ಹೊನ್ನಾಳಿಯಲ್ಲಿ ವಲಸೆ ಕಾರ್ಮಿಕರಿಗೆ ರಕ್ಷಣಾ ಮತ್ತು ನೈರ್ಮಲ್ಯೀಕರಣದ ಕಿಟ್ ಮತ್ತು ಫುಡ್‌ಕಿಟ್ ವಿತರಣೆ
ಹೊನ್ನಾಳಿ, ಜು.29- ಕಾರ್ಮಿಕ ಇಲಾಖೆಯಲ್ಲಿರುವ ಸೌಲಭ್ಯಗಳನ್ನು ಕಡ್ಡಾಯವಾಗಿ ಅರ್ಹ ಫಲಾನುಭವಿಗಳಿಗೆ ಸಿಗುವಂತೆ ಕಾರ್ಮಿಕ ಇಲಾಖಾಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಹೊನ್ನಾಳಿಯ ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಅರ್ಚನಾ ಕೆ. ಉನ್ನಿತಾನ್ ತಿಳಿಸಿದರು.
ಜೀನಹಳ್ಳಿ ಕ್ರಾಸ್‍ನ ಶ್ರೀ ರೇವಣಸಿದ್ದೇಶ್ವರ ಸ್ಟೋನ್ ಕ್ರಷಿಂಗ್‍ನಲ್ಲಿ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರಿಗೆ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಕ್ಷಣಾ ಮತ್ತು ನೈರ್ಮಲ್ಯೀಕರಣದ ಕಿಟ್ ಮತ್ತು ಫುಡ್‌ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಗಸ್ಟ್ 14 ರಂದು ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ನ್ಯಾಯಾಲಯದ ಆವರಣದಲ್ಲಿ ಮೆಗಾ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಈ ಅದಾಲತ್‍ನಲ್ಲಿ ಬಾಕಿಯಿರುವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಅದಾಲತ್‍ನಲ್ಲಿ ಹಣಕಾಸಿಗೆ ಸಂಬಂಧಿಸಿದ ವ್ಯಾಜ್ಯಗಳು, ಚೆಕ್ಕು ಅಮಾನ್ಯ, ಬ್ಯಾಂಕ್ ಸಾಲ, ಆಸ್ತಿ ಪ್ರಕರಣಗಳು, ಭೂ ಸ್ವಾಧೀನ, ಜೀವನಾಂಶ ಪ್ರಕರಣಗಳು, ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳುವ ಅವಕಾಶವಿದೆ. ಇದರಿಂದ ಕಕ್ಷಿದಾರರ ಹಣ, ಸಮಯ ಮತ್ತು ಸಂಬಂಧಗಳನ್ನು ಉಳಿಸಿಕೊಂಡು ಸಮಾಜದಲ್ಲಿ ಸೌಹಾರ್ದತೆಯಿಂದ ಜೀವನ ನಡೆಸಬಹುದಾಗಿದೆ ಎಂದು ವಿವರಿಸಿದರು.
ಲೋಕ ಅದಾಲತ್‍ನಲ್ಲಿ ಒಮ್ಮೆ ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಂಡ ವ್ಯಾಜ್ಯಗಳಿಗೆ ದೇಶದ ಯಾವುದೇ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ. ರಾಜೀ ಸಂಧಾನದ ಮೂಲಕ ಇತ್ಯರ್ಥವಾಗುವ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಪಾವತಿಸಿದ ಶುಲ್ಕವನ್ನು ಮರಳಿ ಪಡೆಯಬಹುದು ಎಂದರು.
ವಕೀಲರಾದ ಬಿ. ಉಮೇಶ್ ಮಾತನಾಡಿ, ಶ್ರಮಿಕ ವರ್ಗ ಇಲ್ಲದಿದ್ದರೆ ಸುಂದರ ಸಮಾಜ ನಿರ್ಮಾಣ ಅಸಾಧ್ಯವಾಗಿದ್ದು ಕಾರ್ಮಿಕ ಇಲಾಖಾಧಿಕಾರಿಗಳು ಅರ್ಹ ಕಾರ್ಮಿಕರಿಗೆ ಇಲಾಖೆಯಲ್ಲಿರುವ ಸೌಲಭ್ಯಗಳ ಮಾಹಿತಿ ನೀಡಿ, ಅವರು ಇಲಾಖೆಯಲ್ಲಿರುವ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಕಾರ್ಮಿಕ ನಿರೀಕ್ಷಕ ರಾಜಶೇಖರಯ್ಯ ಹಿರೇಮಠ, ವಕೀಲ ಎಸ್.ಎನ್. ಪ್ರಕಾಶ್, ವಕೀಲರ ಸಂಘದ ಉಪಾಧ್ಯಕ್ಷ ಉಮಾಕಾಂತ್ ಜೋಯಿಸ್ ಮಾತನಾಡಿದರು.
ಶ್ರಮಜೀವಿ ಕಟ್ಟಡ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಕೋರಿ ಯೋಗೀಶ್ ಕುಳಗಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ನ್ಯಾಯಾಲಯದ ಸಿಬ್ಬಂದಿ ಪುಟ್ಟಕೆಂಚಪ್ಪ, ಸಂತೋಷ್, ಕ್ರಶರ್ ಮಾಲೀಕರಾದ ಧನಂಜಯ ಪಾಟೀಲ್, ಗದ್ದಿಗೇಶ್ ಪಾಟೀಲ್, ಸುಮಾ ಡಿ.ಪಾಟೀಲ್, ವ್ಯವಸ್ಥಾಪಕ ಬಿ.ಎನ್. ರಾಜು, ಸಿಬ್ಬಂದಿ ಬಸವರಾಜ್, ಅಪೂರ್ವ ಬಿಸ್ವಾಸ್, ಸಂತೋಷ್, ಚಂದ್ರು ಮತ್ತಿತರರು ಉಪಸ್ಥಿತರಿದ್ದರು.