ಸೋಂಕಿತರು, ರೋಗಿಗಳಿಗೆ ನಿತ್ಯವೂ ದಾಸೋಹ : ಗಣ್ಯರ ಮೆಚ್ಚುಗೆ

ಬಿ.ಎಸ್.ಸಿ. ಸಹಕಾರದೊಂದಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಕಾರ್ಯಕರ್ತರ ನೇತೃತ್ವ

ದಾವಣಗೆರೆ, ಮೇ 20- ಜಿಲ್ಲಾ ಚಿಗಟೇರಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ಕೋವಿಡ್ ಸೋಂಕಿತರು ಮತ್ತು ಅವರ ಸಹಾಯಕರು, ಆಸ್ಪತ್ರೆಯ  ರೋಗಿಗಳಿಗೆ ಉಪಹಾರ ಮತ್ತು ಊಟವನ್ನು ಜವಳಿ ಉದ್ಯಮಿ ಬಿ.ಸಿ. ಉಮಾಪತಿ ಅವರ ಸಹಕಾರದೊಂದಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಮತ್ತು ಕೆ.ಬಿ. ಬಡಾವಣೆಯ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಕಾರ್ಯಕರ್ತರು ನೀಡುತ್ತಿದ್ದು,  ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಿ.ಜಿ. ಆಸ್ಪತ್ರೆಗೆ ತಾವು ಭೇಟಿ ನೀಡಿದ್ದ ಸಂದರ್ಭದಲ್ಲಿ ಊಟಕ್ಕಾಗಿ ರೋಗಿಗಳು ಪರದಾಡುತ್ತಿರುವುದನ್ನು ಕಂಡಾಗ ಅವರಿಗೆ ದಾಸೋಹದ ಏರ್ಪಾಡು ಮಾಡಬೇಕೆಂದು ಚಿಂತಿಸಿ, ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ ಸಂಸ್ಥೆಯ ಮಾಲೀಕ ಬಿ.ಸಿ. ಉಮಾಪತಿ ಅವರೊಂದಿಗೆ ಚರ್ಚಿಸಿದಾಗ ಅವರು ದಾನ ಮಾಡಲು ಸಂತೋಷದಿಂದ ಸಮ್ಮತಿಸಿದರು. ಇದರಿಂದಾಗಿ ಇಂದಿನವರೆಗೂ ರೋಗಿಗಳಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ನಗರ ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್ ತಿಳಿಸಿದ್ದಾರೆ.

ಸಿ.ಜಿ. ಆಸ್ಪತ್ರೆಯಲ್ಲಿರುವ ಸುಮಾರು 500 ಜನಕ್ಕೆ ಪ್ರತಿನಿತ್ಯ ಉಪಹಾರವನ್ನು ಕಳೆದ 20 ದಿನಗಳಿಂದ  ವಿತರಿಸಲಾಗುತ್ತಿದ್ದು,  ಲಾಕ್ ಡೌನ್ ಅವಧಿ ಮುಗಿಯುವ ತನಕ ಮುಂದುವರೆಸಲಾಗುತ್ತದೆ ಎಂದು ವೀರೇಶ್ ಅವರು ತಮ್ಮನ್ನು ಭೇಟಿಯಾದ ಪತ್ರಕರ್ತರಿಗೆ ತಿಳಿಸಿದ್ದಾರೆ. 

ಕೆ.ಬಿ. ಬಡಾವಣೆಯ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಮಠದ ಕಾರ್ಯಕರ್ತರು ಉಪಹಾರವನ್ನು ತಯಾರಿಸಿ ಕೊಡುತ್ತಿದ್ದಾರೆ. ಅಲ್ಲದೇ, ಕಾರ್ಮಿಕ ಆಸ್ಪತ್ರೆಗೆ ಸಹಕಾರಿ ಹಾಗೂ ಸೌಹಾರ್ದ ಸಂಸ್ಥೆಗಳೊಡಗೂಡಿ ಒಂದು ಆಕ್ಸಿಜನ್ ಜನರೇಟರ್ ಕೊಡಿಸುವುದಾಗಿ ಅವರು ಹೇಳಿದರು.

ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ವಿಶೇಷವಾಗಿ ಕಾಟನ್ ಬಟ್ಟೆಯಿಂದ ತಯಾರಿಸಿರುವ 1000 ಮಾಸ್ಕ್‌ಗಳನ್ನು ಕೊಡುವುದಾಗಿ ಬಿ.ಸಿ. ಉಮಾಪತಿ ಅವರು ತಿಳಿಸಿದ್ದಾರೆ. ಲಾಕ್‌ಡೌನ್ ಕಾರಣಕ್ಕಾಗಿ ತಮ್ಮ ಬಟ್ಟೆ ಅಂಗಡಿಗಳು ಮುಚ್ಚಿದ್ದರೂ ಸಹ ಅಲ್ಲಿನ ಕೆಲಸಗಾರರಿಗೆ ಪ್ರತಿ ತಿಂಗಳ ವೇತನ ಕೊಡುವ ಮೂಲಕ ಬಿಎಸ್ಸಿ ಸಂಸ್ಥೆ ತನ್ನ ಸಹಾಯ ಹಸ್ತ ಚಾಚಿರುವುದು ಶ್ಲ್ಯಾಘನೀಯ ಎಂದು ವೀರೇಶ್ ತಿಳಿಸಿದ್ದಾರೆ.

ಉಪಹಾರ ತಯಾರಿಸುತ್ತಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಮಹಾಪೌರ ಎಸ್.ಟಿ.ವೀರೇಶ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ದಾನಿಗಳಾದ ಬಿಎಸ್ಸಿ ಸಂಸ್ಥೆಯ ಬಿ.ಸಿ.ಉಮಾಪತಿ, ಬಿ.ಯು.ಚಂದ್ರಶೇಖರ್, ಬಿ.ಸಿ.ವಿವೇಕ್, ಬಿ.ಎಸ್.ಮೃನಾಲ್, ರಾಘವೇಂದ್ರ ಸ್ವಾಮಿ ಮಠದ ಪ್ರಸನ್ನಕುಮಾರ್, ಹಿರಿಯ ವಕೀಲ ಜೆ.ಎನ್.ವಸಂತಕುಮಾರ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.

ಕಳೆದ ವರ್ಷವೂ ಬಿ.ಸಿ.ಉಮಾಪತಿ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಧನ ಸಹಾಯ ಮಾಡಿದ್ದಲ್ಲದೇ, ಹರ ಸೇವಾ ಸಂಸ್ಥೆಯ ನೇತೃತ್ವದಲ್ಲಿ ಸಂಕಷ್ಟದಲ್ಲಿದ್ದ ಬಡ ಜನರಿಗೆ ಆಹಾರದ ಕಿಟ್‌ಗಳನ್ನು ವಿತರಣೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

error: Content is protected !!