ದಾವಣಗೆರೆ, ಮಾ.14- ಜಾನುವಾರು ಸಂತೆಯಲ್ಲಿ ಖರೀದಿಸಿದ್ದ ಜಾನುವಾರು ಗಳನ್ನು ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಬೆಂಗಳೂರು ಮೂಲದ ಪ್ರಾಣಿ ದಯಾ ಸಂಸ್ಥೆಯ ಮಾಹಿತಿ ಮೇರೆಗೆ ಇಂದು ದಾಳಿ ನಡೆಸಿದ ಪೊಲೀಸರು ಎರಡು ವಾಹನಗಳನ್ನು ವಶಕ್ಕೆ ಪಡೆದು 18 ಜಾನುವಾರುಗಳನ್ನು ರಕ್ಷಿಸಿದ್ದಾರೆ.
ನಗರದ ಹೊರ ವಲಯದ ಆವರಗೆರೆ ಬೈಪಾಸ್ ರಸ್ತೆ ಮಾರ್ಗವಾಗಿ ಎತ್ತು, ಗೋವು, ಕರುಗಳನ್ನು ವಾಹನಗಳಲ್ಲಿ ತುಂಬಿ ಕೊಂಡು ಕಸಾಯಿಖಾನೆಗೆ ಸಾಗಿಸುತ್ತಿರುವ ಬಗ್ಗೆ ಬೆಂಗಳೂರು ಮೂಲದ ಪ್ರಾಣಿ ದಯಾ ಸಂಘದವರ ಮಾಹಿತಿ ಆಧರಿಸಿ ದಾಳಿ ನಡೆಸಿ, ಜಾನುವಾರುಗಳನ್ನು ರಕ್ಷಿಸಿ, ಆವರಗೆರೆ ಗ್ರಾಮದ ಮಹಾವೀರ ಗೋಶಾಲೆಗೆ ಬಿಡಲಾಗಿದೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿ ಭಾನುವಾರ ಎತ್ತಿನ ಸಂತೆ ನಡೆಯುತ್ತದೆ. ಅಲ್ಲಿ ಕರು, ಹಸು, ಎತ್ತುಗಳನ್ನು ಖರೀದಿಸಿ, ಮಿನಿ ಲಾರಿ, ಗೂಡ್ಸ್ ಜೀಪು, ಆಪೆ ವಾಹನಗಳಲ್ಲಿ ಸಾಗಿಸುತ್ತಿದ್ದು, ಅವುಗಳು ಕಸಾಯಿ ಖಾನೆ ಪಾಲಾಗುತ್ತಿವೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಾಣಿ ದಯಾ ಸಂಘದವರು ಬೆಳ್ಳಂ ಬೆಳಗ್ಗೆಯೇ ರಾಣೇಬೆನ್ನೂರಿನಲ್ಲಿ ದನದ ಸಂತೆಗೆ ಆಗಮಿಸಿದ್ದರು. ರಾಸುಗಳನ್ನು ಸಾಗಿಸುತ್ತಿದ್ದ ವಾಹನಗಳ ಬಗ್ಗೆ ಹರಿಹರ ಪೊಲೀಸರು, ದಾವಣಗೆರೆ ಪೊಲೀಸರಿಗೆ ಸಂಘದವರು ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಸಾಗಿದ ರಾಸುಗಳು ತುಂಬಿದ್ದ ಎರಡೂ ವಾಹನಗಳು ಆವರಗೆರೆ-ಬೈಪಾಸ್ ಕ್ರಾಸ್ ಬಳಿ ನಗರದೊಳಗೆ ಪ್ರವೇಶಿಸಿವೆ. ರಾಸುಗಳು ತುಂಬಿದ್ದ ವಾಹನಗಳಿಗಾಗಿ ಕಾದು ನಿಂತಿದ್ದ ಪೊಲೀಸರು ವಾಹನವನ್ನು ತಡೆದು, ರಾಸುಗಳ ಕುರಿತಂತೆ ದಾಖಲೆ ಕೇಳಿದ್ದಾರೆ. ವಾಹನದಲ್ಲಿದ್ದವರು ಸ್ಪಷ್ಟ ಉತ್ತರ ನೀಡಿಲ್ಲ.
ಆವರಗೆರೆ ಗ್ರಾಮದ ಮಹಾವೀರ ಗೋ ಶಾಲೆಯಲ್ಲಿ 18 ಜಾನುವಾರುಗಳಿಗೆ ರಕ್ಷಣೆ ನೀಡಲಾಗಿದೆ. ಆರ್ಎಂಸಿ ಯಾರ್ಡ್ ಪೊಲೀಸರು ವಾಹನಗಳನ್ನು ಜಪ್ತು ಮಾಡಿ, ಮುಂದಿನ ಕ್ರಮ ಕೈಗೊಂಡಿದ್ದಾರೆ. ಆವರಗೆರೆ ಗೋ ಶಾಲೆಗೆ ನಗರ ವೃತ್ತ ನಿರೀಕ್ಷಕ ಗಜೇಂದ್ರಪ್ಪ, ಅಧಿಕಾರಿ, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.