ಹರಿಹರ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ರೋಗಿಗಳ ಪರದಾಟ

ಕಳೆದ ಬಾರಿ ಕೊರೊನಾ ಬಂದು ಹೋಗಿದ್ದರೂ, ಹರಿಹರ ತಾಲ್ಲೂಕು ಆಸ್ಪತ್ರೆಯಲ್ಲಿ ಯಾವುದೇ ಸೌಲಭ್ಯಗಳನ್ನು ಹೆಚ್ಚಿಸದಿರುವುದು ಸಾರ್ವಜನಿಕರನ್ನು  ಆತಂಕಕ್ಕೀಡು ಮಾಡಿದೆ.

ಸರ್ಕಾರದ ಇತ್ತೀಚಿನ ಆದೇಶದಂತೆ ತಾಲ್ಲೂಕು ಆಸ್ಪತ್ರೆಗೆ 100 ಬೆಡ್‌ನ ಸೌಲಭ್ಯದ ಆದೇಶವಾಗಿದ್ದರೂ ಸಹ ಈಗಿನ ಮಾನದಂಡದ ಪ್ರಕಾರ ಅದಕ್ಕೆ ಪೂರಕವಾದ ಮೂಲಭೂತ ಸೌಕರ್ಯಗಳ ಕೊರತೆ ಇದೆ. ವೆಂಟಿಲೇಟರ್ ಸೌಲಭ್ಯವಿದ್ದರೂ ಸಹ ಅದರ ನಿರ್ವಹಣೆಗಾಗಿ  9 ಸಿಬ್ಬಂದಿಗಳ ಅಗತ್ಯವಿದೆ. ಸಿಬ್ಬಂದಿ ಕೊರತೆಯಿಂದ ವೆಂಟಿಲೇಟರ್ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಸದ್ಯಕ್ಕೆ ಇರುವುದು 50 ಬೆಡ್‌ಗಳು ಮಾತ್ರ. ತಾಲ್ಲೂಕಿನ ಜನಸಂಖ್ಯೆ  2.10 ಲಕ್ಷಕ್ಕೂ ಹೆಚ್ಚು ಇದೆ. ತಾಲ್ಲೂಕಿನಲ್ಲಿ ಸದ್ಯ ಸಕ್ರಿಯ ಕೊರೊನಾ ರೋಗಿಗಳ ಪ್ರಕರಣ 405 ಇದೆ. ಗುತ್ತೂರು ಕೋವಿಡ್ ಕೇರ್ ಸೆಂಟರ್‌ನಲ್ಲಿ 63 ರೋಗಿಗಳಿಗೆ ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ 56 ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಉಳಿದ ಸೋಂಕಿತರಿಗೆ  ಹೋಂ  ಐಸೋಲೇಷನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈಗಾಗಲೇ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 50 ಕ್ಕೂ ಹೆಚ್ಚು ರೋಗಿಗಳಿಗೆ ಊಟ, ಔಷಧಿ, ಆಕ್ಸಿಜನ್ ನೀಡಲಾಗಿದೆ. ಇವರಿಗೆ 14 ದಿನಗಳ ಚಿಕಿತ್ಸೆ ನೀಡಬೇಕಾಗಿರುತ್ತದೆ. ನಿನ್ನೆ ಒಂದೇ ದಿನ 127 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಚಿಕಿತ್ಸೆಗೆಂದು ಹರಿಹರದ ಆಸ್ಪತ್ರೆಗೆ ದಾಖಲಾದರೆ ಇವರಿಗೆ ಚಿಕಿತ್ಸೆ ಎಲ್ಲಿ ಕೊಡಲಾಗುವುದೋ ಗೊತ್ತಿಲ್ಲ.

ಎಮರ್ಜೆನ್ಸಿ ವಾರ್ಡ್‌ನಲ್ಲೇ ಕೊರೊನಾ ರೋಗಿಗಳಿಗೆ ಚಿಕಿತ್ಸೆಗೆ ದಾಖಲು ಮಾಡಿ, ಆಕ್ಸಿಜನ್ ನೀಡಲಾಗಿದೆ. ರೋಗಿಗಳ ಕುಟುಂಬ ಸದಸ್ಯರೊಬ್ಬರು ಹೇಳುವ ಪ್ರಕಾರ ಕಳೆದ ಮೂರು ದಿನಗಳಿಂದ ಆಕ್ಸಿಜನ್ ನೀಡಿರಲಿಲ್ಲ. ಇಂದು ನಾವೇ ಹೊರಗಡೆಯಿಂದ ಆಕ್ಸಿಜನ್ ಮಿಷಿನ್ ತೆಗೆದುಕೊಂಡು ಬಂದೆವು. ನಂತರದಲ್ಲಿ ಇಲ್ಲಿನ ವೈದ್ಯರು ಆಕ್ಸಿಜನ್ ನೀಡಿದರು ಎಂದು ಹೇಳುತ್ತಾರೆ.

ಇನ್ನು ಆಸ್ಪತ್ರೆಯ ಆವರಣದಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಜೊತೆಗೆ ಅವರ ಕುಟುಂಬದ ಸದಸ್ಯರು ಕೂಡ ಕೋವಿಡ್ ಸೆಂಟರ್‌ನಲ್ಲಿ ಠಿಕಾಣಿ ಹೂಡಿದ್ದು, ರೋಗಿಗಳಾರು? ಕುಟುಂಬದ ಸದಸ್ಯರಾರು ಒಂದೂ ತಿಳಿಯದಾಗಿದೆ. ಕೊರೊನಾ ಭಯವಿಲ್ಲದೆ, ಸಾರ್ವಜನಿಕರ ಓಡಾಟ ನಿರಾತಂಕವಾಗಿಯೇ ಇದೆ.

ಇದನ್ನು ಗಮನಿಸಿದ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಕೀಯ ಅಧಿಕಾರಿ ಡಾ. ಹನುಮನಾಯ್ಕ್ ಜೊತೆಗೆ ಮಾತ ನಾಡಿ, ಸಾರ್ವಜನಿಕರನ್ನು ಹೊರಗಡೆ ಕಳಿಸಲು ಸೂಚಿಸಿದರು. ಸಾರ್ವಜನಿಕರು ಇದಕ್ಕೆ ಬಗ್ಗದಿದ್ದಾಗ ಸಿಪಿಐ ಸತೀಶ್ ಕುಮಾರ್ ಅವರಿಗೆ ಕರೆ ಮಾಡಿ, ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಿ, ಸಾರ್ವಜನಿಕರನ್ನು ನಿಯಂತ್ರಿಸುವ ವ್ಯವಸ್ಥೆ ಮಾಡುವಂತೆ ತಿಳಿಸಿದರು.

ಮಗುವಿಗೆ ಕೊರೊನಾ ಬಂದಿದೆ. ಚಿಕಿತ್ಸೆ ಕೊಡಿಸಲು ಬೆಡ್‌ ಸಿಗುತ್ತಿಲ್ಲ. ಬೆಡ್‌ ಕೊಡಿಸಿ ಎಂದು ಆಸ್ಪತ್ರೆಗೆ ಭೇಟಿ ನೀಡಿದ್ದ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪನವರ ಬಳಿ ತಾಯಿಯೊಬ್ಬಳು ತನ್ನ ಅಳಲನ್ನು ತೋಡಿಕೊಂಡಾಗ, ಇಲ್ಲಿ ಬೆಡ್ ಖಾಲಿ ಇರದ ಕಾರಣ ಬೇರೆ ಆಸ್ಪತ್ರೆಗೆ ದಾಖಲಿಸುವಂತೆ ಹೇಳಿ ಕಳುಹಿಸಿದ ಘಟನೆಯೂ ನಡೆಯಿತು.

ಇದೇ ವೇಳೆ ರಕ್ತ ತಪಾಸಣೆ ಸಿಬ್ಬಂದಿಗಳಾದ ಅಶ್ರಫ್ ಅಲಿ ಮತ್ತು ವಿಜಯಕುಮಾರ್ ಮಾತನಾಡಿ, ಪ್ರತಿದಿನ ಇಲ್ಲಿ ಸುಮಾರು 80 ಮಂದಿಗೆ ಗಂಟಲು ದ್ರವ ಪರೀಕ್ಷೆ ನಡೆಯುತ್ತಿದ್ದು, ಈ ಡಾಟಾ ಎಂಟ್ರಿ ಮಾಡುವುದಕ್ಕೆ ಒಬ್ಬ ಸಿಬ್ಬಂದಿಯ ಅವಶ್ಯಕತೆ ಇದ್ದು, ಕಲ್ಪಿಸಿಕೊಡುವಂತೆ ಮನವಿ ಮಾಡಿದರು. ಈ ಕ್ಷಣದಲ್ಲಿ ಡಾಟಾ ಎಂಟ್ರಿ ಮಾಡು ವುದಕ್ಕೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗುತ್ತದೆ ಎಂದು ಡಾ. ಹನುಮನಾಯ್ಕ್ ಹೇಳಿದರು. 

ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಆಸ್ಪತ್ರೆ ಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರಿಗೆ ಪಾಸಿಟಿವ್ ಬಂದಿರುವುದರಿಂದ ಅಲ್ಲಿನ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಸಮಸ್ಯೆ ಎದುರಾಗುತ್ತಿದೆ. ಸಾರ್ವಜ ನಿಕರು ಸರ್ಕಾರದ ಕೋವಿಡ್ ನಿಯಮಗಳನ್ನು ಕಡ್ಡಾ ಯವಾಗಿ ಪಾಲಿಸುವ ಮೂಲಕ ತಮ್ಮ ಆರೋಗ್ಯದ ಕಡೆ ನಿಗಾವಹಿಸುವಂತೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಮೋಹನ್ ತಿಳಿಸಿದ್ದಾರೆ.


– ಚಿದಾನಂದ್ ಎಂ. ಕಂಚಿಕೇರಿ,
[email protected]

error: Content is protected !!