ದೇಶ-ರಾಜ್ಯದಲ್ಲಿ ಇಳಿಕೆ, ಜಿಲ್ಲೆಯಲ್ಲಿ ಏರಿಕೆ

ದಾವಣಗೆರೆ ಜಿಲ್ಲೆಯಲ್ಲಿ ಸರಾಸರಿ ಪ್ರಕರಣಗಳ ಸಂಖ್ಯೆ ಎರಡು ಪಟ್ಟು ಹೆಚ್ಚಳ

ದಾವಣಗೆರೆ, ಮೇ 17 – ದೇಶದಲ್ಲಿ 26 ದಿನಗಳ ನಂತರ ಪ್ರತಿನಿತ್ಯ ಕಂಡು ಬರುವ ಕೊರೊನಾ ಪ್ರಕರಣಗಳ ಸಂಖ್ಯೆ 3 ಲಕ್ಷಕ್ಕೂ ಕಡಿಮೆ ಹಂತಕ್ಕೆ ಬಂದಿದೆ. ಮಂಗಳವಾರ ದೇಶದಲ್ಲಿ 2.81 ಲಕ್ಷ ಪ್ರಕರಣಗಳು ದಾಖಲಾಗಿವೆ.

ದೇಶದಲ್ಲಿ ಕಳೆದ ವಾರದಲ್ಲಿ ಸರಾಸರಿ ಪ್ರಕರಣಗಳ ಸಂಖ್ಯೆ 3.19 ಲಕ್ಷವಾಗಿದ್ದರೆ, ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆ ಸರಾಸರಿ 3.66 ಲಕ್ಷದಷ್ಟಿದೆ.

ಕರ್ನಾಟಕದಲ್ಲಿ ಮೇ 9ರಂದು ವಾರದ ಸರಾಸರಿ ಪ್ರಕರಣಗಳ ಸಂಖ್ಯೆ 47 ಸಾವಿರವಾಗಿದ್ದರೆ, ಮೇ 17ರಂದು 38 ಸಾವಿರಕ್ಕೆ ಇಳಿಕೆಯಾಗಿತ್ತು. ಇದೇ ಅವಧಿಯಲ್ಲಿ ಕೊರೊನಾದಿಂದ ಚೇತರಿಸಿಕೊಳ್ಳುವವರ ಸಂಖ್ಯೆ 26 ಸಾವಿರದಿಂದ 33 ಸಾವಿರಕ್ಕೆ ಏರಿಕೆಯಾಗಿದೆ.

ಈ ನಡುವೆ, ದೇಶದಲ್ಲಿ ಕೊರೊನಾ ಪ್ರಕೋಪ ಇಳಿಮುಖವಾಗಿದೆ ಎಂಬ ಮಾತುಗಳು ಕೇಳಿ ಬರತೊಡಗಿವೆ. ಮಂಗಳವಾರ ಒಂದೇ ದಿನ 1.60 ಲಕ್ಷದಷ್ಟು ಸಕ್ರಿಯ ಪ್ರಕರಣಗಳು ಇಳಿಕೆಯಾಗಿರುವುದು ಇದರತ್ತ ಸೂಚನೆಯನ್ನು ನೀಡುತ್ತಿದೆ. ಆದರೆ, ದೇಶದೆಲ್ಲೆಡೆ ಕೊರೊನಾ ಪ್ರಕರಣಗಳು ಏಕಮುಖವಾಗಿ ಇಳಿಕೆಯಾಗುತ್ತಿಲ್ಲ. ದಾವಣಗೆರೆಯಲ್ಲಿ ಮೇ ತಿಂಗಳಲ್ಲಿ ಕಂಡು ಬರುವ ಕೊರೊನಾ ಪ್ರಕರಣಗಳ ಸಂಖ್ಯೆ ಏರುಮುಖವಾಗುತ್ತಿದೆ. ಈ ತಿಂಗಳ ಆರಂಭದಲ್ಲಿ ವಾರದ ಸರಾಸರಿ ಪ್ರಕರಣಗಳ ಸಂಖ್ಯೆ 266 ಆಗಿತ್ತು. ನಂತರ ಮೇ 9ರಂದು 400 ದಾಟಿತ್ತು. ಮೇ 17ರ ವೇಳೆಗೆ ಅದು 549ಕ್ಕೆ ತಲುಪಿದೆ. ಒಟ್ಟಾರೆ ಸರಾಸರಿ ಕಂಡು ಬರುವ ಪ್ರಕರಣಗಳ ಪ್ರಮಾಣ ತಿಂಗಳ ಆರಂಭಕ್ಕೆ ಹೋಲಿಸಿದರೆ ಈಗ ಎರಡು ಪಟ್ಟಿನಷ್ಟು ಹೆಚ್ಚಾಗಿದೆ! ಅದರಲ್ಲೂ ಮೇ 16ರಂದು ಒಂದೇ ದಿನ 1,155 ಸೋಂಕುಗಳು ಕಂಡು ಬಂದಿದ್ದು, ಇದುವರೆಗಿನ ದಾಖಲೆಯೇ ಆಗಿದೆ. ಜಿಲ್ಲೆಯಲ್ಲೀಗ 4 ಸಾವಿರದಷ್ಟು ಸಕ್ರಿಯ ಸೋಂಕು ಪ್ರಕರಣಗಳಿವೆ.

ಗ್ರಾಮೀಣ ಭಾಗದಲ್ಲಿ ಸೋಂಕುಗಳು ಹೆಚ್ಚಾ ಗುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಗ್ರಾಮೀಣ ಭಾಗದಲ್ಲಿ ಜನರು ತಪಾಸಣೆಗೆ ಬರಲು ಹಿಂಜರಿಯುತ್ತಿರುವುದು ಕೊರೊನಾ ಇನ್ನಷ್ಟು ವೇಗವಾಗಿ ಹರಡಲು ಕಾರಣವಾಗಿದೆ. ಇದೆಲ್ಲವೂ ಕಳವಳಕಾರಿಯಾಗಿದ್ದು, ದೇಶ ಒಂದು ದಿಕ್ಕಿಗೆ ಸಾಗಿದರೆ, ಜಿಲ್ಲೆ ಇನ್ನೊಂದು ದಿಕ್ಕಿಗೆ ಸಾಗುತ್ತಿದೆ ಎಂಬ ಭಾವನೆ ತರುತ್ತಿದೆ.

ಸಾಂಕ್ರಾಮಿಕ ರೋಗ ಮೂರು ಹಂತಗಳನ್ನು ಹೊಂದಿರುತ್ತದೆ. ಮೊದಲ ಹಂತದಲ್ಲಿ ಏರುಮುಖವಾದರೆ, ಎರಡನೇ ಹಂತದಲ್ಲಿ ಸ್ಥಿರವಾಗುತ್ತದೆ ಹಾಗೂ ಮೂರನೇ ಹಂತದಲ್ಲಿ ಇಳಿಯುತ್ತದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್ ತಿಳಿಸಿದ್ದಾರೆ.

ಸೋಂಕಿನ ಆರಂಭ ಅನಿರೀಕ್ಷಿತವಾಗಿ ರುತ್ತದೆ. ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ನಿರೀಕ್ಷೆಗೂ ಹೆಚ್ಚಿನ ಸಂಖ್ಯೆಯಲ್ಲಿ ಕಾಯಿಲೆ ಲಕ್ಷಣ ಕಾಣುತ್ತದೆ. ಈ ಹಂತದಲ್ಲಿ ಸರ್ಕಾರಗಳ ಮಾರ್ಗಸೂಚಿ ಅನ್ವಯ ಕ್ರಮ ತೆಗೆದುಕೊಂಡರೆ ಸ್ಥಿರತೆ ಬಂದು, ನಂತರ ಇಳಿಮುಖವಾಗುತ್ತದೆ ಎಂದವರು ಹೇಳಿದ್ದಾರೆ.

ಮೊದಲ ಅಲೆಯಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಕೈಗೊಂಡ ಕ್ರಮಗಳಿಂದ ಇಳಿಮುಖದ ಹಂತದಲ್ಲಿ ಜಿಲ್ಲೆ ಇತ್ತು. ಆದರೆ, ಸಮುದಾಯದ ಸಹಭಾಗಿತ್ವದ ಕೊರತೆಯಿಂದ ಎರಡನೇ ಅಲೆ ಎದುರಾಗಿದೆ. ಈ ಹಂತದದಲ್ಲಿ ಜಿಲ್ಲೆಯಿಂದ ಜಿಲ್ಲೆಗೆ ಕೊರೊನಾ ಹರಡುವಿಕೆಯಲ್ಲಿ ವ್ಯತ್ಯಾಸವಿದೆ ಎಂದವರು ತಿಳಿಸಿದ್ದಾರೆ.

ಸೋಂಕು ಕಡಿಮೆ ಬಂದರೂ ಸುರಕ್ಷಿತ ಎಂದು ಭಾವಿಸಬಾರದು. ಸುಪ್ತ ಪ್ರಕರಣಗಳು ಸಮುದಾಯದಲ್ಲಿರುತ್ತವೆ. ಹೀಗಾಗಿ ರಾಂಡಮ್ ಸರ್ವೆ ಮುಖಾಂತರ ಆರ್.ಎ.ಟಿ. ಪರೀಕ್ಷೆ ಮಾಡಿ ಪಾಸಿಟಿವ್‌ ಇರುವವರನ್ನು ಪ್ರತ್ಯೇಕಿಸಿ ಚಿಕಿತ್ಸೆಗೆ ಒಳಪಡಿಸುವಂತೆ ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒ ಸೂಚನೆ ಕೊಟ್ಟಿದ್ದಾರೆ. ಸಾರ್ವಜನಿಕರು, ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ನಮ್ಮ ಜೊತೆ ಕೈ ಜೋಡಿಸಬೇಕೆಂದು ಅವರು ಕೇಳಿದ್ದಾರೆ.

error: Content is protected !!