ಖಾಸಗೀಕರಣ ಖಂಡಿಸಿ ಎಲ್‌ಐಸಿ ನೌಕರರ ಸಂಘದ ಪ್ರತಿಭಟನೆ

ದಾವಣಗೆರೆ, ಜು.29- ಕೇಂದ್ರ ಸರ್ಕಾರವು ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ನಿಂತಿದ್ದು, ದೇಶ ಜನರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿರುವ ಕ್ರಮಕ್ಕೆ ಎಲ್‌ಐಸಿ ನೌಕರರ ಸಂಘ ಮತ್ತು ಎಲ್‌ಐಸಿ ಏಜೆಂಟ್ಸ್ ಯೂನಿಯನ್ ಸದಸ್ಯರು ವಿರೋಧ ವ್ಯಕ್ತಪಡಿಸಿ, ಎಲ್‌ಐಸಿ ಕಚೇರಿ ಮುಂದೆ ನಿನ್ನೆ ಪ್ರತಿಭಟನೆ ನಡೆಸಿದರು.

ಸಿಐಟಿಯು ಜಿಲ್ಲಾ ಸಂಚಾಲಕ ಕೆ.ಹೆಚ್. ಆನಂದರಾಜು ಮಾತನಾಡಿ, ದೇಶಭಕ್ತಿ ಹೆಸರೇಳುವ ಸರ್ಕಾರ, ರಕ್ಷಣಾ ಇಲಾಖೆ ಅಡಿಯಲ್ಲಿ ದೇಶದ ರಕ್ಷಣೆಗೆ ರಕ್ಷಣಾ ಸಾಮಗ್ರಿ ಮತ್ತು ಶಸ್ತ್ರಾಸ್ತ್ರಗಳನ್ನು ಉತ್ಪಾದನೆ ಮಾಡುತ್ತಿರುವ 44 ಡಿಆರ್‌ಡಿಒ ಕಂಪನಿಗಳನ್ನು ಖಾಸಗಿ ಯವರಿಗೆ ಮಾರಾಟ ಮಾಡಲು ಅಗತ್ಯ ಸೇವೆಗಳ ಸುಗ್ರೀವಾಜ್ಞೆ ಹೊರಡಿಸಿದೆ.

ಎಲ್ಲಾ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿದಿದ್ದರೂ ಪೆಟ್ರೋಲ್-ಡೀಸೆಲ್ ಬೆಲೆಗಳು ಏರುತ್ತಿದೆ. ಎಲ್‌ಪಿಜಿ ಮೇಲಿನ ಸಬ್ಸಿಡಿ ತೆಗೆದು ಜನ ಸಾಮಾನ್ಯರ ಗಾಯದ ಮೇಲೆ ಬರೆ ಎಳೆಯಲಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ಎಲ್‌ಐಸಿ ನೌಕರರ ಸಂಘದ ಪುಟ್ಟರಾಜು, ಅನಿತಾ, ತಿಪ್ಪೇಸ್ವಾಮಿ, ದತ್ತರಾಜ್ ಹಾಗೂ ಎಲ್‌ಐಸಿ ಏಜೆಂಟರ ಸಂಘದ ಬಿ.ಟಿ. ಶಿವಮೂರ್ತಿ, ಎಂ.ಎಂ. ಮಹಾದೇವಪ್ಪ, ಎಸ್.ಎ. ಕಲ್ಲನಗೌಡರ್ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!