸಗಿ ವೈದ್ಯಕೀಯ ಕಾಲೇಜುಗಳ ಬೆಡ್ ಗಳು ಬಡವರಿಗೆ ದೊರೆಯಬೇಕು ಎಂದು ಹೇಳಿದರು.
ಈ ಬಗ್ಗೆ ಉತ್ತರಿಸಿದ ಎಸ್.ಎಸ್.ಐ.ಎಂ.ಎಸ್. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಸಾದ್ ಹಾಗೂ ಜೆ.ಜೆ.ಎಂ.ಸಿ. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಕುಮಾರ್, ಕೊರೊನಾ ರೋಗಿಗಳಿಗೆ ಬೆಡ್ಗಳನ್ನು ಒದಗಿಸಿದ್ದೇವೆ. ತುರ್ತು ಸಂದರ್ಭಗಳು ಎದುರಾದಾಗ ಬೆಡ್ಗಳ ಅಗತ್ಯವಿರುತ್ತದೆ. ಈ ಬಗ್ಗೆ ನೀವೇ ಆಡಳಿತ ಮಂಡಳಿ ಜೊತೆ ಮಾತನಾಡಿ ಎಂದು ಸ್ಪಷ್ಟನೆ ನೀಡಿದರು.