ದಾವಣಗೆರೆ, ಮೇ 18- ಕೊರೊನಾ ಸೋಂಕು ಹೆಚ್ಚುತ್ತಿರುವ ಪ್ರಸ್ತುತ ದಿನಗಳಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮನೆಯಲ್ಲಿರುವವರೇ ಹೆಚ್ಚು.
ಆದರೆ ಅಲ್ಲಿ ಇಲ್ಲಿ ಕೆಲವರು ಸೋಂಕಿತರ ನೆರವಿಗೆ ಧಾವಿಸುತ್ತಿದ್ದಾರೆ. ಮತ್ತೆ ಕೆಲವರು ಸೋಂಕು ಮತ್ತಷ್ಟು ಹರಡದಂತೆ ಎಚ್ಚರಿಕೆ ವಹಿಸುವಲ್ಲಿ ಕಾರ್ಯನಿರತರಾಗಿದ್ದಾರೆ. ಈ ಸಾಲಿನಲ್ಲಿ ಇದೀಗ ಮತ್ತೊಬ್ಬ ಯುವತಿ ಸೇರ್ಪಡೆಯಾಗಿದ್ದಾರೆ.
`ನನ್ನದೊಂದು ಅಳಿಸು ಸೇವೆ ಮಾತ್ರ’ ಎಂದು ವಿನಮ್ರವಾಗಿಯೇ ಹೇಳುತ್ತಾ ಕಳೆದ ಹತ್ತು ದಿನಗಳಿಂದ ನಗರದ ವಿವಿಧ ಭಾಗಗಳಲ್ಲಿ ಸ್ಯಾನಿಟೈಜೇಷನ್ ಮಾಡುತ್ತಾ ಯುವ ಜನತೆಗೆ ಮಾದರಿಯಾಗಿದ್ದಾರೆ ಅಜ್ಜಂಪುರ ಶೆಟ್ರು ಮನೆತನದ ಸೌಜನ್ಯ.
ಹೌದು, ತನ್ನ ಸ್ನೇಹಿತನ ಸಹೋದರ ರುದ್ರೇಶ್ ಹೆಗಲಿಗೆ ಟ್ಯಾಂಕ್ ಏರಿಸಿಕೊಂಡು ಸ್ಯಾನಿಟೈಸ್ ಮಾಡಲು ಶುರುವಿಟ್ಟಿದ್ದ. ಅದರಿಂದ ಪ್ರೇರೇಪಿತಳಾದ ಸೌಜನ್ಯ ಆತನೊಂದಿಗೆ ತಾನೂ ಸಹ ಹೆಜ್ಜೆ ಹಾಕುತ್ತಿದ್ದಾಳೆ.
ಸುಮಾರು 15 ಲೀಟರ್ ಸಾಮರ್ಥ್ಯದ ಕ್ಯಾನ್ ಹೆಗಲಿಗೇರಿಸಿಕೊಂಡು ಬೆಳಿಗ್ಗೆ 6.30ರಿಂದ 9.30ರವರೆಗೆ ಸುಮಾರು ಐದಾರು ಬಾರಿ ಭರ್ತಿ ಮಾಡಿಕೊಳ್ಳುತ್ತಾ ನಗರದ ಬೀದಿಗಳನ್ನು ಸುತ್ತಿ ಸ್ಯಾನಿಟೈಸ್ ಮಾಡುತ್ತಿದ್ದಾರೆ. ನನ್ನ ಕೆಲಸದಿಂದ ಕೊರೊನಾ ಓಡಿಸುತ್ತೇನೆಂಬ ಎಂಬ ಭ್ರಮೆ ಇಲ್ಲ. ಆದರೆ ಒಂದಿಷ್ಟಾದರೂ ಕಡಿಮೆಯಾಗಬಹುದು ಎಂಬ ವಿಶ್ವಾಸದಿಂದ ಈ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ ಸೌಜನ್ಯ.
ನನ್ನ ಕಾರ್ಯಕ್ಕೆ ತಾಯಿ ಶಿಲ್ಪ ಷಡಾಕ್ಷರಿ ಹಾಗೂ ತಂದೆ ಷಡಕ್ಷರಿ ಅಜ್ಜಂಪುರ ಶೆಟ್ರು ಉತ್ತೇಜನ ನೀಡಿದರು. ಹುಡುಗಿಯಾಗಿ ಇಂತಹ ಕೆಲಸ ಸಾಧ್ಯವಾ? ಎಂದು ಕೆಲ ಸ್ನೇಹಿತರು, ಸಂಬಂಧಿಕರು ಪ್ರಶ್ನಿಸಿದರು. ಮನಸ್ಸು ಮಾಡಿದರೆ ಅಸಾಧ್ಯವಾದುದು ಯಾವುದೂ ಇಲ್ಲ ಎನ್ನುವುದು ಸೌಜನ್ಯ ಮಾತು.
ಜನತೆ ಮುಂಜಾನೆ ಅಗತ್ಯ ವಸ್ತುಗಳು ಸಿಗುತ್ತದೋ ಇಲ್ಲವೋ ಎಂಬಂತೆ ಮುಗಿ ಬೀಳುತ್ತಿದ್ದಾರೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸೋಂಕು ಹಚ್ಚಿಸಿಕೊಳ್ಳುತ್ತಿದ್ದಾರೆ.
ದಯಮಾಡಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಸಾಧ್ಯವಾದಷ್ಟೂ ಮನೆಯಲ್ಲಿರಿ ಎಂದು ಜನತೆಯಲ್ಲಿ ವಿನಂತಿಸಿ ಕೊಳ್ಳುವ ಸೌಜನ್ಯ, ಯುವ ಜನತೆ ಪ್ರಸ್ತುತ ದಿನಗಳಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಜೊತೆ ಸೇವಾ ಚಟುವ ಟಿಕೆಗಳಲ್ಲಿ ಪಾಲ್ಗೊಂಡರೆ ಉತ್ತಮ ಎಂದು ಅಭಿಪ್ರಾಯಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ನಲ್ಲಿ ಅಂತಿಮ ವರ್ಷದ ಬಿ.ಎಸ್ಸಿ. ಓದುತ್ತಿರುವ ಸೌಜನ್ಯ ಷಡಕ್ಷರಿ ಅಜ್ಜಂಪುರಶೆಟ್ರು ಅವರು ಸಹೋದರಿ ಅನನ್ಯ ಸಹ ಇದೀಗ ಅಕ್ಕನ ಜೊತೆ ಹೆಜ್ಜೆ ಹಾಕುತ್ತಿದ್ದಾರೆ. ಅಕ್ಕನಿಗೆ ಸಹಾಯ ಮಾಡುತ್ತಿದ್ದಾಳೆ. ಈ ಮೂಲಕ ತನ್ನ ತಾಯಿಗೆ ಗಂಡು ಮಕ್ಕಳಿಲ್ಲ ಎಂಬ ಕೊರತೆಯನ್ನು ನೀಗಿಸುತ್ತಿದ್ದಾರೆ ಎನ್ನಬಹುದು.
ದಾವಣಗೆರೆ ನಗರಸಭೆಯ ಮಾಜಿ ಉಪಾಧ್ಯಕ್ಷರಾಗಿದ್ದ ಅಜ್ಜಂಪುರಶೆಟ್ರು ಸುಶೀಲಮ್ಮ ವರಸೆಯಲ್ಲಿ ಸೌಜನ್ಯಳಿಗೆ ಅಜ್ಜಿ. ಅಜ್ಜಂಪುರ ಶೆಟ್ರು ಮನೆತನ ತಮ್ಮ ಮನೆಯ ಹಿರಿಯರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿಕೊಂಡು ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಿದೆ. ಕಳೆದ ವರ್ಷ ಕೊರೊನಾ ಮಹಾಮಾರಿ ಅಪ್ಪಳಿಸಿದಾಗ ತಮ್ಮ ಟ್ರಸ್ಟ್ ವತಿಯಿಂದ ಅಶಕ್ತರಿಗೆ ಆಹಾರ ಧಾನ್ಯಗಳ ಕಿಟ್ ಗಳೊಂದಿಗೆ ಒಂದಿಷ್ಟು ಧನ ಸಹಾಯ ಮಾಡಿದ್ದರು. ಇಂತಹ ಹಿನ್ನೆಲೆ ಮತ್ತು ಮನೆಯಲ್ಲಿನ ಶರಣ ಪರಂಪರೆಯ ವಾತಾವರಣಲ್ಲಿ ಬೆಳೆದ ಸೌಜನ್ಯ ಯುವ ಜನಾಂಗಕ್ಕೆ ಮಾದರಿ ಎನ್ನಬಹುದು.