ಕೊರೊನಾ ಸಾವುಗಳಿಗೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ

ಹರಿಹರ, ಆ.1 –  ಕೊರೊನಾ ವಿಷಯದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರುತ್ತಿರುವುದ ರಿಂದಲೇ ದೇಶದಲ್ಲಿ ಸಾವಿನ ಪ್ರಮಾಣ ಹೆಚ್ಚಾಗಲು ಕಾರಣ ಎಂದು ಶಾಸಕ ಎಸ್.ರಾಮಪ್ಪ ಆರೋಪಿಸಿದ್ದಾರೆ.

ನಗರದ ಗಾಂಧಿ ಮೈದಾನದಲ್ಲಿ ಬೆಳ್ಳೂಡಿ ಗ್ರಾಮದ ಕಾರ್ಗಿಲ್ ಕಂಪನಿ ವತಿಯಿಂದ ಆಟೋ ಚಾಲಕರು ಮತ್ತು ಮಾಲೀಕರ ಕುಟುಂಬಕ್ಕೆ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು.

ಕೊರೊನಾದಿಂದ ಮೃತಪಟ್ಟವರಿಗೆ ಪರಿಹಾರ ನೀಡಬೇಕಾಗುತ್ತದೆಂಬ ಕಾರಣಕ್ಕಾಗಿ ಎರಡೂ ಸರ್ಕಾರಗಳು ಸಾವಿನ ಅಂಕಿ-ಅಂಶಗಳನ್ನು ಸರಿಯಾಗಿ ನೀಡುತ್ತಿಲ್ಲ ಎಂದ ಅವರು, ಸರ್ಕಾರ ಮೊದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೆ ಸಾವಿನ ಪ್ರಮಾಣ ಹೆಚ್ಚಾಗುತ್ತಿರಲಿಲ್ಲ ಎಂದರು.

ಸರ್ಕಾರದ ಮಾಹಿತಿ ಪ್ರಕಾರ ಹರಿಹರ ತಾಲ್ಲೂಕಿನಲ್ಲಿ 56 ಜನರು ಮೃತಪಟ್ಟಿದ್ದಾರೆ. ಆದರೆ ವಾಸ್ತವದಲ್ಲಿ ಕನಿಷ್ಟ 500 ಜನರು ಮೃತಪಟ್ಟಿರುವ ಅಂದಾಜಿದೆ. ನಮ್ಮ ಪಕ್ಷದ ಕಾರ್ಯಕರ್ತರು ವಾಸ್ತವವಾಗಿ ಮೃತರ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದು, ರಾಜ್ಯ ಸಂಘಕ್ಕೆ ಕಳುಹಿಸಿಕೊಡ ಲಾಗುವುದು. ಪಕ್ಷದ ಸೂಚನೆಯಂತೆ ಮೃತ ಕುಟುಂಬಗಳಿಗೆ 5 ರಿಂದ 10 ಸಾವಿರ ರೂ. ವೈಯಕ್ತಿಕವಾಗಿ ಧನ ಸಹಾಯ ನೀಡಿರುವುದಾಗಿ ಹೇಳಿದರು.

ತಾಲ್ಲೂಕಿನಲ್ಲಿ 62 ಮನೆಗಳಿಗೆ ಹಾಗೂ ನೂರಾರು ಎಕರೆ ಬೆಳೆಗಳಿಗೆ ಹಾನಿ ಸಂಭವಿಸಿರುವ ಮಾಹಿತಿ ಇದೆ. ಕಳೆದ ಬಾರಿಯ ಭತ್ತದ ಹಾನಿಗೆ ಇಲ್ಲಿಯವರೆಗೂ ಪರಿಹಾರ ನೀಡಿಲ್ಲ. ಮಳೆಯಿಂದಾಗಿ ಮನೆಗಳಿಗೆ ಹಾನಿಯಾದರೆ 5 ಲಕ್ಷ ರೂ. ಪರಿಹಾರ ನೀಡಬೇಕು. ಆದರೆ ಅಧಿಕಾರಿಗಳು 5 ರಿಂದ 10 ಸಾವಿರ ರೂ. ಮಾತ್ರ ಪರಿಹಾರ ನೀಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಮಾತನಾಡಿ, ಕನಿಷ್ಠ 2 ಲಕ್ಷ ರೂ. ಪರಿಹಾರ ಕೊಡಿಸಲು ಶ್ರಮಿಸುವುದಾಗಿ ಹೇಳಿದರು.

ನಾನು ಕಾಂಗ್ರೆಸ್ ಶಾಸಕ ಎಂಬ ಕಾರಣಕ್ಕೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇದೇ ಬೆಳವಣಿಗೆ ಮುಂದುವರೆದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ನಗರಸಭೆ ಉಪಾಧ್ಯಕ್ಷ ಎಂ.ಎಸ್. ಬಾಬುಲಾಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಲ್.ಬಿ. ಹನುಮಂತಪ್ಪ, ಎಂ.ಬಿ. ಅಭಿದಾಲಿ, ನಜೀರ್ ಹುಸೇನ್, ಆಟೋ ಮಾಲೀಕರ ಸಂಘದ ಸಿದ್ದಲಿಂಗಸ್ವಾಮಿ, ನಾಗರಾಜ್, ತಿಪ್ಪೇಶ್, ಕೇಶವ, ರಾಜು, ಮಂಜುನಾಥ್, ಮೋಹನ್ ಗೌಡ, ನಜೀರ್ ಸಾಬ್, ಹನುಮಂತಪ್ಪ, ಶೇಖ್ ಅಲ್ತಾಫ್, ಚಂದ್ರಪ್ಪ, ಮಂಜುನಾಥ್ ಇತರರು ಹಾಜರಿದ್ದರು.      

error: Content is protected !!