ದಾವಣಗೆರೆ, ಆ.1 – ನಗರದ ಹಳೇಭಾಗದಲ್ಲಿ ಭಾರೀ ವಾಹನಗಳನ್ನು ನಿಷೇಧಿಸಬೇಕೆಂಬ ಜಿಲ್ಲಾಡಳಿತದ ತೀರ್ಮಾನವನ್ನು ವಿರೋಧಿಸಿರುವ ಚೌಕಿಪೇಟೆ, ಎಂ.ಜಿ.ರಸ್ತೆ ಸೇರಿದಂತೆ ಹಳೇಭಾಗದ ವ್ಯಾಪಾರಸ್ಥರು ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದ್ದಾರೆ.
ಚೌಕಿಪೇಟೆಯಲ್ಲಿರುವ ಎಸ್ಸೆಸ್ ಅವರ ಶಾಮನೂರು ಕಲ್ಲಪ್ಪ ಅಂಡ್ ಸನ್ಸ್ ಅಂಗಡಿಯಲ್ಲಿ ಎಸ್ಸೆಸ್ ಅವರನ್ನು ಇಂದು ಸಂಜೆ ಭೇಟಿ ಮಾಡಿದ ವ್ಯಾಪಾರಸ್ಥರು, ರಾತ್ರಿ ವೇಳೆಯಲ್ಲಿ ಲೋಡಿಂಗ್ ಆನ್ ಲೋಡಿಂಗ್‍ಗೆ ಹಮಾಲರ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಲಿವೆ ಎಂದು ಹೇಳಿದರು.
ವ್ಯಾಪಾರಸ್ಥರ ಸಮಸ್ಯೆಗಳನ್ನು ಆಲಿಸಿದ ಶಾಸಕರು, ತಕ್ಷಣ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಈಗಿರುವಂತೆಯೇ ವಾಹನಗಳ ಪ್ರವೇಶವನ್ನು ಮುಂದುವರೆಸುವಂತೆ ನಿರ್ದೇಶಿಸಿದರು.
ಈ ಸಂದರ್ಭದಲ್ಲಿ ವ್ಯಾಪಾರಸ್ಥರುಗಳಾದ ಬಲಭದ್ರಶೇಟ್, ವಾಸುವೇಲು, ಕೃಷ್ಣಪ್ಪ, ಅನಿಲ್, ಕೆ.ಎಲ್.ಪಿ.ಸ್ವಾಮಿ, ಲಿಂಗರಾಜ್, ಆರ್.ಜಿ.ಸುನಿಲ್, ಬಗರೇಚಾ, ಪಂಚಣ್ಣ , ಕಕ್ಕರಗೊಳ್ಳ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.