ಪ್ರಚಾರದಿಂದ ಪಕ್ಷ ಬಲವರ್ಧನೆ

ಬಿಜೆಪಿ ಯುವ ಸಮಾವೇಶದಲ್ಲಿ ಸಂಸದ ಸಿದ್ದೇಶ್ವರ

ದಾವಣಗೆರೆ, ಮಾ.14- ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಯರೂಪಕ್ಕೆ ತಂದಿರುವ ಯೋಜನೆಗಳ ಬಗ್ಗೆ ಹೆಚ್ಚಾಗಿ ಪಕ್ಷದ ಕಾರ್ಯಕರ್ತರು ಪ್ರಚಾರ ನಡೆಸಿದಾಗ ಮಾತ್ರ ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ಸಾಧ್ಯ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಬಿಜೆಪಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ವತಿಯಿಂದ ನಗರದ  ನಿಮಿಷಾಂಭ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಯುವ ಸಮಾವೇಶ ಹಾಗೂ ವಿಶೇಷ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ಮಾಧ್ಯಮಗಳ ಮೂಲಕ ಯೋಜನೆಗಳ ಪ್ರಚಾರ ಮಾಡಿ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ ಎಂದರು.

ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಚುನಾವಣೆಗಳು ಬರಲಿವೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಸದಾ ನಮ್ಮ ಸರ್ಕಾರಗಳ ಯೋಜನೆಗಳ ಬಗ್ಗೆಯೇ ಮಾತನಾಡುತ್ತಿರಬೇಕು. ಜನರಿಗೆ ಯೋಜನೆಗಳ ಅನುಕೂಲತೆಗಳನ್ನು ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿಯಾಗಿಲ್ಲ. ಕೆಲವಷ್ಟೇ ಕಾಮಗಾರಿಗಳು ನಡೆಯುತ್ತಿವೆ, ಇದು ಸಾಲದು.  ಈ ಕ್ಷೇತ್ರ ಸುಂದರ ಕ್ಷೇತ್ರವಾಗಬೇಕಾಗಿತ್ತು. ಇಲ್ಲಿನ ನಿವಾಸಿಗಳಿಗೆ ವಸತಿ ಕಲ್ಪಿಸುವ, ಹಕ್ಕುಪತ್ರ ನೀಡುವ ಕೆಲಸಗಳಾಗಬೇಕಿದೆ. ಪ್ರಧಾನಿಯವರ ಜಲಸಿರಿ ಯೋಜನೆಯಡಿ ಪ್ರತಿ ಮನೆಗೆ 24 ತಾಸು ಶುದ್ಧ ಕುಡಿಯುವ ನೀರು ನೀಡಲಿದ್ದು, ಇನ್ನು ಒಂದೂವರೆ ವರ್ಷದೊಳಗೆ ಈ ಕ್ಷೇತ್ರದ ಜನತೆಗೆ ಅದರ ಸೌಲಭ್ಯ ದೊರಕಲಿದೆ ಎಂದರು.

ದಕ್ಷಿಣ ಕ್ಷೇತ್ರದಲ್ಲಿ ಇದುವರೆಗೆ ಬಿಜೆಪಿ ಗೆಲ್ಲಲು ಸಾಧ್ಯವಾಗಿಲ್ಲ. ಮುಸ್ಲಿಂ ಸಮುದಾಯವೇ ಹೆಚ್ಚಾಗಿದೆ ಎನ್ನುವುದು ಸೋಲಿಗೆ ಕಾರಣವಾಗಬಾರದು. ಎಲ್ಲರ ವಿಶ್ವಾಸವನ್ನೂ ಗಳಿಸಬೇಕು. ಅದಕ್ಕಾಗಿ ಕಾರ್ಯಕರ್ತರ ಪರಿಶ್ರಮ, ತ್ಯಾಗ ಮುಖ್ಯ. 2023ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಂಟೂ ಕ್ಷೇತ್ರಗಳಲ್ಲೂ ಬಿಜೆಪಿ ಶಾಸಕರಿರಬೇಕು ಎಂಬ ಆಸೆ ಇದೆ. ಅದನ್ನು ಕಾರ್ಯಕರ್ತರು ನೆರವೇರಿಸುತ್ತಾರೆಂಬ ಭರವಸೆ ಇದೆ ಎಂದು ಹೇಳಿದರು.

ಯುವ ಮೋರ್ಚಾ ಬಿಜೆಪಿಯ ಶಕ್ತಿ. ಅದರಿಂದಲೇ ಇಂದು ನರೇಂದ್ರ ಮೋದಿ ಪ್ರಧಾನಿಯಾಗಲು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಸಾಧ್ಯವಾಗಿದೆ.  ದೇಶಾದ್ಯಂತ ಯುವಕರು ಮೋದಿಯವರ ಕೆಲಸಗಳನ್ನು ಶ್ಲ್ಯಾಘಿಸಿ, ಪ್ರಚಾರ ಮಾಡಿ, ಮತ ಹಾಕಿಸಿದ್ದಾರೆ. ಪಕ್ಷವನ್ನು ಶಕ್ತಿಯುತವಾಗಿ ಬೆಳೆಸಿದ್ದಾರೆ ಎಂದರು.

ಮಹಾನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಮಾತನಾಡುತ್ತಾ, ಯಾವುದೇ ದೇಶದ ಶಕ್ತಿ ನಿರ್ಧಾರವಾಗುವುದು ಆ ದೇಶದ ಯುವಜನತೆಯ ಮೇಲೆ. ಭಾರತ ಇಂದು ಹೆಚ್ಚಿನ ಯುವಕರನ್ನು ಹೊಂದಿದ ದೇಶವಾಗಿದೆ. ಭಾರತವನ್ನು ವಿಶ್ವಗುರು ಮಾಡುವುದೇ ನಮ್ಮ ಗುರಿ. ಆ ಗುರಿಗೆ ಯುವಶಕ್ತಿ ಸಹಕರಿಸಬೇಕು ಎಂದರು.

ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ್ದಾರೆ. ನೂರಾರು ದೇಶಗಳು ಭಾರತವನ್ನು ಸಹಾಯಕ್ಕಾಗಿ ಯಾಚಿಸುವಂತಾಗಿದೆ. ಅಧಿಕಾರವೊಂದೇ ನಮ್ಮ ಗುರಿಯಾಗಿರಬಾರದು. ಸರ್ಕಾರದ ಯೋಜನೆಗಳನ್ನೂ ಜನತೆಗೆ ತಲುಪಿಸಬೇಕು. ಬಿಜೆಪಿ ಕಾರ್ಯಕರ್ತರಿಗೆ ದೇಶದಲ್ಲಿ ವಿಶೇಷ ಗೌರವವಿದ್ದು, ಅದನ್ನು ಮತ್ತಷ್ಟು ಹೆಚ್ಚಿಸಲು ಪ್ರಯತ್ನಿಸೋಣ ಎಂದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡುತ್ತಾ, ಮಹಾನಗರ ಪಾಲಿಕೆಯ 2 ವಾರ್ಡುಗಳಿಗೆ ಇದೇ 29ರಂದು ಮತದಾನ ನಡೆಯಲಿದ್ದು, 19ರಿಂದ ಪ್ರಚಾರ ಆರಂಭವಾಗಲಿದೆ. ಶೀಘ್ರದಲ್ಲಿಯೇ ಅಭ್ಯರ್ಥಿಗಳ ಘೋಷಣೆಯಾಗಲಿದೆ. ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು 1 ಸ್ಥಾನದ ಕೊರತೆ ಇದ್ದು, ನಾವು ಚುನಾವಣೆಯಲ್ಲಿ ಗೆಲ್ಲಲೇ ಬೇಕಿದೆ. ಆದ್ದರಿಂದ ಕಾರ್ಯಕರ್ತರು ಪ್ರತಿ ಮನೆಗೂ ತೆರಳಿ ಮನವೊಲಿಸಬೇಕು ಎಂದರು.

ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಜಗದೀಶ್,  ಮಂಡಲ ಅಧ್ಯಕ್ಷ ಆನಂದರಾವ್ ಶಿಂಧೆ ಮಾತನಾಡಿದರು. ದಕ್ಷಿಣ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪಾಲಿಕೆ ಸದಸ್ಯರಾದ ಶಿವಪ್ರಕಾಶ್, ರಾಕೇಶ್‌ರಾವ್ ಜಾಧವ್, ಎಲ್.ಡಿ. ಗೋಣೆಪ್ಪ, ಶಾಂತಕುಮಾರ್ ಸೋಗಿ, ಗಾಯತ್ರಿ ಬಾಯಿ, ಮಾಜಿ ಸದಸ್ಯ ದೇವರಮನೆ ಶಿವಕುಮಾರ್, ಮಂಜುನಾಥ ಚಳ್ಳಕೆರೆ, ಶ್ರೀನಿವಾಸ ದಾಸಕರಿಯಪ್ಪ ಇತರರು ಉಪಸ್ಥಿತರಿದ್ದರು. ಹೆಚ್.ಎಂ. ಗಣೇಶ್ ಸ್ವಾಗತಿಸಿದರು. ಸಹನಾ ಮಂಜುನಾಥ್ ಪ್ರಾರ್ಥಿಸಿದರು.

error: Content is protected !!