ಸಾವಯವ ಕೃಷಿಗೆ ರೈತರು ಒತ್ತು ನೀಡಬೇಕು ಪ.ಪಂ ಉಪಾಧ್ಯಕ್ಷೆ ಲಲಿತಮ್ಮ ಶಿವಣ್ಣ
ಜಗಳೂರು, ಜು.30 – ರೈತರು ಸಾವಯವ ಕೃಷಿಗೆ ಒತ್ತು ನೀಡುವ ಮೂಲಕ ದೇಶದ ಜನರಿಗೆ ವಿಷ ಮುಕ್ತ ಆಹಾರ ದೊರೆಯುವಂತೆ ಮಾಡಬೇಕು ಎಂದು ಪ.ಪಂ ಉಪಾಧ್ಯಕ್ಷರಾದ ಲಲೀತಮ್ಮ ಶಿವಣ್ಣ ಹೇಳಿದರು.
ಇಲ್ಲಿನ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಭಾರ ತೀಯ ಕಿಸಾನ್ ಸಂಘ ಜಿಲ್ಲಾ ಹಾಗೂ ತಾಲ್ಲೂಕು ಘಟಕ ಕೃಷಿಕ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಸಾವಯವ ಸಂತೆ ಉದ್ಘಾಟಿಸಿ ಅವರು ಮಾತನಾಡಿದರು.
ರಾಸಾಯನಿಕ ಔಷಧಿಗಳನ್ನು ಬಳಸಿದ ವಿಷಯುಕ್ತ ತರಕಾರಿ, ಹಣ್ಣು ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚು ಸಾವಯವ ತರಕಾರಿ ಸಿರಿಧಾನ್ಯಗಳನ್ನು ಉಪಯೋಗಿಸುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ ಎಂದರು.
ಸಾವಯವ ಕೃಷಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಜ್ಜನ್ ಮಾತನಾಡಿ, ದಿನನಿತ್ಯದ ಬದುಕಿನಲ್ಲಿ ಮನಸ್ಸಿಗೆ ಶ್ರಮ ಕೊಡುತ್ತವೆಯೇ ಹೊರತು ದೇಹಕ್ಕೆ ಕೊಡುತ್ತಿಲ್ಲ, ಹಾಗಾಗಿಯೇ ಮುಂಜಾನೆ, ಸಂಜೆ ವೇಳೆ ಪಟ್ಟಣ, ನಗರವಾಸಿಗಳು ವಾಯುವಿಹಾರ, ವಾಕಿಂಗ್ ಮಾಡುತ್ತಿದ್ದಾರೆ. ಅದರು ಬದಲು ಜಮೀನುಗಳಲ್ಲಿ ರೈತರಿಗೆ ಸಹಾಯ ಮಾಡಿ ಶ್ರಮದಾನ ಮಾಡುವ ಪದ್ದತಿಯನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಾವಯವ ಕೃಷಿಯನ್ನು ಪ್ರತಿಯೊಬ್ಬ ರೈತರು ಅಳವಡಿಸಿಕೊಳ್ಳಬೇಕು. ಆಹಾರವೇ ಔಷಧಿಯಾಗಬೇಕು, ಔಷಧಿಯೇ ಮನುಷ್ಯರಿಗೆ ಆಹಾರವಾಗಬಾರದು ಎಂದು ತಿಳಿಸಿದರು.
ಭಾರತೀಯ ಕಿಸಾನ್ ಸಂಘದ ಮುಖಂಡ ಗಂಗಾಧರ್ ಕಾಸರಘಟ್ಟ ಮಾತನಾಡಿ, ದೇಶವ್ಯಾಪಿ ರಾಸಾಯನಿಕ ಔಷಧಿಗಳ ಆರ್ಭಟದಿಂದ ವಿಷ ಪೂರಿತ ಆಹಾರ ಪದಾರ್ಥಗಳನ್ನು ಸೇವಿಸಿ ಜನರು ಮಾರಣಾಂತಿಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ ಎಂದು ವಿಷಾದಿಸಿದರು.
ಸಮಾರಂಭದಲ್ಲಿ ಉಪ ತಹಸೀಲ್ದಾರ್ ಧನಪಾಲ್ ಶೆಟ್ಟಿ, ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಸಹಾಯಕ ಕೃಷಿ ನಿರ್ದೇಶಕ ಶ್ರಿನಿವಾಸುಲು, ತೋಟಗಾರಿಕಾ ಸಹಾಯಕ ನಿರ್ದೇಶಕ ವೆಂಕಟೇಶ್ ಮೂರ್ತಿ, ಪಶು ಇಲಾಖೆ ವೈದ್ಯ ಡಾ. ಮಹಾದೇವಪ್ಪ, ಪ.ಪಂ ಸದಸ್ಯ ಪಾಪಲಿಂಗಪ್ಪ, ಮಾಜಿ ಅಧ್ಯಕ್ಷ ಜೆ.ವಿ ನಾಗರಾಜ್, ಕಿಸಾನ್ ಸಂಘದ ಧನಂಜಯ್, ಉಪನ್ಯಾಸಕರಾದ ಬಿ.ಎನ್.ಎಂ ಸ್ವಾಮಿ, ನಾಗಲಿಂಗಪ್ಪ ಹಾಜರಿದ್ದರು.