ದಾವಣಗೆರೆ, ಮೇ 18- ನನ್ನ ಕ್ಷೇತ್ರದಲ್ಲಿರುವ ಸಮಾರು 2 ಲಕ್ಷ ಜನರಿಗೆ 2 ಲಕ್ಷ ಡೋಸ್ ಕೊರೊನಾ ಲಸಿಕೆ ತರಿಸಿಕೊಟ್ಟರೆ ಅದರ ಅರ್ಧದಷ್ಟು ಹಣನ್ನು ತಾವು ಕೊಡುವುದಾಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಯಾವುದೇ ಲಸಿಕೆ ಒಂದಕ್ಕೆ 900 ರೂ. ವೆಚ್ಚವಾಗುತ್ತದೆ ಎನ್ನಲಾಗುತ್ತದೆ. ನನ್ನ ಕ್ಷೇತ್ರದಲ್ಲಿ ಸುಮಾರು 2 ಲಕ್ಷ ಜನರಿದ್ದಾರೆ. 2 ಲಕ್ಷ ಡೋಸ್ಗೆ 18 ಕೋಟಿ ರೂ. ಮೊತ್ತವಾಗುತ್ತದೆ. ಅದರಲ್ಲಿ ಶೇ.50ರಷ್ಟು ಅಂದರೆ 9 ಕೋಟಿ ರೂಗಳನ್ನು ನಾನು ಕೂಡುತ್ತೇನೆ. ಸರ್ಕಾರ 9 ಕೋಟಿ ರೂ. ನೀಡಲಿ ಎಂದು ತಮ್ಮನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿಗಳಿಗೆ ಅವರು ಹೇಳಿದರು.
ಶಾಸಕನಾಗಿ ನನ್ನ ಕ್ಷೇತ್ರದ ಮತದಾರರನ್ನು ಕಾಪಾಡುವುದು ನನ್ನ ಧರ್ಮ. ಅದಕ್ಕಾಗಿ ನಾನು ಏನು ಮಾಡಲೂ ಸಿದ್ಧನಿದ್ದೇನೆ. ಸರ್ಕಾರ ಲಸಿಕೆ ತರಿಸಿಕೊಡುವ ತಾಕತ್ತು ಪ್ರದರ್ಶಿಸಲಿ, ಅದಕ್ಕೆ ಬೇಕಾದ ಹಣ ನಾನು ಕೊಡುತ್ತೇನೆ ಎಂದು ಎಸ್ಸೆಸ್ ಸವಾಲು ಹಾಕಿದ್ದಾರೆ.
ಪ್ರಸ್ತುತ ಲಸಿಕೆ ಸಿಗದಾಗಿದೆ. ರೋಗಿಗಳಿಗೆ ಆಕ್ಸಿಜನ್ ಸಿಗುತ್ತಿಲ್ಲ. ಚಿಕಿತ್ಸೆ ನೀಡಲು ಸೂಕ್ತ ವೈದ್ಯಕೀಯ ಸಿಬ್ಬಂದಿಗಳಿಲ್ಲ. ಕೊರೊನಾ ಹತೋಟಿಗೆ ತರುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಎಲ್ಲರೂ ಹಣ ಮಾಡಲು ಹೊರಟಿದ್ದಾರೆ. ಜನರ ಜೀವ ಕಾಪಾಡಲು ಯಾರೂ ತಯಾರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಕ್ಸಿಜನ್ ಕೇಳಿದರೆ ಸಚಿವ ಮಾಧುಸ್ವಾಮಿ ಮುಖ್ಯಮಂತ್ರಿಗಳನ್ನು ಕೇಳಿ ಎನ್ನುತ್ತಾರೆ. ಬಡವರಿಗೆ ಜೀವನೋಪಾಯಕ್ಕಾಗಿ ಹಣ ಕೊಡಿ ಎಂದರೆ ಸಚಿವ ಈಶ್ವರಪ್ಪ ಅವರು ನಾವೇನು ನೋಟು ಪ್ರಿಂಟ್ ಮಾಡುತ್ತೇವಾ ಎನ್ನುತ್ತಾರೆ. ಸರ್ಕಾರ ನಡೆಸುವವರು ಬಾಯಲ್ಲಿ ಬರುವ ಮಾತುಗಳಾ ಇವು? ಎಂದು ಅವರು ಕಿಡಿಕಾರಿದರು.