ಮಲೇಬೆನ್ನೂರು, ಮೇ 17- ಭತ್ತದ ಕಣಜ ಎಂದೇ ಖ್ಯಾತಿ ಪಡೆದಿರುವ ಹರಿಹರ ತಾಲ್ಲೂಕಿನಲ್ಲಿ ಸುಮಾರು 14 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, ಈ ವರ್ಷ ಉತ್ತಮ ಇಳುವರಿ ನಿರೀಕ್ಷಿಸಲಾಗಿದೆ.
ಬೆಳೆ ಚೆನ್ನಾಗಿ ಬಂದಿದ್ದು, ಆದರೆ ಭತ್ತಕ್ಕೆ ಸೂಕ್ತ ಬೆಲೆ ಇಲ್ಲದೆ, ರೈತರು ಚಿಂತೆಗೀಡಾಗಿದ್ದಾರೆ. ದಾವಣಗೆರೆ ಜಿಲ್ಲೆಯ ದಾವಣಗೆರೆ, ಹರಿಹರ, ಹೊನ್ನಾಳಿ, ಚನ್ನಗಿರಿ ಮತ್ತು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಸ್ವಲ್ಪ ಭಾಗದಲ್ಲಿ ಭದ್ರಾ ಅಚ್ಚುಕಟ್ಟು ಇದ್ದು, ಈ ಬಾರಿ ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಅವರ ಕಾಳಜಿಯಿಂದಾಗಿ ಅಚ್ಚುಕಟ್ಟಿನ ಎಲ್ಲಾ ರೈತರ ಭತ್ತದ ಬೆಳೆ ಸಮೃದ್ಧವಾಗಿದೆ.
ಈಗಾಗಲೇ ಎಲ್ಲಾ ಕಡೆ ಭತ್ತದ ಕಟಾವು ನಿಧಾನವಾಗಿ ಆರಂಭವಾಗುತ್ತಿದ್ದು, ಭತ್ತಕ್ಕೆ ಬೆಲೆ ಕಡಿಮೆ ಇರುವುದರಿಂದ ಕೆಲ ರೈತರು ಭತ್ತ ಒಣಗಿಸಿ, ದಾಸ್ತಾನು ಮಾಡುವ ಸಿದ್ಧತೆಯಲ್ಲಿದ್ದಾರೆ. ಆರ್ಥಿಕವಾಗಿ ಸಬಲರಾಗಿರದ ರೈತರು ಸಿಕ್ಕ ಬೆಲೆಗೆ ಭತ್ತ ಮಾರಾಟ ಮಾಡಿ, ಸಾಲಗಾರರಿಗೆ ಸಾಲ ತೀರಿಸಬೇಕೆಂಬ ಯೋಚನೆಯಲ್ಲಿದ್ದಾರೆ.
ಸದ್ಯ ಮಾರುಕಟ್ಟೆಯಲ್ಲಿ ಆರ್ಎನ್ಆರ್ ಭತ್ತಕ್ಕೆ ಕ್ವಿಂಟಾಲ್ಗೆ 1450 ರಿಂದ 1550 ರೂ, ಸೋನಾ ಭತ್ತಕ್ಕೆ ಕ್ವಿಂಟಾಲ್ಗೆ 1500 ರಿಂದ 1600 ರೂ. ಮತ್ತು ಶ್ರೀರಾಮ್ ಭತ್ತಕ್ಕೆ ಕ್ವಿಂಟಾಲ್ಗೆ 1900 ರಿಂದ 2 ಸಾವಿರ ರೂ. ದರ ಇದ್ದು, ಇದು ರೈತರಿಗೆ ನಷ್ಟವಾಗುವ ದರವಾಗಿರುತ್ತದೆ ಎಂದು ರೈಸ್ಮಿಲ್ ಮಾಲೀಕ ಯಕ್ಕನಹಳ್ಳಿ ಬಸವರಾಜಪ್ಪ ಅವರ ಅಭಿಪ್ರಾಯವಾಗಿದೆ.
ಮಹಾಮಾರಿ ಕೊರೊನಾ ಲಾಕ್ಡೌನ್ನಿಂದಾಗಿ ಅಕ್ಕಿಗೆ ಬೇಡಿಕೆ ಇಲ್ಲದಿರುವುದರಿಂದ ದಲ್ಲಾಳಿಗಳು, ರೈಸ್ಮಿಲ್ ಮಾಲೀಕರು ಭತ್ತವನ್ನು ಕಡಿಮೆ ದರಕ್ಕೆ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರವು ಪಡಿತರ ಚೀಟಿಗೆ ವಿತರಿಸುವ ಅಕ್ಕಿಯನ್ನು ಹೆಚ್ಚಿಸುವುದು ಮತ್ತು ಮದುವೆ, ಸಭೆ, ಸಮಾರಂಭ, ರಾಜಕೀಯ ಸಮಾವೇಶಗಳು, ಹೋಟೆಲ್, ಡಾಬಾ, ಹಾಸ್ಟೆಲ್ಗಳು ಬಂದ್ ಆಗಿರುವುದರಿಂದ ರೈತ ಬೆಳೆದ ಎಲ್ಲಾ ಬೆಳೆಗಳಿಗೆ ಬೇಡಿಕೆ ಇರದ ಕಾರಣ ದರವೂ ಕಡಿಮೆ ಆಗಲು ಪ್ರಮುಖ ಕಾರಣವಾಗಿದೆ ಎಂದು ರೈಸ್ ಮಾಲೀಕರೂ ಆದ ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ ಹೇಳಿದರು.
ರೈತರು ಭತ್ತವನ್ನು ಚೆನ್ನಾಗಿ ಒಣಗಿಸಿ, ಗುಣಮಟ್ಟ ಕಾಪಾಡಿದರೆ ಮಾತ್ರ ದಾಸ್ತಾನು ಮಾಡುವ ವರ್ತಕರು, ರೈಸ್ಮಿಲ್ ಮಾಲೀಕರು ಲಾಕ್ಡೌನ್ ಮುಗಿದ ನಂತರ ಸೂಕ್ತ ದರ ನೀಡಿ, ಭತ್ತದ ಖರೀದಿಗೆ ಮುಂದಾಗುತ್ತಾರೆ. ರೈತರು ಹಸಿ-ಬಿಸಿ ಭತ್ತವನ್ನು ಖರೀದಿಗೆ ಕೊಡಲು ಮುಂದಾದರೆ ಸಹಜವಾಗಿ ದರ ಕಡಿಮೆ ಆಗುತ್ತದೆ. ಇದರಿಂದ ರೈತರ ನಷ್ಟವಾಗುತ್ತದೆ ಎಂದು ನಾವೇ ಭತ್ತ ಖರೀದಿಗೆ ಮುಂದಾಗಿಲ್ಲ ಎಂದು ಭತ್ತ ಖರೀದಿದಾರರಾದ ಚಿಟ್ಟಕ್ಕಿ ನಾಗರಾಜ್, ಚಿಟ್ಟಕ್ಕಿ ರಮೇಶ್ ತಿಳಿಸಿದರು.
ಹೋಬಳಿಗಳಲ್ಲಿ ಖರೀದಿ ಕೇಂದ್ರ ತೆರೆಯಲು ಒತ್ತಾಯ
ರಾಜ್ಯ ಸರ್ಕಾರ ಕೂಡಲೇ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಜಿಲ್ಲೆಯ ತಾಲ್ಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಭತ್ತ ಖರೀದಿ ಕೇಂದ್ರ ತೆರೆದರೆ ರೈತರಿಗೆ ಅನುಕೂಲವಾಗಲಿದೆ. ಹೊರಗಡೆ ಭತ್ತ ಖರೀದಿಸುವವರು ಕಡಿಮೆ ದರಕ್ಕೆ ಕೇಳುತ್ತಿರುವುದರಿಂದ ರೈತರಿಗೆ ನಷ್ಟವಾಗಲಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ತಕ್ಷಣ ಭತ್ತ ಖರೀದಿಗೆ ಮುಂದಾದರೆ, ರೈತರ ಕೈ ಹಿಡಿದಂತಾಗುತ್ತದೆ. ರೈತರ ನೋಂದಣಿಗೆ ಮೇ 30 ರವರೆಗೂ ಅವಕಾಶ ನೀಡಬೇಕೆಂದು ಹರಿಹರ
ಎಪಿಎಂಸಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್ ಒತ್ತಾಯಿಸಿದ್ದಾರೆ.
ಹೊರಗಡೆ ಜಿಲ್ಲೆಯ ರೈಸ್ಮಿಲ್ನವರು ಭತ್ತವನ್ನು ಕಡಿಮೆ ರೇಟಿಗೆ ಕೇಳುತ್ತಿದ್ದಾರೆ. ಲಾಕ್ಡೌನ್ ಮುಗಿದ ನಂತರ ಅಕ್ಕಿ ಮಾರುಕಟ್ಟೆ ಓಪನ್ ಆದರೆ ಅಕ್ಕಿಗೆ ಸಹಜವಾಗಿ ಬೇಡಿಕೆ ಬರುತ್ತದೆ. ಆಗ ಭತ್ತಕ್ಕೆ ಬೇಡಿಕೆ ಬರಲಿದೆ. ಅಲ್ಲಿಯವರೆಗೆ ರೈತರು ಭತ್ತವನ್ನು ಒಣಗಿಸಿ ಇಟ್ಟುಕೊಳ್ಳುವುದು ಸೂಕ್ತ ಎಂದು ಚಿಟ್ಟಕ್ಕಿ ನಾಗರಾಜ್ ಮನವಿ ಮಾಡಿದ್ದಾರೆ.
ನೋಂದಣಿ ಆಗದ ರೈತರು: ಹಿಂಗಾರು ಹಂಗಾಮಿನ ಬೆಳೆಗಳನ್ನು ಖರೀದಿ ಕೇಂದ್ರದ ಮೂಲಕ ಖರೀದಿಸಲು ರೈತರು ತಮ್ಮ ಹೆಸರು ನೋಂದಾಯಿಸಲು ಸರ್ಕಾರ ಮೇ 5 ರವರೆಗೆ ಅವಕಾಶ ನೀಡಿತ್ತು. ಆದರೆ. ಹರಿಹರ ತಾಲ್ಲೂಕಿನಲ್ಲಿ ಒಬ್ಬ ರೈತರು ಇದುವರೆಗೂ ನೋಂದಣಿ ಮಾಡಿಕೊಂಡಿಲ್ಲ. ಮೇ 30 ರವರೆಗೆ ನೋಂದಣಿಗೆ ಅವಕಾಶ ನೀಡಿರುವ ಬಗ್ಗೆ ನಮಗೆ ಸರ್ಕಾರದಿಂದ ಅಧಿಕೃತ ಆದೇಶ ಬಂದಿಲ್ಲ.
ಈಗಾಗಲೇ ನೋಂದಣಿ ಆಗಿರುವ ರೈತರ ಬೆಳೆ ಖರೀದಿಸಲು ಜೂನ್ 30 ರವರೆಗೆ ಅವಕಾಶ ಇದೆ ಎಂದು ಹರಿಹರ ಭತ್ತ ಖರೀದಿ ಕೇಂದ್ರದ ಅಧಿಕಾರಿ ರಾಜಶೇಖರಯ್ಯ ‘ಜನತಾವಾಣಿ’ ಗೆ ತಿಳಿಸಿದ್ದಾರೆ.
ಅಲ್ಲದೆ, ಸರ್ಕಾರ ಈ ವರ್ಷ ಭತ್ತ ಖರೀದಿಗೆ ದರವನ್ನೂ ನಿಗದಿ ಮಾಡಿಲ್ಲ. ಕಳೆದ ವರ್ಷ ಸಾಮಾನ್ಯ ಭತ್ತಕ್ಕೆ 1668 ರೂ. ಮತ್ತು ಎ ಗ್ರೇಡ್ ಭತ್ತಕ್ಕೆ 1688 ರೂ. ನಿಗದಿ ಮಾಡಿತ್ತು ಎಂದು ಹೇಳಲಾಗಿದೆ.
ಖರೀದಿ ಕೇಂದ್ರ ಬಂದ್: ಇನ್ನೊಂದು ಮೂಲದ ಪ್ರಕಾರ ರಾಜ್ಯದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸರ್ಕಾರ ಭತ್ತ ಖರೀದಿ ಕೇಂದ್ರಗಳನ್ನು ಹಠಾತ್ ಬಂದ್ ಮಾಡಿದೆ ಎಂದು ತಿಳಿದು ಬಂದಿದೆ.
ಅಲ್ಲಿಯ ಭತ್ತಕ್ಕೆ ಸರ್ಕಾರ ಪ್ರತಿ ಕ್ವಿಂಟಾಲ್ಗೆ 1,886 ರೂ. ಬೆಂಬಲ ಬೆಲೆ ಘೋಷಿಸಿತ್ತು. ಖರೀದಿ ಕೇಂದ್ರ ತೆರೆಯದ ಕಾರಣ ದಲ್ಲಾಳಿಗಳು 1,400 ರೂ. ಗಿಂತ ಕಡಿಮೆ ಬೆಳೆಗೆ ಕೇಳುತ್ತಿದ್ದಾರೆ. ರೈಸ್ಮಿಲ್ನವರು ಸಹ ಭತ್ತ ಖರೀದಿಸಲು ಹಿಂದೇಟು ಹಾಕುತ್ತಿರುವುದರಿಂದ ಕೂಡಲೇ ಸರ್ಕಾರ ಭತ್ತ ಖರೀದಿ ಕೇಂದ್ರ ಆರಂಭಿಸಿ, ರೈತರ ನೆರವಿಗೆ ಬರಬೇಕೆಂದು ಹಕ್ಕೊತ್ತಾಯ ಮಾಡಿದ್ದಾರೆ ಅಲ್ಲಿನ ರೈತರು.
ಸಚಿವರ ಹೇಳಿಕೆ: ಇದರ ನಡುವೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರಾದ ಉಮೇಶ್ ಕತ್ತಿ ಅವರು, ಸರ್ಕಾರದ ಬಳಿ ದುಡ್ಡಿಲ್ಲ. ಕೋವಿಡ್ ಕಾರಣದಿಂದ ಸದ್ಯ ಭತ್ತ ಖರೀದಿ ಕೇಂದ್ರ ಬಂದ್ ಮಾಡಲಾಗಿದೆ. ಪರಿಸ್ಥಿತಿ ಸಹಜವಾದ ನಂತರ ಖರೀದಿ ಕೇಂದ್ರ ತೆರೆಯಲಾಗುವುದು ಎಂಬ ಹೇಳಿಕೆ ನೀಡಿದ್ದಾರೆ.
ಕೋವಿಡ್ ಸಂಕಷ್ಟ ಕಾಲದಲ್ಲೂ ತೆಲಂಗಾಣ ಸರ್ಕಾರ, ಅಲ್ಲಿನ ರೈತರ ಎಲ್ಲಾ ರೀತಿಯ ಉತ್ಪನ್ನಗಳನ್ನು ಬೆಂಬಲ ಬೆಲೆಗೆ ಖರೀದಿಸಲು 32 ಸಾವಿರ ಕೋಟಿ ರೂ. ಹಣವನ್ನು ತೆಗೆದಿರಿಸಿ ಅವರ ನೆರವಿಗೆ ಬಂದಿದೆ. ನಮ್ಮ ರಾಜ್ಯ ಸರ್ಕಾರವೂ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಮಾನ್ಯತೆ ಭತ್ತಕ್ಕೆ ಒತ್ತು ಕೊಡಿ: ರೈತರು ಕೃಷಿ ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದ ಭತ್ತದ ತಳಿಗಳನ್ನು ಬೆಳೆಯಲು ಒತ್ತು ಕೊಡಬೇಕು. ಈ ತಳಿಗಳಿಗೆ ಪ್ರಕೃತಿ ವಿಕೋಪವನ್ನು ತಡೆದುಕೊಳ್ಳುವ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ಆದರೆ ನಮ್ಮ ರೈತರು ಹೆಚ್ಚು ದರ ಸಿಗುವ ಭತ್ತ ಬೆಳೆಯಲು ಹೋಗಿ ಕೈ ಸುಟ್ಟುಕೊಳ್ಳುತ್ತಾರೆ. ಆರ್ಎನ್ಆರ್ ಭತ್ತಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ದರ ಇದೆ. ಇದು ರೈತರಿಗೆ ನಷ್ಟ ಮಾಡುವುದಿಲ್ಲ ಎಂಬುದು ಹರಿಹರ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಗೋವರ್ಧನ್ ಅವರ ಸಲಹೆ ಆಗಿದೆ.
ನೆರವು ನೀಡಲಿ: ಬರೀ ಭತ್ತ ಬೆಳೆದ ರೈತನಿಗೆ ಅಷ್ಟೇ ತೊಂದರೆ ಆಗಿಲ್ಲ. ಹಣ್ಣು, ತರಕಾರಿ, ಹೂವು, ತೆಂಗಿನಕಾಯಿ ಸೇರಿದಂತೆ ಎಲ್ಲಾ ಬೆಳೆ ಬೆಳೆಯುವ ರೈತರಿಗೂ ಬಹಳ ನಷ್ಟವಾಗಿದೆ. ಸರ್ಕಾರ ಇಂತಹ ಸಂದರ್ಭದಲ್ಲಿ ರೈತರಿಗೆ ನೆರವಾಗಬೇಕೆಂಬುದು ಹೂ ಬೆಳೆಗಾರ ನಿಟ್ಟೂರಿನ ಇಟಗಿ ಶಿವಣ್ಣ ಅವರ ಕೋರಿಕೆ ಆಗಿದೆ.
– ಜಿಗಳಿ ಪ್ರಕಾಶ್,
[email protected]