ಐದು ಸಾವಿರ ಬೆಡ್‌ಗಳ ಕೋವಿಡ್ ಕೇರ್ ಸೆಂಟರ್‌ಗೆ ಸಿದ್ದ

ದಾವಣಗೆರೆ ಉತ್ತರ-ದಕ್ಷಿಣ ಎರಡೂ ಕ್ಷೇತ್ರಗಳ ಲಸಿಕಾ ವೆಚ್ಚ ನೀಡಲು ಬದ್ಧ: ಎಸ್ಸೆಸ್ಸೆಂ 

ದಾವಣಗೆರೆ, ಮೇ 19- ಸರ್ಕಾರ ಲಸಿಕೆ ನೀಡಿದ್ದಲ್ಲಿ ದಾವಣಗೆರೆಯ ದಕ್ಷಿಣ ವಿಧಾನಸಭಾ ಕ್ಷೇತ್ರದ ಜೊತೆಗೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಜನರಿಗೂ ಅಷ್ಟೇ ಪ್ರಮಾಣದಲ್ಲಿ ಲಸಿಕಾ ವೆಚ್ಚ ನೀಡಲು ನಾವು ಬದ್ಧರಿದ್ದೇವೆ ಎಂದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಘೋಷಣೆ ಮಾಡಿದರು.

ನಗರದ ತಮ್ಮ ನಿವಾಸದಲ್ಲಿ ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ಸೆಸ್ಸೆಂ, ಕೊರೊನಾದಿಂದ ಪಾರು ಮಾಡಲು ಜಿಲ್ಲೆಯ ಜನರಿಗೆ ಲಸಿಕೆ ನೀಡುವುದೇ ಪ್ರಮುಖ ಘಟ್ಟವಾಗಿದ್ದು, ಅದೇ ಪರಿಹಾರ. ಅಲ್ಲದೇ ಉಸಿರಾಟದ ತೊಂದರೆಯಿರುವ ಸೋಂಕಿತರ ಜೀವ ರಕ್ಷಣೆಗೆ ಸಮರ್ಪಕ ಆಮ್ಲಜನಕದ ಬೆಡ್ ಒದಗಿಸಲು ಹೆಚ್ಚಿನ ಆದ್ಯತೆ ನೀಡಲಿ. ಕೇವಲ ಕೋವಿಡ್ ಕೇಂದ್ರಗಳನ್ನು ಮಾಡುವುದೇ ಪರಿಹಾರವಲ್ಲ ಎಂದು ತಿಳಿಸಿದರು.

 ಸರ್ಕಾರ ತಮ್ಮ ಎರಡು ಕ್ಷೇತ್ರಗಳ ಜನರಿಗೆ ಲಸಿಕೆ ಕೊಟ್ಟಲ್ಲಿ ಅದಕ್ಕೆ ತಗಲುವ ವೆಚ್ಚದ ಅರ್ಧದಷ್ಟು ಹಣ ಪಾವತಿಸುತ್ತೇವೆ. ಅದರಂತೆ ಸರ್ಕಾರ ಲಸಿಕೆ ಪೂರೈಕೆ ಮಾಡಬೇಕು. ವಾರ್ಡ್ ಮಟ್ಟ, ಪಂಚಾಯಿತಿ, ಬೂತ್ ಮಟ್ಟಗಳಲ್ಲಿ ಜನರಿಗೆ ಲಸಿಕೆ ಹಾಕಿಸಲಿ ಎಂದು ಒತ್ತಾಯಿಸಿದರು. 

ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಅಥವಾ ಜಿಲ್ಲಾಸ್ಪತ್ರೆಯಲ್ಲಿ ವಾರ್ ರೂಂ ಸ್ಥಾಪಿಸಿ, ಅದರ ಮೂಲಕ ಸೋಂಕಿತರಿಗೆ ಬೆಡ್‍ಗಳನ್ನು ನೀಡುವ ಕೆಲಸ ಮಾಡಬೇಕು. ಜೊತೆಗೆ ನಿರ್ವಹಣೆ ಸಮರ್ಪಕವಾಗಿರಬೇಕು ಎಂದು ಹೇಳಿದರು.

ರಾಜ್ಯದಲ್ಲಿ ವ್ಯಾಕ್ಸಿನ್, ಆಕ್ಸಿಜನ್ ಕೊರತೆ ಉಂಟಾಗಿದ್ದು, ಇದರ ನಿವಾರಣೆ ರಾಜ್ಯದ ಎಲ್ಲಾ ಸಂಸದರು ಪ್ರಧಾನ ಮಂತ್ರಿ ಮೋದಿ ಅವರ ಬಳಿ ಹೋಗಿ ಕುಳಿತುಕೊಳ್ಳಬೇಕು. ಆದರೆ, ಒಂದಿಬ್ಬರು ಸಂಸದರು ಮಾತ್ರ ಪ್ರಧಾನಿಯೊಂದಿಗೆ ಮಾತನಾಡುತ್ತಾರೆ. ಉಳಿದವರು ಮಾತನಾಡಲು ಹೆದರುತ್ತಾರೆ. ಸಂಸದರು ಮೊದಲು ಪ್ರಧಾನಿ ಬಳಿ ಹೋಗಿ ರಾಜ್ಯದ ವಸ್ತು ಸ್ಥಿತಿ ತಿಳಿಸಿ, ಅಲ್ಲಿಂದ ಆಕ್ಸಿಜನ್, ವ್ಯಾಕ್ಸಿನ್ ತರಬೇಕು ಎಂದು ಆಗ್ರಹಿಸಿದರು.

ನಾನು ನಾಳೆಯೇ ಐದು ಸಾವಿರ ಬೆಡ್‍ಗಳ ಕೋವಿಡ್ ಕೇರ್ ಸೆಂಟರನ್ನಾಗಿ ಮಾಡುತ್ತೇನೆ. ನಮ್ಮ 20ಕ್ಕೂ ಹೆಚ್ಚು ಹಾಸ್ಟೆಲ್‍ಗಳಿಗೆ ಅವುಗಳನ್ನು ಬಿಟ್ಟುಕೊಡುತ್ತೇವೆ. ಈಗಾಗಲೇ ಕೆ.ಆರ್. ರಸ್ತೆಯಲ್ಲಿನ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಮಾಡಲು ಜಿಲ್ಲಾಧಿಕಾರಿಗೆ 15 ದಿನಗಳ ಹಿಂದೆ ಹೇಳಿದ್ದೆ. ಜನರ ಪ್ರಾಣ ರಕ್ಷಿಸಲು ನಾವುಗಳು ಜಿಲ್ಲಾಡಳಿತಕ್ಕೆ ಸಂಪೂರ್ಣವಾಗಿ ಕೈ ಜೋಡಿಸುತ್ತೇವೆ. ಆದರೆ, ಆ ಪಕ್ಷದ ಜೊತೆಗಲ್ಲ ಎಂದರು.

ಬಾಪೂಜಿ ಆಸ್ಪತ್ರೆ, ಎಸ್‍ಎಸ್ ಹೈಟೆಕ್ ಆಸ್ಪತ್ರೆಗೆ ಜನರು ತುರ್ತಾಗಿ ಬಂದು ದಾಖಲಾಗಲೂ ಬೆಡ್ ವ್ಯವಸ್ಥೆ ಕಲ್ಪಿಸಿದ್ದೇವೆ. ಬಾಪೂಜಿ ಆಸ್ಪತ್ರೆಗೆ ಚಿಗಟೇರಿ ಜಿಲ್ಲಾಸ್ಪತ್ರೆಯು ಲಿಂಕ್ ಇದೆ. ಚಿಗಟೇರಿ ಆಸ್ಪತ್ರೆಯಲ್ಲಿ ಕೇವಲ 40 ಜನ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದವರು ನಮ್ಮಗಳ ಆಸ್ಪತ್ರೆಯ ವೈದ್ಯರು, ತಜ್ಞ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ನಾವುಗಳು ಸಂಬಳ ಕೊಡುತ್ತಿದ್ದೇವೆ. ಆದರೂ ನಮ್ಮ ಬಗ್ಗೆ ಇಲ್ಲದ ಸಲ್ಲದ ಮಾತುಗಳನ್ನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಬಾಪೂಜಿ ಆಸ್ಪತ್ರೆ, ಎಸ್‍ಎಸ್ ಹೈಟೆಕ್ ಆಸ್ಪತ್ರೆಯಲ್ಲಿ ಸರ್ಕಾರಿ ಕೋಟಾದಡಿಯ ಬೆಡ್‍ಗಳನ್ನು ಬಿಟ್ಟುಕೊಡಲಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ತಮ್ಮ ಹಿಂಬಾಲಕರ ಮೂಲಕ ಹೇಳಿಕೆಗಳನ್ನು ಕೊಡಿಸುತ್ತಾರೆ. ಅವರಿಗೆ ಗುಟ್ಕಾದಿಂದ ಪ್ರತಿ ದಿನ ಒಂದು ಕೋಟಿ ರೂ. ವರಮಾನವಿದೆ. ಈ ಹಣದಿಂದ ಅವರು ಏನಾದರೂ ಜಿಲ್ಲೆಯ ಜನರಿಗೆ ಉಪಯೋಗ ಆಗುವ ಕೆಲಸ ಮಾಡಿರುವುದನ್ನು ಬಹಿರಂಗ ಪಡಿಸಲಿ. ಸಂಸದರಾಗುವ ಮುಂಚೆ ಎಷ್ಟು ಆಸ್ತಿ ಹೊಂದಿದ್ದರು. ಈಗ ಎಷ್ಟು ಆಸ್ತಿ ಹೊಂದಿದ್ದಾರೆ ಎಂದು ನನಗೆ ತಿಳಿದಿದೆ. ಈ ವಿಚಾರದಲ್ಲಿ ಅವರು ನನ್ನೊಂದಿಗೆ ಚರ್ಚೆಗೆ ಬರಲಿ, ಸಿದ್ಧನಿದ್ದೇನೆ ಎಂದು ಎಸ್ಸೆಸ್ಸೆಂ ಸವಾಲು ಹಾಕಿದರು.

ಆಸ್ಪತ್ರೆಗಳನ್ನು ನಡೆಸುವುದು ಗುಟ್ಕಾ ಉತ್ಪಾದನೆ ಮಾಡಿ ಮಾರಾಟ ಮಾಡುವಷ್ಟು ಸುಲಭ ಅಲ್ಲ. ಮೊದಲಿಗೆ ಕೋವಿಡ್ ನೀತಿ-ನಿಯಮಗಳು, ಕೋವಿಡ್ ಕೇರ್ ಸೆಂಟರ್ ಏಕೆ? ಎಂದು ಅರಿತುಕೊಳ್ಳಲಿ ಎಂದು ಟಾಂಗ್ ನೀಡಿದರು.

ಅಕ್ಕ-ಪಕ್ಕ ಇರುತ್ತಿದ್ದ ಪೈಲ್ವಾನರನ್ನು ಅದೇಕೋ ಬಿಟ್ಟು ಈಗ ಡಿಸಿ-ಎಸ್ಪಿಯವರನ್ನು ಇಟ್ಟುಕೊಂಡು ಅಡ್ಡಾಡುತ್ತಿದ್ದಾರೆ. ಏನೋ ಸ್ವಲ್ಪ ಕೆಲಸ ಮಾಡಿದರೂ ಪ್ರಚಾರ ಪಡೆಯುತ್ತಿದ್ದಾರೆ. ಈಗ ಅವರಿಗೆ ಬುದ್ಧಿ ಬಂದಂತೆ ಆಗಿದೆ. ಅವರ ಅಕ್ಕ-ಪಕ್ಕದ ಪೈಲ್ವಾನರನ್ನು ಇಟ್ಟುಕೊಂಡು ಓಡಾಡಿದರೆ ನಮಗೆ ಭವಿಷ್ಯ ಇಲ್ಲ ಅನ್ನುವುದು ತಿಳಿದಂತೆ ಇದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರ ಬಗ್ಗೆ ಎಸ್ಸೆಸ್ಸೆಂ ಟೀಕಿಸಿದರು.

ಮಾಡಾಳ್, ಎಂಪಿಆರ್ ಕಾರ್ಯಕ್ಕೆ ಶಹಬ್ಬಾಶ್: ಜಿಲ್ಲೆಯಲ್ಲಿ ಬಿಜೆಪಿ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಮುಖ್ಯಮಂತ್ರಿಗಳೊಂದಿಗೆ ನೇರವಾಗಿ ಸಂಪರ್ಕಿಸಿ, ತಮ್ಮ ಕ್ಷೇತ್ರಗಳಲ್ಲಿ ಆಮ್ಲಜನಕ ವ್ಯವಸ್ಥೆಗೆ ಕಾರ್ಯೋನ್ಮುಖರಾಗಿದ್ದಾರೆ. ಅದೇ ಪಕ್ಷದ ಇನ್ನುಳಿದ ಶಾಸಕರೆಲ್ಲರೂ ಸುಮ್ಮನಿರುವುದು ನೋಡಿದರೆ ಬಳೆ ತೊಟ್ಟಿದ್ದಾರೆಯೇ ಎಂಬುದು ಗೊತ್ತಿಲ್ಲ. ಈ ಇಬ್ಬರೂ ಶಾಸಕರ ಕಾರ್ಯ ಮೆಚ್ಚುವಂತಹದ್ದು ಎಂದು ಪ್ರಶಂಸಿಸಿದರು. 

ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸೈಯದ್ ಸೈಫುಲ್ಲಾ, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಸದಸ್ಯರಾದ ಚಮನ್ ಸಾಬ್, ಮಂಜುನಾಥ ಗಡಿಗುಡಾಳ್, ಇಟ್ಟಿಗುಡಿ ಮಂಜುನಾಥ, ಮುಖಂಡರಾದ ಮುದೇಗೌಡ್ರು ಗಿರೀಶ್, ದಿನೇಶ್ ಕೆ. ಶೆಟ್ಟಿ, ಗಣೇಶ್ ಹುಲ್ಮಮನಿ, ಆಯೂಬ್ ಪೈಲ್ವಾನ್ ಇತರರು ಇದ್ದರು.

error: Content is protected !!