ದುಡಿಯುವ ಜನರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಪ್ರಕಟಿಸಲಿ

ಗ್ರಾಮೀಣ ಪ್ರದೇಶದಲ್ಲಿ ಸೋಂಕು ನಿಯಂತ್ರಿಸಲು ಜನರ ಸಹಕಾರ ಪಡೆದು, ನಾವೆಲ್ಲರೂ ಸೇರಿ ಶ್ರಮಿಸೋಣ : ಶಾಸಕ ರಾಮಪ್ಪ ಮನವಿ

ಮಲೇಬೆನ್ನೂರು, ಮೇ 18- ಕೊರೊನಾ ಸೋಂಕಿನಿಂದ ಆಗುತ್ತಿರುವ ಸಾವು-ನೋವುಗಳನ್ನು ತಡೆಗಟ್ಟಲು ಸರ್ಕಾರ ವಿಶೇಷ ಕಾಳಜಿ ವಹಿಸ ಬೇಕೆಂದು ಶಾಸಕ ಎಸ್.ರಾಮಪ್ಪ ಆಗ್ರಹಿಸಿದ್ದಾರೆ.

ಅವರು ಮಂಗಳವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ 2 ಆಕ್ಸಿಜನ್ ಹೊಂದಿರುವ ತುರ್ತು ಸೇವಾ ವಾಹನವನ್ನು ಉದ್ಘಾಟಿಸಿ, ಪುರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಕೊರೊನಾ 2ನೇ ಅಲೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ನೇರ ಆರೋಪ ಮಾಡಿದ ಶಾಸಕರು, ಲಾಕ್‌ಡೌನ್‌ನಿಂದ ತೊಂದರೆ ಆಗಿರುವ ದುಡಿಯುವ ಜನರಿಗೆ ವಿಶೇಷ  ಆರ್ಥಿಕ ಪ್ಯಾಕೇಜ್ ಪ್ರಕಟಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಹರಿಹರ ನಗರದಿಂದ 3 ಜಿಲ್ಲೆಗಳಿಗೆ ಆಕ್ಸಿಜನ್ ಪೂರೈಕೆ ಆಗುತ್ತಿದ್ದರೂ ನಮಗೆ ಮಾತ್ರ ಸಮರ್ಪಕವಾಗಿ ಆಕ್ಸಿಜನ್ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ ಖರೀದಿ ಆರಂಭಿಸಲು ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಶಾಸಕರು, ಹರಿಹರ ತಾಲ್ಲೂಕಿನ ಜನರಿಗೆ ತುರ್ತು ಸೇವೆ ಒದಗಿಸುವುದಕ್ಕಾಗಿ 2 ಆಕ್ಸಿಜನ್ ಸಿಲಿಂಡರ್ ಹೊಂದಿರುವ 2 ಆಂಬ್ಯುಲೆನ್ಸ್‌ಗಳನ್ನು ಹರಿಹರ ಮತ್ತು ಮಲೇಬೆನ್ನೂರು ಭಾಗಕ್ಕೆ ನೀಡಿದ್ದೇವೆ ಎಂದು ಹೇಳಿದರು.  

ಜನರಿಗೆ ಫುಡ್‌ಕಿಟ್‌ಗಿಂತ ಆಕ್ಸಿಜನ್ ಸೌಲಭ್ಯದ ಬೆಡ್‌ಗಳು ಅಗತ್ಯವಾಗಿವೆ. ಅದಕ್ಕಾಗಿ ಶಾಸಕರ ಅನುದಾನದಲ್ಲಿ 45 ಲಕ್ಷ ರೂ. ವೆಚ್ಚದಲ್ಲಿ ಹರಿಹರ ಆಸ್ಪತ್ರೆಗೆ ಮತ್ತು ಮಲೇಬೆನ್ನೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ 50 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆಂದು ರಾಮಪ್ಪ ತಿಳಿಸಿದರು.

ಟೆಸ್ಟ್‌ಗೆ ಒತ್ತು : ಗ್ರಾಮೀಣ ಪ್ರದೇಶದ ಎಲ್ಲಾ ಹಳ್ಳಿಗಳಲ್ಲಿ ನಿರಂತರವಾಗಿ ಕೋವಿಡ್ ಟೆಸ್ಟ್ ಶಿಬಿರಗಳನ್ನು ಮಾಡಿ ಎಂದು ಆರೋಗ್ಯ ಇಲಾಖೆಗೆ ಸೂಚನೆ ನೀಡಿದ ಶಾಕಸರು, ಹರಿಹರ ನಗರದ ಜೊತೆಗೆ ಮಲೇಬೆನ್ನೂರು, ಭಾನುವಳ್ಳಿ, ಸಿರಿಗೆರೆ, ನಂದಿಗುಡಿ, ಕೊಕ್ಕನೂರು, ದೇವರಬೆಳಕೆರೆ, ಹಾಲಿವಾಣ, ಬನ್ನಿಕೋಡು, ಬೆಳ್ಳೂಡಿ, ಬಿಳಸನೂರು, ಕೊಂಡಜ್ಜಿ ಆರೋಗ್ಯ ಕೇಂದ್ರಗಳಲ್ಲಿ ಪ್ರತಿನಿತ್ಯ ಕನಿಷ್ಠ 100 ಜನರಿಗೆ ಕೋವಿಡ್ ಲಸಿಕೆ ಹಾಕುವ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಟಿಹೆಚ್ಓ ಡಾ. ಚಂದ್ರಮೋಹನ್ ಮಾತನಾಡಿ, ತಾಲ್ಲೂಕಿನಲ್ಲಿ ಸದ್ಯ 490 ಸಕ್ರಿಯ ಕೇಸ್‌ಗಳಿದ್ದು, ಕೋವಿಡ್ ಕೇರ್ ಸೆಂಟರ್‌ನಲ್ಲಿ 71, ಸಿ.ಜಿ. ಆಸ್ಪತ್ರೆಯಲ್ಲಿ 29, ಹರಿಹರ ಆಸ್ಪತ್ರೆಯಲ್ಲಿ 58, ಖಾಸಗಿ ಆಸ್ಪತ್ರೆಗಳಲ್ಲಿ 37, ಹೊರಗಡೆ – 30 ಮತ್ತು ಹೋಂ ಐಸೋಲೇಷನ್‌ನಲ್ಲಿ 270 ಸೋಂಕಿತರಿದ್ದಾರೆ. ಇದುವರೆಗೆ 40,645 ಜನರಿಗೆ ಕೋವಿಶಿಲ್ಡ್‌ ಹಾಗೂ 3676  ಜನರಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಿದ್ದೇವೆ  ಎಂದು  ತಿಳಿಸಿದರು.

ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ. ನಿಸಾರ್ ಅವರು, ಈವರೆಗೂ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 124 ಜನರಿಗೆ ಸೋಂಕು  ದೃಢಪಟ್ಟಿದ್ದು, ಮೂವರು ಸಾವನ್ನಪ್ಪಿದ್ದಾರೆ.

100 ಸಕ್ರಿಯ ಕೇಸ್‌ಗಳಿದ್ದು, ಹರಿಹರ ಆಸ್ಪತ್ರೆಯಲ್ಲಿ 8, ಸಿಜಿ ಆಸ್ಪತ್ರೆಯಲ್ಲಿ 2, ಬೇರೆ ಜಿಲ್ಲೆಯಲ್ಲಿ 2, ಖಾಸಗಿ ಆಸ್ಪತ್ರೆಗಳಲ್ಲಿ 8 ಜನ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರೆಲ್ಲಾ ಹೋಂ ಕ್ವಾರಂಟೈನ್ ಆಗಿದ್ದಾರೆ. ಆರೋಗ್ಯ ಕೇಂದ್ರದಲ್ಲಿ ಇದುವರೆಗೆ 2675 ಜನರಿಗೆ ಮೊದಲ ಡೋಸ್ ಮತ್ತು 750 ಜನರಿಗೆ 2ನೇ ಡೋಸ್ ಲಸಿಕೆ ನೀಡಿದ್ದೇವೆ ಎಂಬ ಮಾಹಿತಿ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ದಿನಕರ್ ಮಾತನಾಡಿ, ಪಟ್ಟಣದಲ್ಲಿ ಈವರೆಗೆ 56 ಜನರಿಗೆ ಪಾಸಿಟಿವ್ ಬಂದಿದೆ. 17 ಜನರು ಈಗಾಗಲೇ ಗುಣಮುಖರಾಗಿದ್ದಾರೆ. 35 ಸಕ್ರಿಯ ಕೇಸ್‌ಗಳಿದ್ದು, ಇಬ್ಬರು ಸೋಂಕಿನಿಂದ ಮೃತರಾಗಿದ್ದಾರೆ.

ಪುರಸಭೆ ಸದಸ್ಯರಾದ ಸುಬ್ಬಿರಾಮಪ್ಪ, ಮಹಾಂತೇಶ್ ಸ್ವಾಮಿ, ಹಕ್ಕೀಂ ಸಾಬ್, ತಾಲ್ಲೂಕು ಹಿರಿಯ ಆರೋಗ್ಯ ಸಹಾಯಕ ಎಂ.ಉಮ್ಮಣ್ಣ ಅವರುಗಳು ಮಾತನಾಡಿದರು. ಪೊಲೀಸ್ ಇಲಾಖೆಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ಪಿಎಸ್ಐ ವೀರಬಸಪ್ಪ ವಿವರಿಸಿದರು.  

ಸಭೆಯ ಆರಂಭದಲ್ಲಿ ಮಾತನಾಡಿದ ಎಪಿಎಂಸಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್‌ ಅವರು, ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕುವ ವ್ಯವಸ್ಥೆ ಮಾಡುವಂತೆ ಮತ್ತು ಹೋಬಳಿಯಲ್ಲಿ ಭತ್ತ ಖರೀದಿ ಕೇಂದ್ರ ತೆರೆಯುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಗ್ರಾಮ ಲೆಕ್ಕಾಧಿಕಾರಿಗಳಾದ ಶ್ರೀಧರಮೂರ್ತಿ, ಕೊಟ್ರೇಶ್ ಸುಭಾನಿ, ಆನಂದ ತೀರ್ಥ, ಬೋರಯ್ಯ, ಸೌಮ್ಯ, ದೇವರಾಜ್ ಅವರುಗಳು ತಮ್ಮ ವ್ಯಾಪ್ತಿಯಲ್ಲಿರುವ ಸೋಂಕಿತರ ಬಗ್ಗೆ ಸಭೆಗೆ ತಿಳಿಸಿದರು. 

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಅಬೀದ್ ಅಲಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಉಪತಹಶೀ ಲ್ದಾರ್ ಆರ್.ರವಿ, ಕಂದಾಯ ನಿರೀಕ್ಷಕ ಆನಂದ್, ಪುರಸಭೆ ಅಧಿಕಾರಿಗಳಾದ ಉಮೇಶ್, ಪ್ರಭು, ಗುರುಪ್ರಸಾದ್, ನವೀನ್, ಪುರಸಭೆ ಸದಸ್ಯರಾದ ಎ.ಆರೀಫ್‌ ಅಲಿ, ದಾದಾವಲಿ, ಹೆಚ್.ಜಿ.ಮಂಜಪ್ಪ, ಮಾಸಣಗಿ ಶೇಖರಪ್ಪ, ಕೆ.ಜಿ.ಲೋಕೇಶ್, ಭೋವಿಕುಮಾರ್, ಎ.ಕೆ.ಲೋಕೇಶ್, ಫಕೃದ್ದೀನ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಬಿ.ಮಂಜುನಾಥ್, ಮುಖಂಡ ಬಿ.ವೀರಯ್ಯ, ಕುಂಬಳೂರು ವಾಸು, ಪಿ.ಆರ್‌.ಕುಮಾರ್ ಮತ್ತಿತರರು ಸಭೆಯಲ್ಲಿದ್ದರು.

error: Content is protected !!