ರಥೋತ್ಸವಕ್ಕೆ ಮೆರಗು ತಂದಜಾನಪದ ಕಲಾ-ಮೇಳಗಳು
ಕಟ್ಟಡ, ಮರಗಳ ಮೇಲೇರಿ ರಥೋತ್ಸವ ವೀಕ್ಷಿಸಿದ ಜನತೆ
ಮಲೇಬೆನ್ನೂರು, ಮಾ. 14 – ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಮಹಾ ರಥೋತ್ಸವವು ಭಾನುವಾರ ಬೆಳಿಗ್ಗೆ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಿಯಿಂದ ಜರುಗಿತು.
ನಂದಿಗುಡಿ ಬೃಹನ್ಮಠದ ಶ್ರಿ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರಳ ಜಾತ್ರಾ ಮಹೋತ್ಸವಕ್ಕೆ ಗದ್ದುಗೆ ಟ್ರಸ್ಟ್ ಕಮಿಟಿಯವರು ನಿರ್ಧರಿಸಿ, ಸಾರ್ವಜನಿಕವಾಗಿ ಪ್ರಕಟಿಸಿದ್ದರೂ ರಥೋತ್ಸವಕ್ಕೆ ಜನ ಎಂದಿನಂತೆ ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದರು.
ಹೊರ ರಾಜ್ಯಗಳಿಂದ ಆಗಮಿಸುವ ಭಕ್ತರ ಸಂಖ್ಯೆ ಕಡಿಮೆ ಇತ್ತು. ಡೊಳ್ಳು, ಕೀಲು ಕುಣಿತ, ಗೊಂಬೆ ಕುಣಿತ, ಭಜನೆ, ಸಮಾಳ, ಹಲಗೆ ಸೇರಿದಂತೆ ವಿವಿಧ ಕಲಾ-ಮೇಳಗಳು ರಥೋತ್ಸವಕ್ಕೆ ಮೆರಗು ತಂದಿದ್ದವು. ಭಕ್ತರು ರಥದ ಮೇಲೆ ಮಂಡಕ್ಕಿ, ಮೆಣಸಿನಕಾಳು, ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
ರಥೋತ್ಸವ ನಡೆಯುವ ಜಾಗದಲ್ಲಿ ವಿಶಾಲವಾದ ಸ್ಥಳ ಕೊರತೆ ಇರುವ ಕಾರಣ ಜನರು ಕಟ್ಟಡ, ಮರಗಳ ಮೇಲೆ ಕುಳಿತು ರಥೋತ್ಸವನ್ನು ಕಣ್ತುಂಬಿ ಕೊಂಡರು.
ಗ್ರಾಮಾಂತರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ್, ಸಿಪಿಐ ಸತೀಶ್, ಪಿಎಸ್ಐ ವೀರಬಸಪ್ಪ ಕುಸಲಾಪುರ ಅವರ ನೇತೃತ್ವ ದಲ್ಲಿ ಈ ಬಾರಿ ಭಾರೀ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಎಲ್ಲೆಡೆ ಸಿಸಿ ಟಿ.ವಿ ಕ್ಯಾಮರಾಗಳ ಕಣ್ಗಾವಲು ಇದ್ದ ಕಾರಣ ಪಿಕ್ ಪ್ಯಾಕೆಟ್ ಕಳ್ಳತನ ಸಂಖ್ಯೆ ಕಡಿಮೆ ಆಗಿತ್ತು, ಗದ್ದುಗೆ ಟ್ರಸ್ಟ್ ಕಮಿಟಿಯವರು ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪೊಲೀಸ್ ಹಾಗೂ ಆರೋಗ್ಯ ಇಲಾಖೆಯವರ ಸಹಯೋಗದಲ್ಲಿ ಕೈಗೊಂಡಿದ್ದರು.
ಅಲ್ಲಲ್ಲಿ ಸ್ಯಾನಿಟೈಸರ್ ಬಾಟೆಲ್ಗಳನ್ನು ಇಡಲಾಗಿತ್ತು, ಸಾಮಾಜಿಕ ಅಂತರ ಕಾಯ್ದು ಕೊಳ್ಳುವಂತೆ ಮೈಕಿನಲ್ಲಿ ಪ್ರಕಟಣೆ ಮಾಡಲಾಗುತಿತ್ತು. ಹೊರಗಡೆಯಿಂದ ಬಂದಿದ್ದ ಭಕ್ತರು ಮಾಸ್ಕ್ ಧರಿಸಿದ್ದರು. ಸ್ವಚ್ಛತೆಗೆ ಒತ್ತು ನೀಡಲಾಗಿತ್ತು.
ಬಿಡಾರ: ದೇವಸ್ಥಾನದ ಎಲ್ಲಾ ಅತಿಥಿ ಗೃಹಗಳ ಕೊಠಡಿಗಳು ಭರ್ತಿಯಾಗಿದ್ದರಿಂದ ಭಕ್ತರು ತೋಟ ಮತ್ತು ತುಂಗಭದ್ರಾ ನದಿಯ ನಡುಗಡ್ಡೆಗಳಲ್ಲಿ ಬೀಡಾರ ಹಾಕಿ ತಂಗಿದ್ದರು.
ನದಿಯಲ್ಲಿ ಪುಣ್ಯಸ್ನಾನ ಮಾಡಿದ ಭಕ್ತರು ಮೆಟ್ಟಿಲನ್ನೇರಿ ಸರದಿ ಸಾಲಿನಲ್ಲಿ ನಿಂತು ಅಜ್ಜಯ್ಯನ ಗದ್ದುಗೆ ದರ್ಶನ ಪಡೆದರು.
ಕೆಲವರು ಅಜ್ಜಯ್ಯ ಮೈಮೇಲೆ ಬಂದಿದ್ದಾನೆಂಬಂತೆ ನಡೆದು ಕೊಂಡರು. ಜಾತ್ರೆಗೆ ಆಗಮಿಸಿದ್ದ ಎಲ್ಲಾ ಭಕ್ತರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಸ್ವಯಂ ಸೇವಕರು ಭಕ್ತರ ಸಹಾಯಕ್ಕಾಗಿ ಶ್ರಮಿಸಿದರು.
ಟೆಸ್ಟಿಂಗ್: ಆರೋಗ್ಯ ಇಲಾಖೆಯವರು 2 ಕೊರೊನಾ ಟೆಸ್ಟಿಂಗ್ ಮೊಬೈಲ್ ವ್ಯಾನ್ಗಳನ್ನು ಜಾತ್ರೆಗೆ ನಿಯೋಜಿಸಿದ್ದು, ಸ್ಕ್ರೀನ್ ಟೆಸ್ಟಿಂಗ್ ಮಾಡಿ, ಅನುಮಾನ ಬಂದವರಿಗೆ ಕೊರೊನಾ ಟೆಸ್ಟಿಂಗ್ ಮಾಡಿದರು. ಶನಿವಾರ, ಭಾನವಾರ ಸೇರಿ ಒಟ್ಟು 200 ಕ್ಕೂ ಹೆಚ್ಚು ಜನರಿಗೆ ಕೊರೊನಾ ಟೆಸ್ಟಿಂಗ್ ಮಾಡಿದ್ದು , ಒಂದೂ ಪಾಸಿಟಿವ್ ಪ್ರಕರಣ ಕಂಡು ಬಂದಿಲ್ಲ ಎಂದು ಹಿರಿಯ ಆರೋಗ್ಯ ಸಹಾಯಕ ಎಂ.ಉಮಣ್ಣ ತಿಳಿಸಿದ್ದಾರೆ.
ಕುಸ್ತಿ: ರಥೋತ್ಸವದ ಅಂಗವಾಗಿ ಸೋಮವಾರ, ಮಂಗಳವಾರ ಮತ್ತು ಬುಧವಾರ ದೇವಸ್ಥಾನದಲ್ಲಿ ಕಾಣಿಕೆ ಒಪ್ಪಿಸುವುದು, ಜವಳ ಇತ್ಯಾದಿ ಹರಕೆ ಸೇವೆಗಳು ನಡೆಯಲಿದ್ದು, ಮೂರು ದಿನವೂ ಶ್ರೀ ಕರಿಬಸವೇಶ್ವರ ಶಾಲೆ ಆವರಣದಲ್ಲಿ ಬಯಲು ಜಂಗೀ ಕುಸ್ತಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಸುರೇಶ್ ತಿಳಿಸಿದ್ದಾರೆ.