ಹರಿಹರ, ಮೇ 17- ಕ್ಷೇತ್ರದ ಜನರಿಗೆ ತಾವು ಬದುಕಿದ್ದೇವೆ ಎಂದು ತಿಳಿಸಲು ನಮ್ಮ ಬಗ್ಗೆ ಟೀಕೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಬಿ.ಪಿ. ಹರೀಶ್ ಪರೋಕ್ಷವಾಗಿ ವಿರೋಧ ಪಕ್ಷದವರಿಗೆ ತಿರುಗೇಟು ನೀಡಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ತರಳ ಬಾಳು ಯುವಕ ಸಂಘ, ತರಳಬಾಳು ಮಹಿಳಾ ಸಂಘ ಹಾಗೂ ತರಳಬಾಳು ಸೇವಾ ಸಮಿತಿಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೊರೊನಾ ವಾರಿಯರ್ಸ್ ಮತ್ತು ರೋಗಿಗಳ ಕುಟುಂಬ, ಪರಿಚಾರಕರಿಗೆ ಒಂದು ತಿಂಗಳವರೆಗೆ ಮಧ್ಯಾ ಹ್ನದ ಉಚಿತ ಊಟ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನನ್ನ ಹುಟ್ಟುಹಬ್ಬದಂದು ನನ್ನ ಅಭಿಮಾನಿಗಳ ಬಳಗದಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿನ ಕೊರೊನಾ ಸೋಂಕಿತರಿಗೆ ಉಚಿತವಾಗಿ 36 ಆಕ್ಸಿಜನ್ ಸಿಲಿಂಡರ್‍ಗಳನ್ನು ನನ್ನ ಸಮ್ಮುಖದಲ್ಲಿಯೇ ನೀಡಲಾಗಿತ್ತು. ಅಂದು ನಾನೇನು ಕೇಕ್ ಕತ್ತರಿಸಿಲ್ಲ, ಪಾರ್ಟಿ ಮಾಡಿಲ್ಲ. ಸಾವು-ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದ ರೋಗಿಗಳನ್ನು ಬದುಕಿಸಲು ಆಕ್ಸಿಜನ್ ನೀಡಿದೆ. ಆದರೆ ಇದನ್ನೇ ಅಪರಾಧ ಎಂಬಂತೆ ಕೆಲವು ರಾಜಕಾರಣಿಗಳು ಟೀಕೆ ಮಾಡುತ್ತಿದ್ದಾರೆ.
ಅವರು ನನಗೆ ಟೀಕೆ ಮಾಡುವುದು ಮುಖ್ಯವಾಗಿಲ್ಲ. ಕ್ಷೇತ್ರದಲ್ಲಿ ಅವರು ಇನ್ನೂ ಬದುಕಿದ್ದಾರೆ ಎಂದು ತೋರಿಸಿಕೊಳ್ಳುವುದಕ್ಕೋ ಸ್ಕರ ಈ ರೀತಿ ನನ್ನ ಮೇಲೆ ಆರೋಪ ಮಾಡುತ್ತಿ ರುತ್ತಾರೆ. ನಾನು ಕಳೆದ 15 ದಿನಗಳಿಂದ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್, ಆಕ್ಸಿಜನ್ ಘಟಕ ಹಾಗೂ ಗ್ರಾಮಾಂತರ ಪ್ರದೇಶಗಳ ಸೋಂಕಿನಿಂದ ಸಾವಿಗೀಡಾದ ಕುಟುಂಬಗಳನ್ನು ಭೇಟಿ ಮಾಡಿ ಅವರಿಗೆ ಧೈರ್ಯ ತುಂಬುತ್ತಿದ್ದೇನೆ. ಇದ್ಯಾವುದನ್ನೂ ಮಾಡದೇ ಇರುವವರು ಇನ್ನೊಬ್ಬರು ಮಾಡುವುದನ್ನು ನೋಡಿ ಸಹಿಸಲಾ ಗದೇ ಟೀಕೆ ಮಾಡುತ್ತಿದ್ದಾರೆ ಎಂದರು.
ಲಭ್ಯವಿರುವ ಐಸಿಯು ಘಟಕ ಪ್ರಾರಂಭಿಸುವಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ದಿನದಲ್ಲಿ ಲಕ್ಷ ಲಕ್ಷ ಕೊಡುತ್ತೇವೆ, ಸೇವೆ ಸಲ್ಲಿಸಲು ಬನ್ನಿ ಎಂದು ವೈದ್ಯರಿಗೆ ಆಹ್ವಾನಿಸಿದರೂ ಯಾರೊಬ್ಬರೂ ಬರುತ್ತಿಲ್ಲ. ಆದರೂ ಸಹ ತಾವು ಸರ್ಕಾರದ ಮೇಲೆ ಒತ್ತಡ ಹಾಕಿ ಆದಷ್ಟು ಶೀಘ್ರವೇ ಐಸಿಯು ಪ್ರಾರಂಭಿಸುತ್ತೇವೆ ಎಂದರು.
ಈ ಆಸ್ಪತ್ರೆಗೆ ಇನ್ನೂ ವೈದ್ಯರು ಮತ್ತು ಸಹಾಯಕಿಯರ ಅವಶ್ಯಕತೆ ಇದೆ. ಕೂಡಲೇ ಜಿಲ್ಲಾಧಿಕಾರಿಗಳು ಉಳಿದ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ನಗರಸಭೆ ಅಧ್ಯಕ್ಷೆ ರತ್ನಾ, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಪೌರಾಯುಕ್ತೆ ಎಸ್. ಲಕ್ಷ್ಮಿ, ವೈದ್ಯಾಧಿಕಾರಿ ಡಾ. ಎಲ್. ಹನುಮಾನಾಯ್ಕ್, ಸಾಧು ವೀರಶೈವ ಸಮಾಜದ ತಾಲ್ಲೂಕು ಅಧ್ಯಕ್ಷ ಮಹಾದೇವಪ್ಪ ಗೌಡ್ರು, ನಗರಸಭೆ ಸದಸ್ಯೆ ಅಶ್ವಿನಿ ಕೃಷ್ಣಾ, ತರಳಬಾಳು ಯುವಕ ಸಂಘದ ಅಧ್ಯಕ್ಷ ವೀರಣ್ಣ ಕೊಂಡಜ್ಜಿ, ಕಾರ್ಯದರ್ಶಿ ಕಿರಣ್ ಮೂಲಿಮನಿ, ಮಹಿಳಾ ಅಧ್ಯಕ್ಷೆ ಗೀತಮ್ಮ ಬೆಳ್ಳೂಡಿ, ತರಳಬಾಳು ಸೇವಾ ಸಮಿತಿಯ ಅಧ್ಯಕ್ಷ ಕೊಂಡಜ್ಜಿ ಶಿವಕುಮಾರ್, ನರೇಂದ್ರ ಬೆಳ್ಳೂಡಿ, ರಾಜು, ಬಿ. ರಾಮಚಂದ್ರಪ್ಪ, ಅಜಿತ್ ಸಾವಂತ್, ಎನ್.ಇ. ಸುರೇಶ್‍ಸ್ವಾಮಿ, ಶಾಂತಕುಮಾರ್, ಮಾರುತಿ ಶೆಟ್ಟಿ, ರಾಜು ರೋಖಡೆ, ಮಂಜುನಾಥ್ ನೆಲ್ಲಿ ಮತ್ತಿತರರು ಹಾಜರಿದ್ದರು.